ಪಾವಗಡದಲ್ಲಿ ಕಾವೇರಿದ ರಾಜಕೀಯ, ಜೋರಾಗಿದೆ ಟಿಕೆಟ್ ಫೈಟ್..!

ಈ ಸುದ್ದಿಯನ್ನು ಶೇರ್ ಮಾಡಿ

Pawagada--01

– ಸಿ.ಎಸ್.ಕುಮಾರ್,ಚೇಳೂರು

ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಗಡಿ ತಾಲ್ಲೂಕಾಗಿರುವ ಪಾವಗಡ ಎಂದರೆ ಮೊದಲು ಕಣ್ಣ ಮುಂದೆ ಬರುವುದು ಬರಡು ಭೂಮಿ, ಪ್ಲೊರೈಡ್‍ಯುಕ್ತ ನೀರು, ನಕ್ಸಲ್ ಚಟುವಟಿಕೆ, ನಿರುದ್ಯೋಗದಂತಹ ಸಮಸ್ಯೆಗಳು. ಇಲ್ಲಿ ಹೊಸದಾಗಿ ಸೋಲಾರ್ ಪಾರ್ಕ್ ಸ್ಥಾಪನೆಯಾದ ನಂತರ ತಾಲ್ಲೂಕಿನ ಚಿತ್ರಣವೇ ಬದಲಾಗಿದೆ. ಈ ಕ್ಷೇತ್ರದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಪ್ಪ ಮಗ ಇಬ್ಬರು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿರುವುದು ಮತ್ತೊಂದು ವಿಶೇಷ. ಪಾವಗಡದಲ್ಲಿ ಇತ್ತೀಚೆಗೆ ಒಂದು ಪಕ್ಷಕ್ಕೆ ಎರಡು ಅವಧಿಗೆ ಅವಕಾಶ ನೀಡಿದ ಉದಾಹರಣೆಯಿಲ್ಲ. ಈ ಬಾರಿ ಜನ ಯಾವ ತೀರ್ಮಾನ ನೀಡುತ್ತಾರೆ ಎಂದು ಗೋತ್ತಿಲ್ಲ. ಆದರೆ ಚುನಾವಣೆಗೆ ಮೊದಲು ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಕುತೂಹಲ ಕೆರಳಿಸಿವೆ.

ಮೂಲತಃ ಕಾಂಗ್ರೆಸ್ಸೆಗರಾಗಿದ್ದ ವೆಂಕಟರವಣಪ್ಪ ಅವರು 2008ರ ಚುನಾವಣೆಯಲ್ಲಿ ಟಿಕೆಟ್ ಸಿಗದೆ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದರು. ಆ ಅವಧಿಯಲ್ಲಿ ಬಹುಮತದ ಕೊರತೆಯಿಂದ ಬಳಲುತ್ತಿದ್ದ ಬಿಜೆಪಿ ಪಕ್ಷೇತರ ಶಾಸಕರನ್ನು ಸೆಳೆದುಕೊಂಡು ಸಚಿವರನ್ನಾಗಿ ಮಾಡಿತ್ತು. ಕಾಂಗ್ರೆಸ್‍ನಲ್ಲೇ ಉಳಿದಿದ್ದರೆ ಜೀವಮಾನದಲ್ಲಿ ಸಚಿವರಾಗುವ ಅವಕಾಶ ಸಿಗುತ್ತಿತ್ತೋ ಇಲ್ವೋ, ಅದೃಷ್ಟ ಒಲಿದು ಬಂದು ವೆಂಕಟರವಣಪ್ಪ ಕೆಲ ಕಾಲ ಸಚಿವರಾಗಿ ಆಡಳಿತ ನಡೆಸಿದರು.

ಬಿಟ್ಟು ಹೋಗಿದ್ದ ಕಾಂಗ್ರೆಸ್‍ಗೆ ಮತ್ತೆ ಮರಳಿದಾದರೂ ಕಾಂಗ್ರೆಸ್ 2013ರಲ್ಲಿ ನೇರವಾಗಿ ವೆಂಕಟರವಣಪ್ಪ ಅವರಿಗೆ ಟಿಕೆಟ್ ನೀಡದೆ, ಅವರ ಪುತ್ರ ಹೆಚ್.ವಿ .ವೆಂಕಟೇಶ್ ಅವರಿಗೆ ಟಿಕೆಟ್ ನೀಡುತ್ತು. 63823 ಮತಗಳನ್ನು ಪಡೆದ ವೆಂಕಟೇಶ್ 4863 ಮತಗಳ ಅಂತರದಲ್ಲಿ ಜೆಡಿಎಸ್ ಅಭ್ಯರ್ಥಿ ತಿಮ್ಮರಾಯಪ್ಪ ವಿರುದ್ಧ ಸೋಲು ಕಂಡರು. ಈಗ ಮತ್ತೊಂದು ಬಾರಿ ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತ ಪಡಿಸಿದ್ದಾರೆ.  ಕೆಲ ಕಾಲ ರಾಜಕೀಯ ವನವಾಸದಲ್ಲಿದ್ದ ವೆಂಟಕರವಣಪ್ಪ ಮತ್ತೆ ಸಕ್ರಿಯರಾಗಿದ್ದಾರೆ. ಕಾಂಗ್ರೆಸ್ ಸೇರಿ ನೇರವಾಗಿ ಪಕ್ಷದಲ್ಲಿ ಗುರುತಿಸಿಕೊಳ್ಳಲಾರಂಭಿಸಿದ್ದಾರೆ. ಹೀಗಾಗಿ ತಮಗೆ ಟಿಕೆಟ್ ನೀಡಬೇಕು ಎಂದು ವೆಂಕಟರವಣಪ್ಪ ಅವರು ತಮ್ಮ ಆಪ್ತರಾದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ.

ತಾಲ್ಲೂಕಿನ ಅಭಿವೃದ್ಧಿಗೆ ವೆಂಕಟರವಣಪ್ಪ ಹಲವಾರು ಯೋಜನೆಗಳನ್ನು ರೂಪಿಸಿದರಾದರು ಅವುಗಳನ್ನು ಯಶಸ್ವಿಯಾಗಿ ಜಾರಿಗೆ ತರಲು ಯಶ ಸಾಧಿಸಲಿಲ್ಲ ಎಂಬ ಆಕ್ಷೇಪವಿದೆ. 30 ವರ್ಷದಿಂದ ರಾಜಕೀಯದಲ್ಲಿ ತಮ್ಮದೇ ಆದ ವರ್ಚಸ್ಸು ಉಳಿಸಿಕೊಂಡಿರುವ ಅವರು, ಸಚಿವರಾಗಿದ್ದು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿಲ್ಲ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ. ಪಾವಗಡ ತಾಲ್ಲೂಕಿನ ಮೂಲ ಸಮಸ್ಯೆ ಎಂದರೆ ನೀರಾವರಿ. ಯಾವ ನದಿಗಳು ಈ ಭಾಗದಲ್ಲಿ ಹರಿಯುವುದಿಲ್ಲ. ಅಂತರ್ಜಲ 1500 ಅಡಿಗೆ ಕುಸಿದಿದೆ. ಆನಂತರ ನೀರು ಸಿಕ್ಕರೂ ಅದು ಕುಡಿಯಲು ಯೋಗ್ಯವಾಗಿಲ್ಲ, ಪ್ಲೊರೈಡ್‍ಯುಕ್ತ ನೀರು ಕುಡಿದು ತಾಲ್ಲೂಕಿನ ಜನ ಆರೋಗ್ಯ ಕೆಡಿಸಿಕೊಳ್ಳುತ್ತಾರೆ. 25 ವರ್ಷದ ಯುವಕರು 50 ವರ್ಷದವರಂತೆ ಕಾಣಲಾರಂಭಿಸಿದ್ದಾರೆ. ಮೂಳೆ ಸವೆತದಂತಹ ಗಂಭೀರ ಸಮಸ್ಯೆಯಿಂದ ಜನ ಬೇಸತ್ತು ಹೋಗಿದ್ದಾರೆ. ಸದಾ ಬರಗಾಲಕ್ಕೆ ತುತ್ತಾಗುವ ಈ ತಾಲ್ಲೂಕಿನಲ್ಲಿ ನಿರುದ್ಯೋಗ ಒಂದು ದೊಡ್ಡ ಸಮಸ್ಯೆಯಾಗಿದೆ. ಇಲ್ಲಿನ ಜನ ಉದ್ಯೋಗಕ್ಕಾಗಿ ವಲಸೆ ಹೋಗುವುದು ಸಾಮಾನ್ಯವಾಗಿದೆ.

ಕಾಂಗ್ರೆಸ್‍ನಲ್ಲಿ ಟಿಕೆಟ್‍ಗಾಗಿ ಅಪ್ಪ ಮಕ್ಕಳ ನಡುವೆ ಪೈಪೋಟಿ ಏರ್ಪಟ್ಟಿದ್ದರೆ ಇನ್ನೊಂದೆಡೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಆಪ್ತ ಹಾಗೂ ಕ್ರೇಡಲ್ ನಾಮ ನಿರ್ದೇಶೀತ ನಿರ್ದೇಶಕ ಬಲರಾಮ್ ತಾಲ್ಲೂಕಿಗೆ ಸೋಲಾರ್ ಪಾರ್ಕ್ ಬರಲು ನಾನೇ ಕಾರಣ, ಈ ಬಾರಿ ಕಾಂಗ್ರೆಸ್ ನನಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ತಿರುಮಣಿ ಸೇರಿದಂತೆ ಕೆಲವು ಹೋಬಳ್ಳಿಗಳಲ್ಲಿ ಹೂಸರಾಗ ಶುರುವಾಗಿದ್ದು, ಈಗ ಇರುವ ನಾಯಕರಿಗಿಂತ ಹೊಸ ಮುಖಗಳಿಗೆ ಮಣೆ ಹಾಕಬೇಕು ಎಂಬ ಬೇಡಿಕೆ ಇದೆ. ಜೆಡಿಎಸ್ ಪಕ್ಷದಲ್ಲಿ ತಿಮ್ಮರಾಯಪ್ಪ ಅವರನ್ನು ಹೊರತು ಪಡಿಸಿದರೆ ಇವರಿಗೆ ಪರ್ಯಾಯವಾಗಿ ಬೇರೆ ನಾಯಕರಿಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ತಿಮ್ಮರಾಯಪ್ಪಎರಡನೇ ಅವಧಿಗೆ ಅಭ್ಯರ್ಥಿಯಾಗುವುದು ಬಹತೇಕ ಖಚಿತವಾಗಿದೆ.

ಇನ್ನು ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಜನಾರ್ದನ ಸ್ವಾಮಿ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ಆರು ತಿಂಗಳಿಂದ ಕ್ಷೇತ್ರದಲ್ಲಿ ಜನಾರ್ದನ ಸ್ವಾಮಿ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ. ಇವರ ಜೊತೆಗೆ ಕೂತ್ತನೂರು ಹನುಮಂತರಾಯಪ್ಪ ಕೂಡ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ. ಬರದ ನಾಡಿಗೆ ಎತ್ತಿನ ಹೊಳೆ ಹಾಗೂ ಭದ್ರ ಮೇಲ್ದಂಡೆ ಯೋಜನೆಯಿಂದ ನೀರು ಹರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ನಡೆದ ಸಮಾವೇಶದಲ್ಲಿ ಹೇಳಿದ್ದಾರೆ. ಹಲವಾರು ವರ್ಷಗಳಿಂದಲೂ ಈ ಎರಡು ಯೋಜನೆಗಳ ಹೆಸರು ಹೇಳಿಕೊಂಡು ಸರ್ಕಾರಗಳು ಪಾವಗಡದ ಜನರನ್ನು ವಂಚಿಸುತ್ತಿವೆ ಎಂಬ ಆಕ್ರೋಶವೂ ಇದೆ. ಚುನಾವಣೆ ಸಂದರ್ಭದಲ್ಲಂತೂ ನೀರಾವರಿ ಯೋಜನೆಗಳ ಬಗ್ಗೆ ಹೆಚ್ಚು ಚರ್ಚೆಯಾಗುತ್ತದೆ. ಉಳಿದಂತೆ ನೆಪ ಮಾತ್ರಕ್ಕೆ ಹೋರಾಟಗಳು ನಡೆದು ತಣ್ಣಗಾಗುತ್ತವೆ.

ಇನ್ನೂ ರಾಜಕೀಯದ ವಿಷಯಕ್ಕೆ ಬಂದರೆ ತಾಲೂಕಿನಲ್ಲಿ 34 ಗ್ರಾಮ ಪಂಚಾಯಿತಿಗಳಿವೆ. ಬಹು ಪಾಲು ಕಾಂಗ್ರೆಸ್ ತೆಕ್ಕೆಯಲ್ಲಿವೆ. ಕಾಂಗ್ರೆಸ್‍ಗೆ 23 ತಾಲ್ಲೂಕ್ ಪಂಚಾಯತ್ ಸದಸ್ಯರಿದ್ದರೆ. ಜಿಲ್ಲಾ ಪಂಚಾಯತ್‍ನಲ್ಲಿ ಕಾಂಗ್ರೆಸ್‍ನ ಆರು ಸದಸ್ಯರಿದ್ದಾರೆ. ಪುರಸಭೆ ಜೆಡಿಎಸ್ ವಶದಲ್ಲಿದೆ. ಟಿ.ಎ.ಪಿ.ಎಮ್.ಎಸ್, ಎ.ಪಿ.ಎಂ.ಸಿ, ಪಿ.ಎಲ್.ಡಿ ಬ್ಯಾಂಕ್‍ಗಳಲ್ಲಿ ಬಹುತೇಕ ಕಾಂಗ್ರೆಸ್ ಪ್ರಾಬಲ್ಯವಿದೆ.

ಒಟ್ಟು ಮತದಾರರು :  194487 / ಪುರುಷರು 99456 / ಮಹಿಳೆಯರು 95028 /

ಜಾತಿವಾರು  : ಎಸ್‍ಸಿ/ಎಸ್ ಟಿ 12000 / ಗೊಲ್ಲರು 25000 / ಕುರುಬರು 20000 / ಮುಸ್ಲಿಮರು 10000 / ರೆಡ್ಡಿ ಮತ್ತು ಒಕ್ಕಲಿಗರು 15000
ಲಿಂಗಾಯತರು 20000 / ಇತರೆ 2487

Facebook Comments

Sri Raghav

Admin