ಯಡಿಯೂರಪ್ಪ ಮಹದಾಯಿ ನೀರು ತಂದ್ರೆನ್ರೀ..? ಪತ್ರ, ಆಶ್ವಾಸನೆ ಎಲ್ಲಾ ಏನಾಯ್ತು..?

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah---Yadiyurappa
ಬೆಂಗಳೂರು, ಜ.28- ಮಹದಾಯಿ, ಕಳಸಾ- ಬಂಡೂರಿ ವಿವಾದದಲ್ಲಿ ಬಿಜೆಪಿಯವರು ಉತ್ತರ ಕುಮಾರನ ಪೌರುಷ ತೋರಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೊಂಬರಾಟ ವಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ನಗರದ ಅಲಸೂರು ಕೆರೆ ಬಳಿ ತಿರುವಳ್ಳುವರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರಿಗೆ ತಿರು ಗೇಟು ನೀಡಿದರು. ಮಹದಾಯಿ ಹೋರಾಟಗಾರರು ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮನೆ ಮುಂದೆ ಪ್ರತಿಭಟನೆ ನಡೆಸಿದಾಗ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಯಡಿ ಯೂರಪ್ಪ ಅವರು, ಡಿ.14ರ ಒಳಗಾಗಿ ಮಹದಾಯಿ ನೀರು ತರುತ್ತೇನೆ ಎಂದು ಭರವಸೆ ನೀಡಿದ್ದರು. ಈಗ ನೀರು ಬಂದಿದೆಯೇ ಎಂದು ಸಿಎಂ ಪ್ರಶ್ನಿಸಿದರು. ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಮೂಲಕ ಪತ್ರ ಬರೆಸಿದ ನಾಟಕವಾಡಿದ್ದು ಯಡಿಯೂರಪ್ಪ ಅಲ್ಲವೆ ? ದೊಂಬರಾಟವಾಡುತ್ತಿರುವುದು ನಾವಲ್ಲ. ಅದು ಯಡಿಯೂರಪ್ಪ ಅವರು ಎಂದು ತಿರುಗೇಟು ನೀಡಿದರು. ಮಹದಾಯಿ ವಿಚಾರದಲ್ಲಿ ರಾಹುಲ್‍ಗಾಂಧಿ ಅವರನ್ನು ಒಪ್ಪಿಸಬೇಕು ಎಂಬ ಬಿಜೆಪಿಯವರ ಬೇಡಿಕೆ ಸರಿಯಲ್ಲ. ರಾಹುಲ್‍ಗಾಂಧಿ ಈ ದೇಶದ ಪ್ರಧಾನಿ ಅಲ್ಲ. ಜನ ಅಧಿಕಾರ ಕೊಟ್ಟಿರುವುದು ನರೇಂದ್ರ ಮೋದಿ ಅವರಿಗೆ. ರಾಹುಲ್‍ಗಾಂಧಿ ಅವರು ಸಭೆ ಕರೆದರೆ ಮೂರು ರಾಜ್ಯದ ಮುಖ್ಯಮಂತ್ರಿಗಳು ಭಾಗವಹಿಸುತ್ತಾರೆಯೇ ? ಆದರೆ ಪ್ರಧಾನಿ ಸಭೆ ಕರೆದರೆ ಭಾಗವಹಿಸಲೇ ಬೇಕಾಗುತ್ತದೆ. ಇದು ವಾಸ್ತವ. ಇದನ್ನು ಅರ್ಥ ಮಾಡಿಕೊಳ್ಳದೆ ರಾಹುಲ್‍ಗಾಂಧಿ, ಸೋನಿಯಾಗಾಂಧಿ ಅವರು ಮಾತುಕತೆ ನಡೆಸಲಿ ಎಂದು ಬಿಜೆಪಿ ಹೇಳುತ್ತಿರುವುದು ಕೇವಲ ರಾಜಕೀಯ ನಾಟಕ. ಇದು ಜನರಿಗೆ ಅರ್ಥವಾಗುತ್ತದೆ ಎಂದರು.

ಗೋವಾ ಕಾಂಗ್ರೆಸಿಗರು ಮಹದಾಯಿ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಕುರಿತು ಪ್ರತಿಕ್ರಿಯುಸಿದ ಮುಖ್ಯಮಂತ್ರಿಗಳು, ಎಲ್ಲಾ ರಾಜಕೀಯ ಪಕ್ಷಗಳಿಗೂ ಅವರ ರಾಜ್ಯದ ಹಿತ ಮುಖ್ಯ. ಗೋವಾ ಕಾಂಗ್ರೆಸಿಗರು ಅವರ ರಾಜ್ಯದ ಹಿತಾಸಕ್ತಿಗನುಗುಣವಾಗಿ ನಡೆದುಕೊಳ್ಳುತ್ತಾರೆ. ನಮಗೆ ನಮ್ಮ ರಾಜ್ಯದ ಹಿತರಕ್ಷಣೆ ಮುಖ್ಯ. ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಸಂಧಾನ ಸಭೆಗೆ ಒಪ್ಪಿ ಮೊದಲು ಪತ್ರ ಬರೆಯಲಿ. ಅನಂತರ ನಾನು ಗೋವಾ ಕಾಂಗ್ರೆಸಿಗರ ಜತೆ ಮಾತನಾಡುತ್ತೇನೆ ಎಂದು ಹೇಳಿದ್ದೆ. ಆದರೆ ಈವರೆಗೂ ಮನೋಹರ್ ಪಾರಿಕ್ಕರ್ ಅಧಿಕೃತವಾಗಿ ನನಗೆ ಪತ್ರ ಬರೆದಿಲ್ಲ. ಯಡಿಯೂರಪ್ಪನವರಿಗೆ ಪತ್ರ ಬರೆದರೆ ಅಧಿಕೃತವಾಗುವುದಿಲ್ಲ ಎಂದು ಹೇಳುವ ಮೂಲಕ ಬಿಜೆಪಿಯವರ ಹಾರಾಟಗಳು ಉತ್ತರ ಕುಮಾರನ ಪೌರಷವಿದ್ದಂತೆ. ಪ್ರಧಾನಿ ಮೋದಿ ಅವರನ್ನು ಒಪ್ಪಿಸಲು ಸಾಧ್ಯವಾಗದೆ ಇಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ತಮಿಳರ ಸಂಘ ಬೆಂಗಳೂರಿನಲ್ಲಿ 10 ಎಕರೆ ಜಾಗ ಕೇಳಿದೆ. ಅವರು ಕೇಳಿದ ಕಡೆ ಸರ್ಕಾರಿ ಜಾಗ ನೀಡುತ್ತೇವೆ. ಆದರೆ, 10 ಎಕರೆಯಷ್ಟು ಜಾಗ ನೀಡಲು ಸಾಧ್ಯವಾಗುವುದಿಲ್ಲ. ಎಷ್ಟು ಸಾಧ್ಯವೋ ಅಷ್ಟು ಜಾಗ ನೀಡಲು ಸರ್ಕಾರ ಸಿದ್ದವಿದೆ. ತಮಿಳುನಾಡು ಮತ್ತು ಕರ್ನಾಟಕ ಎರಡು ರಾಜ್ಯಗಳ ಬಾಂಧವ್ಯದ ವೃದ್ಧಿಗಾಗಿ ತಿರುವಳ್ಳುವರ್ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಭಾಷೆ ಮನುಷ್ಯನ ಅಭಿವ್ಯಕ್ತಿ ಸ್ವಾತಂತ್ರ್ಯ. ಭಾಷೆಗಳು ಭಾವನೆಗಳನ್ನು ಕೆರಳಿಸಬಾರದು. ಬಾಂಧವ್ಯವನ್ನು ಬೆಸೆಯಬೇಕು. ಕರ್ನಾಟಕದಲ್ಲಿ ಎಲ್ಲಾ ಭಾಷೆಯ ಕಲಿಕೆಗೂ ಅವಕಾಶವಿದೆ. ಆದರೆ, ಪ್ರಾಥಮಿಕ ಶಿಕ್ಷಣದ ಮಾಧ್ಯಮ ಕನ್ನಡ ಭಾಷೆಯಲ್ಲೇ ಇರಬೇಕೆಂದು ಸಿಎಂ ಪ್ರತಿಪಾದಿಸಿದರು.

ತಿರುವಳ್ಳುವರ್ ಯುಗದ ಕವಿ. ಶ್ರೇಷ್ಠ ಸಂತ, ದಾರ್ಶನಿಕ. ಅವರ ಸಾಹಿತ್ಯ ಸರ್ವಕಾಲಿಕ ಆದರ್ಶವಾಗಿದೆ. ನಮ್ಮ ನಾಡಿನಲ್ಲಿ ಸರ್ವಜ್ಞ, ಬಸವಣ್ಣನವರಂತೆ ತಿರುವಳ್ಳುವರ್ ಕೂಡ ಸಾಮಾಜಿಕ ನ್ಯಾಯಾ ಮತ್ತು ಸಮಾಜದ ಸ್ವಾಸ್ಥ್ಯಕ್ಕಾಗಿ ಶ್ರಮಿಸಿದವರು ಎಂದು ಸಿದ್ದರಾಮಯ್ಯ ಹೇಳಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್, ಸಚಿವರಾದ ಕೆ.ಜೆ.ಜಾರ್ಜ್. ರೋಷನ್‍ಬೇಗ್, ಮೇಯರ್ ಸಂಪತ್‍ರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Facebook Comments

Sri Raghav

Admin