ಯಾವುದೇ ಅನುಮತಿಯಿಲ್ಲದೇ ಭೇಟಿ ಕೊಡುತ್ತಿರುವುದು ಆಕ್ರಮಣಶೀಲ ಮನೋಭಾವ

ಈ ಸುದ್ದಿಯನ್ನು ಶೇರ್ ಮಾಡಿ

mahadayi

ಬೆಳಗಾವಿ,ಜ.28- ಕಳಸಾ ಬಂಡೂರಿ ಯೋಜನಾ ಪ್ರದೇಶಕ್ಕೆ ಗೋವೆಯ ಸಚಿವರು, ಅಧಿಕಾರಿಗಳು ಕರ್ನಾಟಕ ಸರಕಾರದ ಹಿರಿಯ ಅಧಿಕಾರಿಗಳ ಯಾವುದೇ ಅನುಮತಿಯಿಲ್ಲದೇ ಭೇಟಿ ಕೊಡುತ್ತಿರುವುದು ಆಕ್ರಮಣಶೀಲ ಮನೋಭಾವದ ನಿಲುವಾಗಿದ್ದು, ಇದನ್ನು ಕರ್ನಾಟಕ ಸರಕಾರ ತತಕ್ಷಣ ತಡೆಯಬೇಕು ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಈ ಸಂಜೆ ಪತ್ರಿಕೆಗೆ ತಿಳಿಸಿದರು. ಕಳೆದ ಒಂದು ತಿಂಗಳಲ್ಲಿ ಮೂರನೇ ಬಾರಿಗೆ ಇಂದು ಗೋವೆಯ ತಂಡವು ಕಳಸಾ ಬಂಡೂರಿ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿದೆ. ಈ ಮೊದಲು ಅಲ್ಲಿಯ ನೀರಾವರಿ ಇಲಾಖೆ ಅಧಿಕಾರಿಗಳ ತಂಡ, ನಂತರ ನೀರಾವರಿ ಸಚಿವ ವಿನೋದ ಪಾಲೇಕರ್ ನೇತೃತ್ವದ ತಂಡ ಭೇಟಿ ನೀಡಿದರು.

ಕರ್ನಾಟಕ ಸರಕಾರ ಯೋಜನಾ ಪ್ರದೇಶದಲ್ಲಿ ಇಪ್ಪತ್ನಾಲ್ಕು ಗಂಟೆಯೂ ಪೊಲೀಸ್ ಕಾವಲನ್ನು ಹಾಕಬೇಕು. ಜಿಲ್ಲಾಡಳಿತದ ಪೂರ್ವಾನುಮತಿ ಪಡೆದವರನ್ನು ಮಾತ್ರ ಯೋಜನಾ ಪ್ರದೇಶ ಪ್ರವೇಶಕ್ಕೆ ಅವಕಾಶ ಕೊಡಬೇಕು. ಅನುಮತಿ ರಹಿತರನ್ನು ಹಿಂದಕ್ಕೆ ಅಟ್ಟಬೇಕು ಎಂದು ಅವರು ತಿಳಿಸಿದರು. ಗೋವೆಯ ಈ ಸರ್ವಾಧಿಕಾರಿ ವರ್ತನೆಯ ವಿರುದ್ಧ ಕರ್ನಾಟಕ ಸರಕಾರ ರಾಷ್ಟ್ರಪತಿಗಳಿಗೆ ಲಿಖಿತ ದೂರು ಸಲ್ಲಿಸಬೇಕು. ಗೋವೆಯ ಈ ವರ್ತನೆಯನ್ನು ಮೌನವಾಗಿ ಸಹಿಸುತ್ತಾ ಹೋದರೆ ಗೋವೆಯು ಕರ್ನಾಟಕದ ಮೇಲೆ ಇನ್ನೂ ಹೆಚ್ಚಿನ ಸವಾರಿ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Facebook Comments

Sri Raghav

Admin