ಸಿದ್ದರಾಮಯ್ಯನವರಿಗೆ ಫೆ.4 ರಂದು ಮೋದಿ ಕೊಡ್ತಾರಾ ಟಾಂಗ್..?

ಈ ಸುದ್ದಿಯನ್ನು ಶೇರ್ ಮಾಡಿ

modi-siddu

ಬೆಂಗಳೂರು, ಜ.28- ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ಪ್ರಾಬಲ್ಯಕ್ಕೆ ಪ್ರಧಾನಿ ನರೇಂದ್ರಮೋದಿ ಅವರೇ ಫೆ.4ರಂದು ನಿರ್ಣಾಯಕ ಉತ್ತರ ನೀಡಲಿದ್ದಾರಾ..? ಹಾಗೆಂಬ ನಂಬಿಕೆಯಲ್ಲಿ ರಾಜ್ಯ ಬಿಜೆಪಿ ನಾಯಕರೀಗ ಫೆಬ್ರವರಿ ನಾಲ್ಕರ ಮೋದಿಯವರ ಸಾರ್ವಜನಿಕ ಸಮಾರಂಭಕ್ಕೆ ಸಜ್ಜಾಗುತ್ತಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ನಡೆಸಿದ ಪರಿವರ್ತನಾ ರ‍್ಯಾಲಿ ಯಶಸ್ವಿಯಾಗಿದ್ದರೂ ಸಿದ್ದರಾಮಯ್ಯ ಅವರ ಸಾಧನಾ ಸಂಭ್ರಮ ಯಾತ್ರೆ ಹೆಚ್ಚು ಆಕ್ರಮಣಕಾರಿಯಾಗಿತ್ತು.

ಸಹಜವಾಗಿಯೇ ಸರ್ಕಾರದ ಸಾಧನೆಗಳನ್ನು ಹೇಳುವುದರ ಜತೆಗೆ ಹಿಂದಿದ್ದ ಬಿಜೆಪಿ ಸರ್ಕಾರದ ವಿರುದ್ಧ ಮುಗಿಬಿದ್ದ ಸಿದ್ಧರಾಮಯ್ಯ ಏಕಕಾಲಕ್ಕೆ ಒಂದೇ ಏಟಿಗೆ ಎರಡು ಹಕ್ಕಿ ಹೊಡೆದರು ಎಂದು ಅಮಿತ್ ಷಾ ಅವರ ಆಪ್ತ ಪಡೆ ದೆಹಲಿಯ ನಾಯಕರಿಗೆ ವರದಿ ರವಾನಿಸಿದೆ. ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಹೆಚ್ಚಿನ ಹಣ ಕೊಡುತ್ತಿರುವುದು ಕೇಂದ್ರ ಸರ್ಕಾರವೇ ಆದರೂ ಆ ಯೋಜನೆಯನ್ನು ದೇಶದ ಉಳಿದ ಬಿಜೆಪಿ ರಾಜ್ಯಗಳೂ ಜಾರಿಗೆ ತರಬಹುದಿತ್ತು ಎಂಬ ಸಿದ್ಧರಾಮಯ್ಯ ಅವರ ವ್ಯಂಗ್ಯದ ಬಾಣಕ್ಕೆ ರಾಜ್ಯದ ಬಿಜೆಪಿ ನಾಯಕರು ತಕ್ಕ ಉತ್ತರ ನೀಡಲಿಲ್ಲ. ಅದೇ ರೀತಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಕಳೆದ ನಾಲ್ಕು ವರ್ಷಗಳಲ್ಲಿ ನೀಡಿದ ಅನುದಾನದ ಲೆಕ್ಕ ಕೊಡಿ ಎಂದು ಯಡಿಯೂರಪ್ಪ ಅವರಿಂದ ಹಿಡಿದು ಅಮಿತ್ ಷಾ ಅವರ ವರೆಗೆ ಕೇಳಿದರೂ ಸಿದ್ಧರಾಮಯ್ಯ ಮಾತ್ರ ಕಿತ್ತೂರು ಚೆನ್ನಮ್ಮನ ಧಾಟಿಯಲ್ಲಿ ನಿಮಗೇಕ್ರೀ ಕೊಡಬೇಕು ಕಪ್ಪ? ಎನ್ನುವಂತೆ ನಿಮಗೇಕ್ರೀ ಕೊಡಬೇಕು ಲೆಕ್ಕ? ಅಂತ ಜಾಡಿಸಿದ್ದು ಜನರ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಕೇಂದ್ರ ಸರ್ಕಾರ ನಡೆಯುವುದೇ ರಾಜ್ಯಗಳಿಂದ ಪಡೆಯುವ ಆದಾಯಗಳಿಂದ ಎಂಬ ಅಂಶವನ್ನು ಸಿದ್ಧರಾಮಯ್ಯ ಅವರು ಜನರ ಮನಸ್ಸಿಗೆ ಹೋಗುವಂತೆ ಮಾಡಿದ್ದಾರೆ.ಹೀಗಾಗಿ ಬಿಜೆಪಿ ನಾಯಕರು ಲೆಕ್ಕ ಕೊಡ್ರೀ ಎಂದರೆ ನಿಮಗೇಕ್ರೀ ಲೆಕ್ಕ ಕೊಡಬೇಕು? ಎಂಬ ಸಿದ್ಧರಾಮಯ್ಯ ಅವರ ಮಾತು ಜನಸಾಮಾನ್ಯರಿಗೆ ಅಪ್ಯಾಯಮಾನವಾಗಿ ಕೇಳಿಸಿದೆ.

ಹಾಗೆಯೇ ಕೇಂದ್ರ ಸರ್ಕಾರದ ಜಿಎಸ್‍ಟಿ ತೆರಿಗೆ ಪದ್ಧತಿ, ನೋಟುಗಳ ಅಮಾನ್ಯೀಕರಣ ಸೇರಿದಂತೆ ಸಿದ್ಧರಾಮಯ್ಯ ಅವರು ಯಾವ್ಯಾವ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಿದರೋ? ಅದು ಜನರ ಮನಸ್ಸಿನ ಮೇಲೆ ಪ್ರಭಾವ ಬೀರಿದೆ. ಮಹದಾಯಿ ನದಿ ನೀರಿನ ವಿವಾದ ಕೂಡ ರಾಜ್ಯ ಬಿಜೆಪಿಯನ್ನು ವಿಲನ್ ಸ್ಥಾನದಲ್ಲಿ ನಿಲ್ಲಿಸಿದ್ದು, ಗೋವಾ ಮುಖ್ಯಮಂತ್ರಿ ಪರಿಕ್ಕರ್ ಅವರು ಸಿದ್ಧರಾಮಯ್ಯ ಅವರ ಜತೆ ವ್ಯವಹರಿಸದೆ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವುದು ಒಕ್ಕೂಟ ವ್ಯವಸ್ಥೆಯನ್ನು ಅವಮಾನಿಸಿದಂತೆ ಎಂಬ ಮಾತು ಎಲ್ಲೆಡೆ ದಟ್ಟವಾಗಿ ಕೇಳುತ್ತಿದೆ. ಇದೇ ರೀತಿ ಅಮಿತ್ ಷಾ ಒಬ್ಬ ಗುಜರಾತಿ, ನಾನು ಕನ್ನಡಿಗ ಎಂಬ ದಾಳವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಬಹುಸೂಕ್ಷ್ಮ ಸಂದರ್ಭದಲ್ಲಿ ಉರುಳಿಸಿದ್ದು, ಇದು ಕೂಡ ಮತದಾರರ ಮೇಲೆ ಪ್ರಭಾವ ಬೀರುತ್ತದೆ ಎಂದು ಅದು ವಿವರ ನೀಡಿದೆ.
ಹೀಗಾಗಿ ಬಿಜೆಪಿ ಗೆಲ್ಲಬೇಕು ಎಂದರೆ ಕರ್ನಾಟಕದ ಮನೆ-ಮನೆಗಳಿಗೆ ತಲುಪಲು ಬೇರೆ ರೀತಿಯ ಕಾರ್ಯತಂತ್ರ ಹಮ್ಮಿಕೊಳ್ಳಬೇಕು. ಹಾಗೆಯೇ ಸಿದ್ಧರಾಮಯ್ಯ ಅವರಿಗೆ ಬಿಜೆಪಿ ನಾಯಕರು ಸೂಕ್ತ ಉತ್ತರ ನೀಡಬೇಕು.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಬದಲು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲು ಹೋರಾಡಬೇಕಾಗುತ್ತದೆ ಎಂದು ಅಮಿತ್ ಷಾ ಅವರ ಆಪ್ತ ಪಡೆ ದೆಹಲಿಗೆ ವರದಿ ರವಾನಿಸಿದೆ.

ಹೀಗಾಗಿ ಪರಿವರ್ತನಾ ರ್ಯಾಲಿಯ ಸಮಾರೋಪದ ಹೆಸರಿನಲ್ಲಿ ಫೆ.4ರಂದು ರಾಜ್ಯಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರಮೋದಿ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ತಕ್ಕ ಉತ್ತರ ನೀಡಲು ಸಜ್ಜಾಗಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ. ನರೇಂದ್ರಮೋದಿಯವರು ಫೆ.4ರಂದು ಸಿದ್ಧರಾಮಯ್ಯ ಅವರಿಗೆ ಕೊಡಬೇಕಾದ ಸಂದೇಶ ಕೊಡಲಿದ್ದಾರೆ.  ಆನಂತರ ಕರ್ನಾಟಕದಲ್ಲಿ ನಿಜವಾದ ರಾಜಕೀಯ ಶುರುವಾಗಲಿದೆ ಎಂಬುದು ರಾಜ್ಯ ಬಿಜೆಪಿ ನಾಯಕರ ನಂಬಿಕೆ.  ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ನರೇಂದ್ರಮೋದಿ ನೀಡಲಿರುವ ಉತ್ತರ ಏನು? ಎನ್ನುವ ಕುರಿತು ಅವರಿಗೂ ಸ್ಪಷ್ಟವಾಗಿ ಅರಿವಿಲ್ಲ.

Facebook Comments

Sri Raghav

Admin