ಎಸ್ಸಿ, ಎಸ್ಟಿಯವರು ಕಾಂಗ್ರೆಸ್’ಗೆ ವೋಟ್ ಹಾಕಿ ಋಣ ತೀರಿಸಿ : ಸಚಿವ ಆಂಜನೇಯ

ಈ ಸುದ್ದಿಯನ್ನು ಶೇರ್ ಮಾಡಿ

H-Anjaneya
ಬೆಂಗಳೂರು, ಜ.29-ಭಾರತದ ಯಾವ ರಾಜ್ಯಗಳಲ್ಲೂ ಕೊಡದೇ ಇರುವಷ್ಟು ಸೌಲಭ್ಯ ಗಳನ್ನು ಕರ್ನಾಟಕದಲ್ಲಿ ಎಸ್ಸಿ/ಎಸ್ಟಿ ಸಮುದಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ. ದಲಿತ ಜನಾಂಗ ಉಪಕಾರ ಮಾಡಿದವರನ್ನು ಸ್ಮರಿಸುವುದರಲ್ಲಿ ಮೊದಲನೆಯದಾಗಿದ್ದು, ಮುಂದಿನ ಅವಧಿಗೂ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಋಣ ತೀರಿಸಬೇಕಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಕರೆ ನೀಡಿದರು.

ratna

ನಗರದ ಖಾಸಗಿ ಹೊಟೇಲ್‍ನಲ್ಲಿ ಎಸ್ಸಿ-ಎಸ್ಟಿ ಉದ್ದಿಮೆದಾರರ ಸಂಘ ಆಯೋಜಿಸಿದ್ದ ಜವಳಿ ಇಲಾಖೆಯಲ್ಲಿ ಎಸ್ಸಿ-ಎಸ್ಟಿ ಪಂಗಡದವರಿಗೆ ನೀಡುತ್ತಿರುವ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ಈ ಜನಾಂಗದವರ ಆರ್ಥಿಕಾಭಿವೃದ್ಧಿಗೆ 2018-19ರ ಆಯವ್ಯಯದ ಪೂರ್ವಭಾವಿ ಚರ್ಚೆ ಉದ್ಘಾಟಿಸಿ ಮಾತನಾಡಿದರು. ಸಿದ್ದರಾಮಯ್ಯ ಅವರು, ಎಸ್ಸಿ-ಎಸ್ಟಿ ಸಮುದಾಯಕ್ಕಾಗಿ ಯಾವುದೇ ಯೋಜನೆ ಕೇಳಿದರೂ ಕಣ್ಣು ಮುಚ್ಚಿಕೊಂಡು ಒಪ್ಪಿಗೆ ನೀಡುತ್ತಾರೆ.ಅನಿಯಮಿತವಾದ ಹಾಸ್ಟೆಲ್ ಸೌಲಭ್ಯ, ಮನೆಗಳ ಮಂಜೂರಾತಿ, ಜನವಸತಿ ಪ್ರದೇಶಗಳಿಗೆ ಮೂಲ ಸೌಕರ್ಯ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಲಾಗಿದೆ. 50 ಲಕ್ಷ ರೂ.ವರೆಗಿನ ಮೊತ್ತದ ಗುತ್ತಿಗೆಯಲ್ಲಿ ಎಸ್ಸಿ-ಎಸ್ಟಿಗೆ ಮೀಸಲಾತಿ ನೀಡಲಾಗಿತ್ತು. ಆ ಮೊತ್ತವನ್ನು ಒಂದು ಕೋಟಿಗೆ ಹೆಚ್ಚಿಸಲು ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ. ದೇಶದ ಯಾವ ರಾಜ್ಯದಲ್ಲೂ ದಲಿತರಿಗೆ ಇಷ್ಟು ಸೌಲಭ್ಯ ಕೊಟ್ಟ ಉದಾಹರಣೆಗಳಿಲ್ಲ.

ಉದ್ದಿಮೆಯಲ್ಲಿ ತೊಡಗುವವರಿಗೆ ಶೇ.40ರ ದರದಲ್ಲಿ 10 ಕೋಟಿವರೆಗೂ ಸಾಲ, ನಿವೇಶನ ಮತ್ತು ಕಟ್ಟಡ ನಿರ್ಮಾಣಕ್ಕೆ ಶೇ.50ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಇದನ್ನು ಬಳಸಿಕೊಂಡು ಉದ್ದಿಮೆ ಆರಂಭಿಸಿ. ಹಣ ಬಂದಾಕ್ಷಣ ಐಷಾರಾಮಿ ಜೀವನಕ್ಕೆ ಮಾರು ಹೋಗಬೇಡಿ. ಸಾಲ ತೀರಿದ ಮೇಲೆ ಐಷಾರಾಮಿ ಜೀವನ ಮಾಡಿ ಎಂದು ಸಲಹೆ ಮಾಡಿದರು. ಎಸ್ಸಿ-ಎಸ್ಟಿ ಸಮುದಾಯ ಕೈಗಾರಿಕಾ ಶೆಡ್‍ಗಳನ್ನು ಪಡೆದು ಸಾಲ ಬಾಕಿ ಉಳಿದಿದ್ದರೆ, ಅದರ ಬಡ್ಡಿ ಮನ್ನಾ ಮಾಡಿ ಮುಂದಿನ ದಿನಗಳಲ್ಲಿ ಶೇ.4ರಷ್ಟು ಬಡ್ಡಿ ದರದಲ್ಲಿ ಸಾಲ ನೀಡುವಂತೆ ಸೂಚಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.
ಜವಳಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ಎಸ್ಸಿ-ಎಸ್ಟಿ ಸಮುದಾಯದವರ ಗಾರ್ಮೆಂಟ್ಸ್ ಉದ್ಯಮಕ್ಕೆ ಶೇ.90ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಇದರ ಸದುಪಯೋಗಪಡಿಸಿಕೊಳ್ಳಿ ಎಂದರು. ಸಬ್ಸಿಡಿಸಿ ಮಾತ್ರವಲ್ಲದೆ ಸರ್ಕಾರ ಹಲವಾರು ಯೋಜನೆಗಳನ್ನು ನೀಡಿದೆ ಎಂದು ತಿಳಿಸಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಮಾತನಾಡಿ, ಎಸ್ಸಿ-ಎಸ್ಟಿ ಸಮುದಾಯಕ್ಕೆ 5 ವರ್ಷದಲ್ಲಿ 60 ಸಾವಿರ ಕೋಟಿ ಮೀಸಲಿಡಲಾಗಿದೆ. ಅದರಲ್ಲಿ 56 ಸಾವಿರ ಕೋಟಿ ಖರ್ಚಾಗಿದೆ. ಭೂ ಒಡೆತನ, ಗಂಗಾ ಕಲ್ಯಾಣ, ಉಚಿತ ಲ್ಯಾಪ್‍ಟಾಪ್ ಸೇರಿದಂತೆ ಹಲವಾರು ಸವಲತ್ತುಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಕೈಗಾರಿಕಾ ಇಲಾಖೆಯ ಆಯುಕ್ತ ದರ್ಪಣ್ ಜೈನ್ ಮಾತನಾಡಿ, ಗುಜರಾತ್ ಹಾಗೂ ಜಾರ್ಖಂಡ್ ಮಾದರಿಯಲ್ಲಿ ಎಸ್ಸಿ-ಎಸ್ಟಿ ಸಮುದಾಯಗಳವರ ಕೈಗಾರಿಕೆಗಳ ಕಾರ್ಮಿಕರಿಗೆ 4-5 ವರ್ಷ, ತಿಂಗಳಿಗೆ 4-5 ಸಾವಿರ ವೇತನ ನೀಡುವ ಕುರಿತು ಚಿಂತನೆ ನಡೆಸಿದೆ. ಗುಜರಾತ್‍ನಲ್ಲಿ ಪ್ರತಿ ಕಾರ್ಮಿಕರಿಗೆ 4 ಸಾವಿರ, ಜಾರ್ಖಂಡ್‍ನಲ್ಲಿ 8 ಸಾವಿರದವರೆಗೆ ವೇತನ ನೀಡಲಾಗುತ್ತಿದೆ. ಇದನ್ನು ಇಲ್ಲಿಯೂ ಅಳವಡಿಸುವ ಚಿಂತನೆ ನಡೆದಿದೆ. ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ರಾಜ್ಯದ 11 ಕಡೆ ನಿರ್ಮಿಸುತ್ತಿರುವ ಕೈಗಾರಿಕಾ ಶೆಡ್‍ಗಳಲ್ಲಿ ಶೇ.90ರಷ್ಟು ರಿಯಾಯಿತಿ ನೀಡಿ ಎಸ್ಸಿ-ಎಸ್ಟಿಗಳಿಗೆ ಹಂಚಿಕೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದು ದರ್ಪಣ್ ಜೈನ್ ತಿಳಿಸಿದರು.

ಎಸ್ಸಿ-ಎಸ್ಟಿ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಜಿ.ಶ್ರೀನಿವಾಸ್ ಮಾತನಾಡಿ, ಎಸ್ಸಿ-ಎಸ್ಟಿಗಳಿಗೆ ಹೆಚ್ಚು ಸಾಲ ಸೌಲಭ್ಯ ಕೊಡಲಾಗುತ್ತಿದೆ ಎಂಬ ಅಸೂಯೆ ಕೆಲವರಲ್ಲಿದೆ. ಆದರೆ ಇದು ಸುಳ್ಳು. 1966ರಿಂದ 2013ರವರೆಗೆ 660 ಕೈಗಾರಿಕಾ ಘಟಕಗಳಿಗೆ 313 ಎಕರೆ ಭೂಮಿ ಮಾತ್ರ ನೀಡಲಾಗಿದೆ. 26 ಕೋಟಿ ರೂ. ಮಾತ್ರ ಅನುದಾನ ಒದಗಿಸಲಾಗಿದೆ. ಸಿದ್ದರಾಮಯ್ಯ ಸರ್ಕಾರ 2013-14ರಲ್ಲಿ 136 ಘಟಕಗಳಿಗೆ 56 ಎಕರೆ ಭೂಮಿ ನೀಡಿ 11 ಕೋಟಿ ಸಬ್ಸಿಡಿ ನೀಡಿದೆ. 2014 ರಿಂದ ಈವರೆಗೆ 684 ಘಟಕಗಳಿಗೆ 457 ಎಕರೆ ಭೂಮಿ ನೀಡಿ 148 ಕೋಟಿ ರೂ. ಅನುದಾನ ಕಲ್ಪಿಸಿದೆ. ಕೆಎಸ್‍ಎಫ್‍ಸಿ ಸ್ಥಾಪನೆಯಾದಾಗಿನಿಂದ ಕೇವಲ 200 ಕೋಟಿ ರೂ. ಸಾಲದ ನೆರವು ನೀಡಿದೆ. ಕೆಎಸ್‍ಎಫ್‍ಸಿ ಶೇ.22ರಷ್ಟು ಮೀಸಲಾತಿ ಇದ್ದರೂ ಇದರ ಅನುಷ್ಠಾನದ ಪ್ರಮಾಣ ಶೇ.2.5ರಷ್ಟು ದಾಟಿಲ್ಲ. ಪರಿಸ್ಥಿತಿ ಹೀಗಿರುವಾಗ ಎಸ್ಸಿ-ಎಸ್ಟಿಗಳು ಎಲ್ಲಾ ಸೌಲಭ್ಯ ಪಡೆದುಕೊಳ್ಳುವರು ಎಂದು ಅಸೂಯೆ ಪಡುವವರಿಗೆ ಅಂಕಿಅಂಶ ಸಹಿತ ಉತ್ತರ ನೀಡಬೇಕಿದೆ ಎಂದರು. ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋ.ತಿಪ್ಪೇಶ್, ವ್ಯವಸ್ಥಾಪಕ ನಿರ್ದೇಶಕ ಜಿ.ಪಿ.ಶ್ರೀನಿವಾಸಮೂರ್ತಿ, ಸಮಾಜಕಲ್ಯಾಣ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಎಂ.ಲಕ್ಷ್ಮಿನಾರಾಯಣ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಿ.ವಿ.ಪ್ರಸಾದ್, ಸಮಾಜಕಲ್ಯಾಣ ಇಲಾಖೆ ಸಲಹೆಗಾರ ಡಾ.ಇ.ವೆಂಕಟಯ್ಯ, ಮಾಜಿ ಶಾಸಕ ಎಲ್.ಹನುಮಂತಯ್ಯ, ಜವಳಿ ಇಲಾಖೆ ಜಂಟಿ ಕಾರ್ಯದರ್ಶಿ ಪ್ರಕಾಶ್ ಮತ್ತಿತರರಿದ್ದರು.

Facebook Comments

Sri Raghav

Admin