ಪೊಲೀಸರ ವೇತನ ಪರಿಷ್ಕರಣೆ ಮಾಡುವಂತೆ ಪರಮೇಶ್ವರ್ ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

G-Parameshwar

ಬೆಂಗಳೂರು, ಜ.29-ಪೊಲೀಸ್ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳಿಗೂ ಆರನೇ ವೇತನ ಆಯೋಗ ವರದಿಯಲ್ಲಿ ವೇತನ ಪರಿಷ್ಕರಣೆ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ಹಾಗೂ ಮಾಜಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಒತ್ತಾಯಿಸಿದ್ದಾರೆ. ಈ ಸಂಬಂಧ ವೇತನ ಆಯೋಗದ ಅಧ್ಯಕ್ಷ ಎಂ.ಆರ್.ಶ್ರೀನಿವಾಸ ಮೂರ್ತಿ ಅವರಿಗೆ ಪತ್ರ ಮುಖೇನ ಮನವಿ ಮಾಡಿರುವ ಅವರು, ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾದ ವೇತನ ಪರಿಷ್ಕರಣೆಯನ್ನು ಜಾರಿಗೊಳಿಸುವ ಸಲುವಾಗಿ ಆರನೇ ವೇತನ ಆಯೋಗ ರಚಿಸಿದ್ದು, ತಾವು ಆಯೋಗದ ಅಧ್ಯಕ್ಷರಾಗಿ ವರದಿ ಸಿದ್ಧಪಡಿಸುತ್ತಿರುವುದು ಸಂತಸದ ವಿಷಯ.

ನಾನು ಗೃಹ ಸಚಿವನಾಗಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಲ್ಲಿನ ಅಧಿಕಾರಿ (ಐಪಿಎಸ್‍ಯೇತರ) ಡಿವೈಸ್ಪಿಗಳು, ಪಿಐಗಳು, ಪಿಎಸ್‍ಐ, ಪೊಲೀಸ್ ಪೇದೆಗಳು ಹಾಗೂ ಇಲಾಖೆಯಲ್ಲಿ ನೇಮಕಗೊಂಡಿರುವ ಎಲ್ಲಾ ವರ್ಗದ ಸಿಬ್ಬಂದಿಗಳ ವೇತನ ಪರಿಷ್ಕರಣೆ ಮಾಡುವ ಸಲುವಾಗಿ ರಾಘವೇಂದ್ರ ಔರಾದ್ಕರ್ ಎಡಿಜಿಪಿ (ನೇಮಕಾತಿ ಮತ್ತು ತರಬೇತಿ) ಇವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಿದ್ದೆ. ಅದರಂತೆ ಸದರಿ ಸಮಿತಿ ದೇಶದ ವಿವಿಧ ರಾಜ್ಯಗಳ ಪೊಲೀಸ್ ಇಲಾಖೆ ಸಿಬ್ಬಂದಿಗೆ ನೀಡುತ್ತಿರುವ ವೇತನ ಹಾಗೂ ಇತರೆ ಭತ್ಯೆಗಳ ಬಗ್ಗೆ ಅಧ್ಯಯನ ನಡೆಸಿ ಪ್ರಸ್ತುತ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ವೇತನ ಪರಿಷ್ಕರಣೆ ಮಾಡಲು ಒಂದು ವರದಿ ಸಲ್ಲಿಸಿರುತ್ತಾರೆ. ಈ ವರದಿಯಲ್ಲಿನ ಅಂಶವನ್ನು ಆರನೇ ವೇತನ ಆಯೋಗ ವೇತನ ಪರಿಷ್ಕರಣೆ ಸಂದರ್ಭದಲ್ಲಿ ಪರಿಗಣಿಸುವಂತೆ ತಮ್ಮಲ್ಲಿ ಮನವಿ ಮಾಡುವುದಾಗಿ ಅವರು ಹೇಳಿದ್ದಾರೆ.

Facebook Comments

Sri Raghav

Admin