ಪೊಲೀಸರ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರಿ ಬ್ಯಾಂಕ್‍ ದರೋಡೆ..!

ಈ ಸುದ್ದಿಯನ್ನು ಶೇರ್ ಮಾಡಿ

Tumakuur--01

ತುಮಕೂರು, ಜ.29- ಸುಲಭವಾಗಿ ದರೋಡೆ ಮಾಡಬಹುದು ಅಂದ್ರೆ ಕಳ್ಳರು ಬಿಡ್ತಾರಾ ? ಪದೇ ಪದೇ ಕನ್ನ ಹಾಕಿದ ಬ್ಯಾಂಕ್‍ಗೆ ಮತ್ತೆ ಕನ್ನ ಹಾಕಲು ಯತ್ನಿಸಿ ಪೊಲೀಸರ ಸಮಯ ಪ್ರಜ್ಞೆಯಿಂದ ಬಾರಿ ದರೋಡೆ ತಪ್ಪಿದೆ. ರಾಷ್ಟ್ರೀಯ ಹೆದ್ದಾರಿ 4ರ ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ಪಂಡಿತ್‍ನಹಳ್ಳಿ ಎಸ್‍ಬಿಐ ಬ್ಯಾಂಕ್‍ನಲ್ಲಿ 6 ಬಾರಿ ಕಳ್ಳತನವಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಕನ್ನ ಕೊರೆದ ಚೋರರು 30 ಲಕ್ಷ ಹಣ ದೋಚಿದ್ದರು.

ಇದರ ರುಚಿ ಹಿಡಿದ ಕಳ್ಳರು ರಾತ್ರಿಯೂ ಸಹ ಕಳ್ಳತನಕ್ಕೆ ಯತ್ನಿಸಿದ್ದಾರೆ. ಬ್ಯಾಂಕ್‍ನ ಸೆಕ್ಯೂರಿಟಿ ಗಾರ್ಡ್‍ನನ್ನು ಮನಸೋ ಇಚ್ಚೆ ಥಳಿಸಿ, ಮರಕ್ಕೆ ಕಟ್ಟಿಹಾಕಿ ಕನ್ನ ಕೊರೆದಿದ್ದಾರೆ. ಆದರೆ, ಇವರ ಪಟ್ಟ ಕಷ್ಟವೆಲ್ಲಾ ವಿಫಲವಾಗಿದೆ. ಇನ್ನೇನು ಕನ್ನ ಕೊರೆದಿದ್ದು ಆಗಿದೆ. ಒಳಗೆ ಹೋಗಿ ದೋಚಬೇಕು ಎನ್ನುವಷ್ಟರಲ್ಲಿ ಪೊಲೀಸರು ಇವರ ಆಸೆಗೆ ತಣ್ಣೀರೆರಚಿದ್ದಾರೆ. ಕ್ಯಾತ್ಸಂದ್ರ ಠಾಣೆಯ ಎಸ್‍ಐ ರಾಜು ಹಾಗೂ ಸಿಬ್ಬಂದಿಗಳು ರಾತ್ರಿ ಗಸ್ತಿನಲ್ಲಿದ್ದಾಗ ಬ್ಯಾಂಕ್‍ನ ಬಳಿ ಬಂದು ಸೆಕ್ಯೂರಿಟಿಗಾರ್ಡ್ ಬಳಿ ಸಹಿ ಹಾಕಿಸಿಕೊಳ್ಳಲು ವಾಹನ ನಿಲ್ಲಿಸಿ ಹಾರನ್ ಮಾಡಿದ್ದಾರೆ.

ಎಷ್ಟೊತ್ತಾದರೂ ಸೆಕ್ಯೂರಿಟಿಗಾರ್ಡ್ ಬಾರಲಿಲ್ಲ. ಇದರಿಂದ ಅನುಮಾನಗೊಂಡ ಕಾನ್‍ಸ್ಟೇಬಲ್‍ಗಳಾದ ರಾಮಾಂಜುನಯ್ಯ ಹಾಗೂ ರಮೇಶ್ ಬ್ಯಾಂಕ್ ಬಳಿ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಸೆಕ್ಯೂರಿಟಿಗಾರ್ಡ್ ನವೀನ್ ಒದ್ದಾಡುತ್ತಿದ್ದ. ಕೂಡಲೇ ಎಸ್‍ಐ ರಾಜುಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿ ಸೆಕ್ಯೂರಿಟಿಗಾರ್ಡ್‍ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರು ಬಂದ ವಿಷಯ ತಿಳಿದ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಕಳ್ಳತನಕ್ಕೆ ನಾಲ್ವರು ಬಂದಿದ್ದು, ಒಬ್ಬರು ಬ್ಯಾಂಕ್‍ನ ಮುಂದೆ ಕಾವಲಿದ್ದು, ಇನ್ನೊಬ್ಬ ನನ್ನನ್ನು ಕಾಯುತ್ತಿದ್ದರು. ಮತ್ತಿಬ್ಬರು ಕನ್ನ ಕೊರೆಯುತ್ತಿದ್ದರು ಎಂದು ಹಲ್ಲೆಗೊಳಗಾದ ಸೆಕ್ಯೂರಿಟಗಾರ್ಡ್ ಪೊಲೀಸರಿಗೆ ತಿಳಿಸಿದ್ದಾನೆ.  ಒಂದು ವೇಳೆ ಪೊಲೀಸರು ಬರುವುದು ತಡವಾಗಿದ್ದರೆ ಭಾರೀ ಕಳ್ಳತನವಾಗುತ್ತಿತ್ತು. ಮೇಲಿಂದ ಮೇಲೆ ಈ ಬ್ಯಾಂಕ್‍ನಲ್ಲಿ 6 ಬಾರಿ ಕಳ್ಳತನವಾಗಿರುವುದು ವಿಪರ್ಯಾಸವೇ ಸರಿ.

Facebook Comments

Sri Raghav

Admin