ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್‍ಗಾಗಿ ಸಂಬಂಧಿಗಳಿಂದಲೇ ಫೈಟ್..!

ಈ ಸುದ್ದಿಯನ್ನು ಶೇರ್ ಮಾಡಿ

Chamaraj--01

ರಾಜ್ಯದಲ್ಲಿನ ವಿಧಾನಸಭಾ ಕ್ಷೇತ್ರಗಳಿಗೆ ತನ್ನದೇ ಆದ ಹೆಸರಿದೆ. ಹಾಗೆಯೇ ಪ್ರತಿಯೊಂದು ಕ್ಷೇತ್ರವು ಒಂದು ರೀತಿಯಲ್ಲಿ ಪ್ರಖ್ಯಾತವಾಗಿದೆ. ಈ ದಿಸೆಯಲ್ಲಿ ಮೈಸೂರಿನ ಕೃಷ್ಣರಾಜ ಕ್ಷೇತ್ರವನ್ನು ಅಘೋಷಿತ ಬ್ರಾಹ್ಮಣರ ಕ್ಷೇತ್ರವೆಂದು ಕರೆದರೆ ಅದರ ಪಕ್ಕದ ಚಾಮರಾಜ ಕ್ಷೇತ್ರ ಗೌಡರ ಕ್ಷೇತ್ರವೆಂದೇ ಖ್ಯಾತಿಯಾಗಿದೆ. ಈ ಕ್ಷೇತ್ರದಲ್ಲಿ ಗೌಡರೇ ಹೆಚ್ಚಾಗಿ ಸ್ಪರ್ಧಿಸುವುದರಿಂದ ಈ ಹೆಸರಿನಿಂದ ಚಾಮರಾಜ ಕ್ಷೇತ್ರ ಪ್ರಖ್ಯಾತಿಯಾಗಿ ಎಲ್ಲಾ ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದೆ.

ಕೃಷ್ಣರಾಜ ಕ್ಷೇತ್ರದಲ್ಲಿ ಬ್ರಾಹ್ಮಣರ ನಡುವೆ ಟಿಕೆಟ್‍ಗಾಗಿ ಪೈಪೋಟಿ ಕಂಡು ಬಂದರೆ, ಚಾಮರಾಜದಲ್ಲಿ ಈ ಬಾರಿ ಒಕ್ಕಲಿಗರ ನಡುವೆ ಅದರಲ್ಲೂ ಸಂಬಂಧಿಗಳ ನಡುವೆಯೇ ಕ್ಷೇತ್ರದ ಟಿಕೆಟ್‍ಗಾಗಿ ಒಂದು ರೀತಿಯ ಫೈಟಿಂಗ್ ತೆರೆಮರೆಯಲ್ಲಿ ನಡೆಯುತ್ತಿದೆ. ಟಿಕೆಟ್ ಫೈಟಿಂಗ್ ಕೇವಲ ಒಂದು ಪಕ್ಷದ್ದಲ್ಲ, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಜೆಡಿಎಸ್‍ನಲ್ಲಿಯೂ ಸಮರ ಏರ್ಪಟ್ಟಿದೆ. ಹೆಚ್ಚಿನ ಪೈಪೋಟಿ ಕಂಡುಬಂದಿರುವುದು ಜೆಡಿಎಸ್ ಪಕ್ಷದಲ್ಲಿ. ದೊಡ್ಡ ಗೌಡರ ಸಮೀಪದ ಸಂಬಂಧಿಯಾದ ಪ್ರೊ.ಫೆಸರ್ ರಂಗಪ್ಪ ಮತ್ತು ದೂರದ ಸಂಬಂಧಿ ಹರೀಶ್‍ಗೌಡ ನಡುವೆ ಟಿಕೆಟ್ ಕಾಳಗ ನಡೆಯುತ್ತಿದೆ ಎನ್ನಲಾಗಿದೆ.  ಪ್ರೊ..ರಂಗಪ್ಪನವರಿಗೆ ಚಾಮರಾಜ ಕ್ಷೇತ್ರದ ಟಿಕೆಟ್ ಖಾಯಂ ಎಂದು ಹೇಳಲಾಗುತ್ತಿದ್ದು, ಈಗಾಗಲೇ ಅವರು ಸದ್ದಿಲ್ಲದೆ ಪ್ರಚಾರ ಶುರುವಿಟ್ಟುಕೊಂಡಿದ್ದಾರೆ.

ಆದರೆ ಮಾಜಿ ಪ್ರಧಾನಿ ದೇವೇಗೌಡರ ಒಲವು ರಂಗಪ್ಪ ಅವರ ಕಡೆ ಹೆಚ್ಚಾಗಿರುವುದು ಕಂಡು ಬಂದಿದೆ. ಆದರೂ ಪ್ರೊ..ರಂಗಪ್ಪನವರು ಪಕ್ಷದ ವರಿಷ್ಠರು ಯಾರನ್ನು ಅಭ್ಯರ್ಥಿಯನ್ನಾಗಿ ಮಾಡುತ್ತಾರೋ ಅವರ ಪರವಾಗಿ ಕೆಲಸ ಮಾಡೋಣ ಎನ್ನುತ್ತಾರೆ. ಆದರೆ ಮತ್ತೊಬ್ಬ ಪ್ರಬಲ ಆಕಾಂಕ್ಷಿಯಾಗಿರುವ ಹರೀಶ್‍ಗೌಡರು ಕೂಡ ಟಿಕೆಟ್ ನೀಡಬೇಕೆಂದು ದೊಡ್ಡ ಗೌಡರ ಮೇಲೆ ಒತ್ತಾಯ ಹೇರಿದ್ದಾರೆ. ಅಂತಿಮ ಹಂತದಲ್ಲಿ ಯಾರಿಗೆ ಚಾಮರಾಜ ಕ್ಷೇತ್ರದ ಟಿಕೆಟ್ ದಕ್ಕಲಿದೆ ಎಂಬುದು ಇನ್ನು ಕೆಲದಿನಗಳಲ್ಲೇ ಖಚಿತವಾಗಲಿದೆ.

ಇದು ಜೆಡಿಎಸ್‍ನ ಟಿಕೆಟ್ ಕಥೆಯಾದರೆ, ಇನ್ನು ಕಾಂಗ್ರೆಸ್‍ನ ಚಾಮರಾಜ ಕ್ಷೇತ್ರದ ಅಭ್ಯರ್ಥಿ ಟಿಕೆಟ್ ರೇಸ್‍ನಲ್ಲಿ ಹಾಲಿ ಶಾಸಕ ವಾಸು, ಮಾಜಿ ಎಂಎಲ್‍ಸಿ ಮಾದೇಗೌಡ ಪ್ರಮುಖರು. ಅದೂ ಅಲ್ಲದೆ ಇತ್ತೀಚೆಗೆ ವಾಸು ಅವರ ಮೇಲೆ ಕಾಂಗ್ರೆಸ್ಸಿಗರಿಂದಲೇ ಒಂದು ನೇರ ಆರೋಪ ಕೇಳಿ ಬಂದಿದ್ದು, ಮೈಸೂರು ಮೇಯರ್ ಚುನಾವಣೆಯಲ್ಲಿ ಭಾಗ್ಯವತಿ ಗೆಲುವಿಗೆ ವಾಸುರವರ ಕೃಪಾಶೀರ್ವಾದವಿದೆ ಎನ್ನಲಾಗಿದೆ. ಆದರೆ ವಾಸು ಅವರು ಈ ಆರೋಪದ ಬಗ್ಗೆ ಈವರೆಗೂ ತುಟಿಬಿಚ್ಚಿಲ್ಲ. ಒಂದರ್ಥದಲ್ಲಿ ವಾಸು ಅವರು ಎಲ್ಲಿಯೂ ನನಗೆ ಈ ಬಾರಿ ಟಿಕೆಟ್ ಬೇಡ, ನಾನು ಸ್ಪರ್ಧಿಸಲ್ಲ ಎಂದು ಹೇಳಿಲ್ಲ. ನಾನು ಸಹ ಟಿಕೆಟ್ ರೇಸ್‍ನಲ್ಲಿದ್ದೇನೆ. ನಾನು ಆಕಾಂಕ್ಷಿ ಎಂದು ಹೇಳಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಮಾಜಿ ಎಂಎಲ್‍ಸಿ ಡಿ.ಮಾದೇಗೌಡರಿಗೆ ಟಿಕೆಟ್ ನೀಡಬೇಕೆಂದು ಹಿರಿಯ ಹಳೆಯ ಕಾಂಗ್ರೆಸ್ಸಿಗರು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆಂದು ಹೇಳಲಾಗಿದೆ. ಬಿಜೆಪಿ ಬಗ್ಗೆ ಹೇಳುವುದಾದರೆ ಟಿಕೆಟ್‍ಗಾಗಿ ಒಳಗೊಳಗೆ ತ್ರಿಕೋಣ ಸ್ಪರ್ಧೆ ನಡೆಯುತ್ತಿದೆ. ಈ ಕ್ಷೇತ್ರದ ಹಳೇ ಹುಲಿ, ಮೂಡಾ ಮಾಜಿ ಅಧ್ಯಕ್ಷ ನಾಗೇಂದ್ರ, ಹಾಗೆಯೇ ಚಾಮರಾಜ ಕ್ಷೇತ್ರದಲ್ಲಿ ಬಿಜೆಪಿಯ ಬೀಜ ಬಿತ್ತಿ ನಾಲ್ಕು ಬಾರಿ ಜಯಭೇರಿ ಬಾರಿಸಿದ್ದ ದಿವಂಗತ ಶಂಕರ್ ಲಿಂಗೇಗೌಡ ಅವರ ಪುತ್ರ ಮೈಸೂರು ಮಹಾನಗರ ಪಾಲಿಕೆ ಸದಸ್ಯ ನಂದೀಶ್ ಪ್ರೀತಂ ಟಿಕೆಟ್‍ಗಾಗಿ ತೆರೆಮರೆಯಲ್ಲಿ ತೀವ್ರ ಲಾಬಿ ನಡೆಸುತ್ತಿದ್ದಾರೆ.

ಇವರಿಬ್ಬರೂ ಮೈಸೂರಿನಲ್ಲಿ ಬಿಜೆಪಿಗೆ ಹಳಬರು. ಇವರಿಬ್ಬರಿಗೂ ಆರ್‍ಎಸ್‍ಎಸ್ ನಂಟಿದೆ. ಆದರೆ ಇಬ್ಬರನ್ನು ಹೊರತು ಪಡಿಸಿ ಮತ್ತೊಬ್ಬರು ಚಾಮರಾಜ ಬಿಜೆಪಿ ಟಿಕೆಟ್‍ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ವೈದ್ಯ ವೃತ್ತಿಯ ಮಂಜುನಾಥ ಸಹ ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರು. ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಿನ ಚುನಾವಣೆಯಲ್ಲಿ ತನಗೇ ಅವಕಾಶ ಕೊಡಬೇಕೆಂದು ಬಿಜೆಪಿ ಮುಖಂಡರಿಗೆ ಡಾ.ಮಂಜುನಾಥ ದುಂಬಾಲು ಬಿದ್ದಿದ್ದಾರೆ. ಈ ಮೂವರ ಪೈಕಿ ಬಿಜೆಪಿ ವರಿಷ್ಠರು ಹಳಬರಿಬ್ಬರ ಪೈಕಿ ಒಬ್ಬರಿಗೆ ಅಥವಾ ಪಕ್ಷಕ್ಕೆ ಹೊಸದಾಗಿ ಬಂದಿರುವ ಮಂಜುನಾಥ್‍ಗೆ ಮಣೆ ಹಾಕಿ ಟಿಕೆಟ್ ನೀಡುವರೇ ಎಂಬುದನ್ನು ಕಾದು ನೋಡಬೇಕು.

ಬೇರೆ ಪಕ್ಷದಲ್ಲಿರುವಂತೆ ಬಿಜೆಪಿಯಲ್ಲಿ ಈ ಮೂವರು ಸೇರಿದಂತೆ ಯಾವೊಬ್ಬ ಬಿಜೆಪಿಗರು ಚಾಮರಾಜ ಕ್ಷೇತ್ರದ ಅಭ್ಯರ್ಥಿ ನಾನೇ ಎಂದು ಹೇಳುತ್ತಿಲ್ಲ. ಕಾರಣ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ‘ಚಾಣಕ್ಯ’ ಎನಿಸಿಕೊಂಡಿರುವ ಅಮಿತ್ ಷಾ  ಈ ಹಿಂದೆ ರಾಜ್ಯಕ್ಕೆ ಬಂದಾಗ ಟಿಕೆಟ್ ಬಗ್ಗೆ ನಾವು ನಿರ್ಧರಿಸುತ್ತೇವೆ. ಕೆಲಸ ಮಾಡಿ ಎಂದು ಕಟ್ಟಪ್ಪಣೆ ಮಾಡಿದ್ದಾರೆ. ಹಾಗಾಗಿ ಯಾವೊಬ್ಬ ಬಿಜೆಪಿಗನೂ ಟಿಕೆಟ್ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಒಳಗೊಳಗೇ ತಮ್ಮ ಗಾಡ್‍ಫಾಧರ್‍ಗಳನ್ನು ಮುಂದಿಟ್ಟುಕೊಂಡು ಸಕಲ ಬಲವನ್ನು ಬಳಸುತ್ತ ಟಿಕೆಟ್‍ಗಾಗಿ ಕಂಬ ಸುತ್ತುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

Facebook Comments

Sri Raghav

Admin