ಚುನಾವಣೆ ಹಿನ್ನೆಲೆಯಲ್ಲಿ ಜನಸ್ನೇಹಿ ಬಜೆಟ್‍ಗೆ ಜೇಟ್ಲಿ ಒಲವು

ಈ ಸುದ್ದಿಯನ್ನು ಶೇರ್ ಮಾಡಿ

Budget--01

ನವದೆಹಲಿ, ಜ.30- ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಹಣಕಾಸು ಸಚಿವ ಅರುಣ್ ಜೇಟ್ಲಿ ಫೆ.1ರ ಗುರುವಾರದಂದು ಲೋಕಸಭೆಯಲ್ಲಿ ಮಂಡಿಸಲಿರುವ 2018-19ನೆ ಸಾಲಿನ ಬಜೆಟ್ ಜನಸ್ನೇಹಿಯಾಗಿರುತ್ತದೆ ಎಂಬ ಅಪಾರ ನಿರೀಕ್ಷೆ ಹುಟ್ಟುಹಾಕಿದೆ.  ಈ ವರ್ಷ ಕರ್ನಾಟಕ ಸೇರಿದಂತೆ ದೇಶದ ಎಂಟು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಮತ್ತು ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮುಂಗಡ ಪತ್ರವು ಜನರಲ್ಲಿ ಬೆಟ್ಟದಷ್ಟು ನಿರೀಕ್ಷೆ ಮತ್ತು ಭರವಸೆ ಮೂಡಿಸಿದೆ.ದೇಶದ ಆರ್ಥಿಕ ಪ್ರಗತಿಗಾಗಿ ಅರುಣ್ ಜೇಟ್ಲಿ ಅವರು ಬಜೆಟ್‍ನಲ್ಲಿ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂಬ ಬಗ್ಗೆ ಮುನ್ಸೂಚನೆ ಇದ್ದರೂ ಕೂಡ ಮಧ್ಯಮ ವರ್ಗದವರು ಮತ್ತು ಬಡವರ ಕಿಸೆಗೆ ಕತ್ತರಿ ಬೀಳದಂತೆ ಎಚ್ಚರಿಕೆಯ ಹೆಜ್ಜೆಗಳೊಂದಿಗೆ ಜನಪರ ಮತ್ತು ಪ್ರಗತಿದಾಯಕ ಬಜೆಟ್ ಮಂಡಿಸಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಸಾಲಿನ ಬಜೆಟ್‍ನಲ್ಲಿ ಮಹಿಳೆಯರು, ರೈತರು, ಸಮಾಜದ ದುರ್ಬಲ ವರ್ಗದವರು ಮತ್ತು ಹಿಂದುಳಿದ ಸಮುದಾಯದವರಿಗೆ ಬಂಪರ್ ಯೋಜನೆಗಳು ಪ್ರಕಟವಾಗುವ ನಿರೀಕ್ಷೆಯಿದೆ. ಹಾಗೆಯೇ ದೇಶದ ಜ್ವಲಂತ ಸಮಸ್ಯೆಗಳಲ್ಲಿ ಒಂದಾದ ನಿರುದ್ಯೋಗ ನಿವಾರಣೆಗೂ ಹೆಚ್ಚಿನ ಒತ್ತು ನೀಡಿ ಯುವಜನ ಸಬಲೀಕರಣಕ್ಕೆ ಪ್ರಾಮುಖ್ಯತೆ ಕೊಡಲಾಗುತ್ತದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.  ಈ ಸಾಲಿನ ಬಜೆಟ್‍ನಲ್ಲಿ ತೆರಿಗೆ ಸುಧಾರಣೆಗಾಗಿ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ತೆರಿಗೆ ವಂಚನೆ ತಪ್ಪಿಸಲು ಮತ್ತು ಕಾಳಧನಿಕರಿಗೆ ಕಡಿವಾಣ ಹಾಕಲು ಮುಂಗಡ ಪತ್ರದಲ್ಲಿ ಕೆಲವು ಕಟ್ಟುನಿಟ್ಟಿನ ಯೋಜನೆಗಳು ಜಾರಿಗೆ ಬರಲಿವೆ.

ನಿವೃತ್ತರಾದವರು ಮತ್ತು ಪಿಂಚಣಿದಾರರ ಹಿತರಕ್ಷಣೆಗಾಗಿ ಹೊಸ ಉಳಿತಾಯ ಯೋಜನೆ ಅನುಷ್ಠಾನಗೊಳ್ಳುವ ಸಾಧ್ಯತೆಯಿದೆ. ಪಾರದರ್ಶಕ ಮತ್ತು ಸುಗಮ ಹಣಕಾಸು ವಹಿವಾಟು ನಿರ್ವಹಣೆಗಾಗಿ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡಿ ಕೆಲವು ಸುಧಾರಿತ ಯೋಜನೆಗಳು ಕಾರ್ಯರೂಪಕ್ಕೆ ಬರುವ ನಿರೀಕ್ಷೆಯಿದೆ. ಭಾರೀ ಮೊತ್ತದ ಸಾಲವನ್ನು ಉಳಿಸಿಕೊಂಡು ಸುಸ್ತಿದಾರರಾಗಿರುವ ದೊಡ್ಡ ಉದ್ಯಮಿಗಳು ಮತ್ತು ಪ್ರತಿಷ್ಠಿತ ಕಂಪೆನಿಗಳಿಂದ ಸಾಲ ವಸೂಲಿಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ಈಗಾಗಲೇ ಅರುಣ್‍ಜೇಟ್ಲಿ ಮುನ್ಸೂಚನೆ ನೀಡಿದ್ದಾರೆ.

ಈಗ ನಗುತ್ತೀರಿ… ಬಜೆಟ್ ಮಂಡನೆಯಾದ ಮೇಲೆ ನೀವು ಯಾವ ರೀತಿ ಇರುತ್ತೀರಿ ಎಂಬುದನ್ನು ನಾನು ನೋಡುತ್ತೇನೆ ಎಂಬುದನ್ನು ಒಂದು ವಾರದ ಹಿಂದಷ್ಟೆ ಪ್ರಧಾನಿ ನರೇಂದ್ರಮೋದಿಯವರು ಸೂಚ್ಯವಾಗಿ ಹೇಳುವ ಮೂಲಕ ಕೆಲವು ಕಠಿಣ ಕ್ರಮಗಳು ಬಜೆಟ್‍ನಲ್ಲಿರುತ್ತವೆ ಎಂದು ತಿಳಿಸಿದ್ದರು. ನಿನ್ನೆ ಲೋಕಸಭೆಯಲ್ಲಿ ವಿತ್ತ ಸಚಿವ ಜೇಟ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆಯಲ್ಲೂ ದೇಶದ ಪ್ರಗತಿಗಾಗಿ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ ಎಂಬ ಸಂಗತಿಯನ್ನು ಉಲ್ಲೇಖಿಸಲಾಗಿದೆ. ಒಟ್ಟಾರೆ ಗುರುವಾರ ಮಂಡನೆಯಾಗಲಿರುವ ಬಜೆಟ್‍ನಲ್ಲಿ ಸಿಹಿಯೊಂದಿಗೆ ಕಹಿಯೂ ಇರುವುದನ್ನು ನಿರೀಕ್ಷಿಸಬಹುದಾಗಿದೆ.

Facebook Comments

Sri Raghav

Admin