ದಾಖಲೆ ಸಮೇತ ಆರೋಪ ಮಾಡುವಂತೆ ಬಿಜೆಪಿಗೆ ರಾಮಲಿಂಗಾರೆಡ್ಡಿ ಸವಾಲ್

ಈ ಸುದ್ದಿಯನ್ನು ಶೇರ್ ಮಾಡಿ

Ramalingareddy-Session--01

ಬೆಂಗಳೂರು, ಜ.30- ಕಾಂಗ್ರೆಸ್ ವಿರುದ್ಧ ಬಿಜೆಪಿಯವರು ಮಾಡಿರುವ ಆರೋಪಗಳಿಗೆ ದಾಖಲೆ ಇದ್ದರೆ ಸಲ್ಲಿಸಲಿ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ಸವಾಲು ಹಾಕಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಸುರೇಶ್‍ಕುಮಾರ್ ಅವರು ಕಾಂಗ್ರೆಸ್ ಪಿಎಫ್‍ಐನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂದು ಆಧಾರ ರಹಿತ ಆರೋಪ ಮಾಡಿದ್ದಾರೆ. ಈ ರೀತಿ ವಿನಾಕಾರಣ ಆರೋಪ ಮಾಡುವುದನ್ನು ಬಿಟ್ಟು ದಾಖಲೆಗಳಿದ್ದರೆ ನೀಡಲಿ ಎಂದು ಕಿಡಿಕಾರಿದರು. ಆರೋಪ ಮಾಡುವುದೇ ಅವರ ಜಾಯಮಾನ. ಹಾಗಾಗಿಯೇ ಈ ರೀತಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದ ಅವರು, ಸವಣೂರು ಗ್ರಾಪಂನಲ್ಲಿ ಪಿಎಫ್‍ಐನೊಂದಿಗೆ ಹೊಂದಾಣಿಕೆ ಮಾಡಿಕೊಂಡ ಬಿಜೆಪಿಯವರೇ ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ್ದರು ಎಂದರು.

ಬಿಜೆಪಿ ಮತ್ತು ಒವೈಸಿ ಹೊಂದಾಣಿಕೆ ಹಳೆ ವಿಚಾರ. ಇದು ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲಿ ನಡೆದಿದೆ. ಅಲ್ಲದೆ, ಈ ವಾಮಮಾರ್ಗದ ಮೂಲಕವೇ ಕೆಲವೆಡೆ ಅಧಿಕಾರ ಹಿಡಿಯುವಲ್ಲಿಯೂ ಯಶಸ್ವಿಯಾಗಿದ್ದಾರೆ. ಒಳ ಒಪ್ಪಂದ ಮಾಡಿಕೊಳ್ಳುವ ಇವರೇ ಈಗ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಗುಡುಗಿದರು.
ಫೆ.4ರಂದು ಬಂದ್ ಮಾಡಲು ಸರ್ಕಾರ ಅನುಮತಿ ನೀಡುವುದಿಲ್ಲ. ನ್ಯಾಯಾಲಯ ಸಹ ಇದಕ್ಕೆ ಸಮ್ಮತಿಸುವುದಿಲ್ಲ. ಪ್ರತಿಭಟನೆಗೆ ಅನುಮತಿ ಪಡೆಯಲಾಗುತ್ತದೆ. ಅದು ಸಹ ಸೀಮಿತ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಲಾಗುತ್ತದೆ. ಸಚಿವರು, ಸಂಸದರ ಮನೆ ಮುಂದೆ ಪ್ರತಿಭಟನೆ ನಡೆಸಬಾರದು ಎಂದರು.

ಸಿ.ಟಿ.ರವಿಗೆ ಬೆದರಿಕೆ:

ಶಾಸಕ ಸಿ.ಟಿ.ರವಿ ಅವರಿಗೆ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ಸೇರಿದಂತೆ ಎಲ್ಲ ರೀತಿಯ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದ್ದೇವೆ ಎಂದು ತಿಳಿಸಿದರು. ಅದರ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯವಿದ್ದರೆ ಭದ್ರತೆ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

Facebook Comments

Sri Raghav

Admin