ನಮ್ಮ ಕ್ಷೇತ್ರ ನಮ್ಮ ಹೊಣೆ ಕಾಂಗ್ರೆಸ್ ಹೊಸ ಅಭಿಯಾನ ಇಂದಿನಿಂದ ಶುರು

ಈ ಸುದ್ದಿಯನ್ನು ಶೇರ್ ಮಾಡಿ

Congress-01
ಬೆಂಗಳೂರು, ಜ.30-ನಮ್ಮ ಕ್ಷೇತ್ರ ನಮ್ಮ ಹೊಣೆ ಎಂಬ ವಿನೂತನ ಪ್ರಯೋಗಕ್ಕೆ ಕರ್ನಾಟಕ ಕಾಂಗ್ರೆಸ್ ಕೈ ಹಾಕಿದೆ.
ಎಐಸಿಸಿ ಜೊತೆ ಚರ್ಚಿಸಿ ನಮ್ಮ ಕ್ಷೇತ್ರ ನಮ್ಮ ಹೊಣೆ ಯೋಜನೆಗೆ ಸಮ್ಮತಿ ಪಡೆದಿದ್ದು, ಅದು ಇಂದಿನಿಂದ ಅಧಿಕೃತವಾಗಿ ಜಾರಿಗೆ ಬರುತ್ತಿದೆ.
ಏನಿದು ಹೊಣೆಗಾರಿಕೆ?
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ರಪಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಚಾರ ಸಮಿತಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ಸೇರಿದಂತೆ ಉನ್ನತ ನಾಯಕರಿಂದ ಹಿಡಿದು ಕೆಳಹಂತದ ಕಿರಿಯ ನಾಯಕರವರೆಗೂ ತಲಾ ಒಂದೊಂದು ಬೂತ್‍ನ ಹೊಣೆಗಾರಿಕೆಯನ್ನು ವಹಿಸಲಾಗುತ್ತಿದೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಆ ಸದರಿ ಬೂತ್‍ನಲ್ಲಿ ಕಾಂಗ್ರೆಸ್‍ಗೆ ಹೆಚ್ಚು ಮತ ಹಾಕಿಸಿ ಮುನ್ನಡೆಸುವುದು ಈ ನಾಯಕರ ಜವಾಬ್ದಾರಿ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‍ಪಕ್ಷದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯಾವುದೇ ಜವಾಬ್ದಾರಿ ಹಂಚಿಕೆ ಮಾಡುವಾಗ ನಮ್ಮ ಕ್ಷೇತ್ರ ನಮ್ಮ ಹೊಣೆ ಯೋಜನೆಯ ಸಾಧನೆಗಳನ್ನು ಪ್ರಮುಖವಾಗಿ ಪರಿಗಣನೆಗೆ ತೆಗದುಕೊಳ್ಳಲಾಗುತ್ತದೆ. ಅದು ಎಷ್ಟೇ ದೊಡ್ಡ ನಾಯಕರಾಗಿದ್ದರೂ ನಮ್ಮ ಕ್ಷೇತ್ರ ನಮ್ಮ ಹೊಣೆಯಲ್ಲಿ ವಿಫಲರಾದರೆ ಅವರಿಗೆ ಅಧಿಕಾರಾದ ಅವಕಾಶ ಸುಲಭವಾಗಿ ಸಿಗದಂತೆ ನೋಡಿಕೊಳ್ಳಬೇಕು ಎಂಬ ರಾಜ್ಯ ಕಾಂಗ್ರೆಸ್‍ನ ಪ್ರಸ್ತಾವನೆಯನ್ನು ಹೈಕಮಾಂಡ್ ಒಪ್ಪಿಕೊಂಡಿದೆ ಎನ್ನಲಾಗಿದೆ.
ಹೀಗಾಗಿ ಇಂದು ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಯಾವ ಯಾವ ಬೂತ್‍ಗಳಿಗೆ ಯಾರನ್ನು ಜವಾಬ್ದಾರಿ ಮಾಡಲಾಗಿದೆ ಎಂಬ ಪಟ್ಟಿಯನ್ನು ನೀಡಲಾಗಿದೆ.
ರಾಜ್ಯದ 56ಸಾವಿರಕ್ಕೂ ಹೆಚ್ಚು ಬೂತ್‍ಗಳಿಗೂ ತಲಾ ಒಬ್ಬೊಬ್ಬ ನಾಯಕನನ್ನು ಉಸ್ತುವಾರಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಅವರು ಆ ಬೂತ್‍ನ ಸಮಿತಿಯ ಜೊತೆ ಸಂಪರ್ಕದಲ್ಲಿದ್ದುಕೊಂಡು ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಮತ ಹಾಕಿಸಬೇಕು. ಚುಣಾವಣೆ ಮುಗಿದ ತಕ್ಷಣವೇ ಯಾವ ಯಾವ ಬೂತ್‍ಗಳಲ್ಲಿ ಕಾಂಗ್ರೆಸ್‍ಗೆ ಎಷ್ಟು ಮತಗಳು ಬಂದಿವೆ, ಯಾರು ಹೆಚ್ಚು ಮುನ್ನಡೆಸಿದ್ದಾರೆ ಎಂಬ ಮೌಲ್ಯಮಾಪನಕ್ಕೆ ಎಐಸಿಸಿ ಪ್ರತ್ಯೇಕ ತಂಡವನ್ನು ಕಳುಹಿಸಲಿದೆ.
ಚುನಾವಣೆ ಫಲಿತಾಶಂ ಮುಗಿದು ಸರ್ಕಾರ ರಚನೆಯಾಗುವ ಮುನ್ನ ಈ ತಂಡ ಹೈಕಮಾಂಡ್‍ಗೆ ವರದಿ ನೀಡಲಿದೆ. ಒಂದು ವೇಳೆ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರನ್ನು ತಾವು ಚುನಾವಣೆಯಲ್ಲಿ ಕಷ್ಟ ಪಟ್ಟಿದ್ದಾಗಿ ಜಂಭ ಕೊಚ್ಚಿಕೊಳ್ಳುತ್ತಾರೆ. ಆದರೆ ಯಾರು ಎಷ್ಟು ಕೆಲಸ ಮಾಡಿದ್ದಾರೆ ಎಂಬ ಮೌಲ್ಯಮಾಪನ ಇರುವುದಿಲ್ಲ. ಅದನ್ನು ಖಚಿತವಾಗಿ ಸ್ಪಷ್ಟಪಡಿಸಿಕೊಳ್ಳಲು ನಮ್ಮ ಕ್ಷೇತ್ರ ನಮ್ಮ ಹೊಣೆ ಕಾರ್ಯಕ್ರಮ ರೂಪಿಸಲಾಗಿದೆ.
ಶಾಸಕರು, ಸಂಸದರಿಂದ ಹಿಡಿದು ಪ್ರತಿಯೊಬ್ಬ ನಾಯಕರಿಗೂ ಬೂತ್‍ಗಳ ಹೊಣೆಗಾರಿಕೆ ಒಪ್ಪಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಉನ್ನತ ನಾಯಕರು ಕೂಡ ಸಾಮಾನ್ಯ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದುಕೊಂಡು ಕಷ್ಟಪಟ್ಟು ಕೆಲಸ ಮಾಡುವ ಅನಿವಾರ್ಯತೆ ಎದುರಾಗಿದೆ.
ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಜನೆಗೆ ಚಾಲನೆ ನೀಡಿದರು. ಜೊತೆಯಲ್ಲಿ ಮನೆ ಮನೆಗೆ ಕಾಂಗ್ರೆಸ್ ಮತ್ತು ಇಂದಿರಾಗಾಂಧಿ ದೀಪ ನಮನ ಕಾರ್ಯಕ್ರಮಗಳ ಪರಾಮರ್ಶೆ ನಡೆಯಲಿದ್ದು, ಬೂತ್‍ಮಟ್ಟದ ಸಮಿತಿಗಳ ರಚನೆಯಲ್ಲಿನ ವ್ಯತ್ಯಾಸಗಳ ಕುರಿತು ಚರ್ಚಿಸಲಾಯಿತು.
ಕೆಲವು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಶಾಸಕರು ಮತ್ತು ಸಚಿವರ ಅಸಹಕಾರದ ಬಗ್ಗೆ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin