ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಹೆಗ್ಡೆಗೆ 6ನೆ ಸ್ಥಾನ ನೀಡಿದ್ದಕ್ಕೆ ಬಿಜೆಪಿಯಲ್ಲೇ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

Anant--kumar-Hegde--01

ಬೆಂಗಳೂರು, ಜ.30- ವಿಧಾನಸಭೆ ಚುನಾವಣೆಗೆ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆಗೆ 6ನೆ ಸ್ಥಾನ ನೀಡಿರುವುದು ರಾಜ್ಯ ಬಿಜೆಪಿಯಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದಾಗಿಯೇ ಕೇಂದ್ರ ವರಿಷ್ಠರು 75 ಮಂದಿ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಕಳುಹಿಸಿದ್ದರೂ ಈವರೆಗೂ ಬಿಡುಗಡೆ ಮಾಡಿಲ್ಲ.

ರಾಜ್ಯ ಘಟಕದಿಂದ ಕಳುಹಿಸಲಾಗಿದ್ದ ಪ್ರಚಾರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಮೊದಲ ಸ್ಥಾನ ನೀಡಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎರಡನೆ ಸ್ಥಾನ ಪಡೆದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೂರನೆ ಸ್ಥಾನ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ 4ನೆ ಸ್ಥಾನ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ 5ನೆ ಸ್ಥಾನ ಹಾಗೂ ಮತ್ತೋರ್ವ ಸಚಿವ ಅನಂತಕುಮಾರ್ ಹೆಗ್ಡೆ 6ನೆ ಸ್ಥಾನ ಪಡೆದಿದ್ದಾರೆ. ಇದ್ದಕ್ಕಿದ್ದಂತೆ ಅನಂತಕುಮಾರ್ ಹೆಗ್ಡೆ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ 6ನೆ ಸ್ಥಾನ ಪಡೆದಿರುವುದು ಬಿಜೆಪಿಯ ಕೆಲವು ನಾಯಕರ ಕಣ್ಣು ಕೆಂಪಾಗುವಂತೆ ಮಾಡಿದೆ. ಕಳೆದ ವಾರವೇ ಬಿಜೆಪಿ ಚುನಾವಣಾ ಸಮಿತಿ ಪ್ರಚಾರಕರ ಪಟ್ಟಿಯನ್ನು ಸಿದ್ಧಪಡಿಸಿ ಬೆಂಗಳೂರಿನ ಕಚೇರಿಗೆ ಕಳುಹಿಸಿಕೊಟ್ಟಿತ್ತು. ಇದ್ದಕ್ಕಿದ್ದಂತೆ ಅನಂತಕುಮಾರ್ ಹೆಗ್ಡೆ 6ನೆ ಸ್ಥಾನದಲ್ಲಿರುವುದರಿಂದ ಸ್ಥಳೀಯ ನಾಯಕರಿಗೆ ತೀವ್ರ ಇರಿಸು ಮುರಿಸು ಉಂಟಾಗಿದೆ.

ಹಾಲಿ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿಯಾದ ಡಿ.ವಿ.ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಹಾಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಹಾಲಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಅವರನ್ನು ಹಿಂದಿಕ್ಕಿ ಅನಂತಕುಮಾರ್ ಹೆಗ್ಡೆಗೆ 6ನೆ ಸ್ಥಾನ ನೀಡಿರುವುದು ಅಸಮಾಧಾನಕ್ಕೆ ಮೂಲ ಕಾರಣವಾಗಿದೆ. ಈ ಉದ್ದೇಶದಿಂದಲೇ ರಾಜ್ಯ ಬಿಜೆಪಿ ಘಟಕದ ನಾಯಕರು ಪ್ರಚಾರ ಪಟ್ಟಿಯನ್ನು ಬಿಡುಗಡೆ ಮಾಡದೆ ಮತ್ತೊಮ್ಮೆ ಪರಿಷ್ಕರಣೆ ಮಾಡುವಂತೆ ವರಿಷ್ಠರಿಗೆ ಮನವಿ ಮಾಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಶಿಷ್ಟಾಚಾರ ಹಾಗೂ ಸೇವಾ ಹಿರಿತನದ ಪ್ರಕಾರ ಹಾಲಿ ಸಚಿವರಿಗೆ ಮೊದಲ ಸ್ಥಾನ ನೀಡಬೇಕು. ವಯಸ್ಸು ಹಾಗೂ ಪಕ್ಷಕ್ಕೆ ಸಲ್ಲಿಸಿರುವ ಸೇವೆಯಲ್ಲಿ ಸದಾನಂದಗೌಡ, ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ , ರಮೇಶ್ ಜಿಗಜಿಣಗಿ , ಹೆಗ್ಡೆಗಿಂತಲೂ ಮೊದಲ ಸ್ಥಾನ ಪಡೆಯಬೇಕು. ಕೇಂದ್ರ ಸಂಪುಟ ಪುನರ್ ರಚನೆ ವೇಳೆ ಎಲ್ಲರ ನಿರೀಕ್ಷೆಗಳನ್ನು ತಲೆ ಕೆಳಗೆ ಮಾಡಿ ಅನಂತಕುಮಾರ್ ಹೆಗ್ಡೆಗೆ ಮಂತ್ರಿ ಸ್ಥಾನ ನೀಡಲಾಗಿತ್ತು. ಆ ಸಂದರ್ಭದಲ್ಲೂ ಕೆಲ ಬಿಜೆಪಿ ನಾಯಕರು ಕೈ ಕೈ ಹಿಚುಕಿಕೊಂಡರೂ ವರಿಷ್ಠರ ಆದೇಶಕ್ಕೆ ತಲೆ ಬಾಗಿ ಯಾರೊಬ್ಬರೂ ತುಟಿ ಬಿಚ್ಚಲು ಸಾಧ್ಯವಾಗಲಿಲ್ಲ.

ಇದೀಗ ಹೆಗ್ಡೆ 6ನೆ ಸ್ಥಾನದಲ್ಲಿರುವುದರಿಂದ ವರಿಷ್ಠರ ಬಳಿ ಹೇಳಲು ಆಗದೆ ಪಟ್ಟಿಯನ್ನು ಒಪ್ಪಿಕೊಳ್ಳಲು ಆಗದ ಸ್ಥಿತಿಯಲ್ಲಿದ್ದಾರೆ ರಾಜ್ಯ ಬಿಜೆಪಿ ನಾಯಕರು. ಕಳೆದ ಹಲವು ದಿನಗಳಿಂದ ಹೆಗ್ಡೆ ಕೂಡ ಬಿಜೆಪಿಯಲ್ಲಿ ಮುಂಚೂಣಿ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಅವರ ಕೆಲವು ಮಾತುಗಳು ಪಕ್ಷಕ್ಕೆ ಮುಜುಗರ ಸೃಷ್ಟಿಸಿದ್ದರೂ ಹಿಂದೂ ಮತಗಳ ಧೃವೀಕರಣಕ್ಕಾಗಿ ಹೆಗ್ಡೆಯನ್ನು ಸ್ಟಾರ್ ಪ್ರಚಾರಕರನ್ನಾಗಿ ಬಿಜೆಪಿ ಮುಂದೆ ಬಿಟ್ಟಿದೆ.  ಮುಖ್ಯವಾಗಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ , ಉಡುಪಿ, ಹಾಗೂ ಮಡಿಕೇರಿ, ಹುಬ್ಬಳ್ಳಿ, ಧಾರವಾಡ, ಚಿಕ್ಕಮಗಳೂರು, ಶಿವಮೊಗ್ಗ , ಬೆಳಗಾವಿ, ಬೀದರ್, ಬಾಗಲಕೋಟೆ ಮತ್ತಿತರ ಕಡೆ ಹಿಂದೂ ಮತಗಳನ್ನೇ ಕೇಂದ್ರೀಕರಿಸಿ ಅವರು ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ. ಮತ್ತೊಂದೆಡೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಹೆಗ್ಡೆ ಸಾಥ್ ನೀಡಲಿದ್ದಾರೆ. ಉಳಿದಂತೆ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್, ನಿರ್ಮಲಾ ಸೀತಾರಾಮನ್ ಮತ್ತಿತರರು ಸ್ಥಾನ ಪಡೆದಿದ್ದಾರೆ.

Facebook Comments

Sri Raghav

Admin