ದಿಬ್ಬೂರಿನಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 1200 ಮನೆಗಳ ನಿರ್ಮಾಣದಲ್ಲಿ ಅವ್ಯವಹಾರ

ಈ ಸುದ್ದಿಯನ್ನು ಶೇರ್ ಮಾಡಿ

Sogadu-shivanna

ತುಮಕೂರು, ಜ.31- ದಿಬ್ಬೂರಿನಲ್ಲಿ ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಲಾಗಿರುವ 1200 ಮನೆಗಳಲ್ಲಿ ಭಾರೀ ಅವ್ಯವಹಾರವಾಗಿದ್ದು , ಕೂಡಲೇ ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ನಾನು ಸಚಿವನಾಗಿದ್ದ ವೇಳೆ 7 ಸ್ಲಂಗಳ ನಿವೇಶನ ರಹಿತ ನಿವಾಸಿಗಳು, ಕಡು ಬಡವರು, ಹಂದಿ ಜೋಗರು ಸೇರಿದಂತೆ ಇತರೆ ಜಾತಿಗಳ ಪರ ಪಟ್ಟಿ ಮಾಡಿ ಜಿಲ್ಲಾಡಳಿತಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ ಅನುಮತಿ ಕೂಡ ಪಡೆಯಲಾಗಿತ್ತು. ಅಷ್ಟರಲ್ಲಿ ನಮ್ಮ ಸರ್ಕಾರವು ಹೋಯ್ತು, ನಾನು ಸೋತಿದ್ದೆ. ನಂತರ ಬಂದ ಶಾಸಕ ಡಾ.ರಫೀಕ್ ಅಹಮದ್ ಅವರು ನಾವು ಮಾಡಿದ ಕಾಮಗಾರಿಯನ್ನು ಸಿಎಂ ಅವರನ್ನು ಕರೆಸಿಕೊಂಡು ಚಾಲನೆ ನೀಡಿ ತಮ್ಮ ಹಿಂಬಾಲಕರು ಮತ್ತು ಸಮುದಾಯದವರಿಗೆ ಮನೆಗಳನ್ನು ಕೊಡುವ ಮೂಲಕ ನಿಜವಾದ ಫಲಾನುಭವಿಗಳಿಗೆ ಭಾರೀ ವಂಚನೆ ಮಾಡಿದ್ದಾರೆ ಎಂದು ನಗರದ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಾವು ಈ ಹಿಂದೆ ಸಲ್ಲಿಸಿದ ಪಟ್ಟಿಯ ಮುಖ ಪುಟ ಮಾತ್ರ ನಮ್ಮದು ಇದೆ. ಆದರೆ ಒಳಗಡೆ ನಾವು ಆಯ್ಕೆ ಮಾಡಿದ ಪಟ್ಟಿಯನ್ನು ತೆಗೆದು ಇವರು ಮಾಡಿದ ಪಟ್ಟಿಯನ್ನು ಲಗತ್ತಿಸಿದ್ದಾರೆ. ಇದನ್ನು ಜಿಲ್ಲಾಧಿಕಾರಿಗಳು ತನಿಖೆ ನಡೆಸಬೇಕು ಎಂದರು. ನಮ್ಮ ಸರ್ಕಾರವಿದ್ದಾಗ ತುಮಕೂರು ನಗರವನ್ನು ಕೊಳಗೇರಿ ಮುಕ್ತ ನಗರವನ್ನಾಗಿ ಮಾಡುವ ಹಿನ್ನೆಲೆಯಲ್ಲಿ ಯೋಜನೆಯನ್ನು ರೂಪಿಸಲಾಗಿತ್ತು. ತುಮಕೂರು ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ ಈ ಯೋಜನೆಯನ್ನು ಪೈಲೈಟ್ ಯೋಜನೆಯಾಗಿ ಹಿಂದಿನ ಬಿಜೆಪಿ ಸರ್ಕಾರ ಕೈಗೊಂಡಿತ್ತು. ಇರುವ ಎಲ್ಲಾ ಷರತ್ತುಗಳನ್ನು ಗಾಳಿಗೆ ತೂರಿ ಅಲ್ಲಿನ ನಿವಾಸಿಗಳಿಗೆ ತರಾತುರಿಯಲ್ಲಿ ಹಕ್ಕು ಪತ್ರ ವಿತರಣೆ ಮಾಡಲು ಹೊರಟಿದ್ದು , ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಇದೊಂದು ಗಿಮಿಕ್ ಮಾಡುತ್ತಿದ್ದಾರೆ ಎಂದರು. ಗೋಷ್ಠಿಯಲ್ಲಿ ಎಂ.ಬಿ.ನಂದೀಶ್, ಕೆ.ಪಿ.ಮಹೇಶ್, ಶಿವಣ್ಣ, ಗೋಪಾಲ್ , ಪಂಚಾಕ್ಷರಯ್ಯ ಸೇರಿದಂತೆ ಮತ್ತಿತರರು ಇದ್ದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin