ಬಿಜೆಪಿ ಬಿಟ್ಟು ಕಾಂಗ್ರೆಸ್‍ ಸೇರಿದ ವಿಜಯನಗರ ಶಾಸಕ ಆನಂದ್ ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Anand-Singh--01

ಬೆಂಗಳೂರು, ಜ.31- ಬಿಜೆಪಿ ತೊರೆದ ಬಳ್ಳಾರಿಯ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಆನಂದ್‍ಸಿಂಗ್ ಇಂದು ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷರಾದ ಎಸ್.ಆರ್.ಪಾಟೀಲ್, ದಿನೇಶ್ ಗುಂಡೂರಾವ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆ.ಸಿ.ಕೊಂಡಯ್ಯ, ಮಾಜಿ ಸಚಿವ ಅನಿಲ್‍ಲಾಡ್ ಮುಂತಾದವರು ಪಕ್ಷದ ಧ್ವಜ ನೀಡಿ ಆನಂದ್‍ಸಿಂಗ್ ಅವರನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಆನಂದ್‍ಸಿಂಗ್, ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತಗಳನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಜಾತ್ಯತೀತ ತತ್ವ-ಸಿದ್ಧಾಂತಗಳು ಈ ಪಕ್ಷದಲ್ಲಿವೆ. ಅದೇ ಸಿದ್ಧಾಂತಗಳಲ್ಲಿ ನಂಬಿಕೆಯಿರುವ ನಾನು ಈ ಪಕ್ಷಕ್ಕೆ ಬಂದಿದ್ದೇನೆ. ಬಳ್ಳಾರಿ ಜಿಲ್ಲೆಯ 9 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವ ಗುರಿ ಹೊಂದಿದ್ದೇವೆ. ಸಿದ್ದರಾಮಯ್ಯನವರು ರಾಜ್ಯ ಕಂಡ ಅತ್ಯಂತ ಖಡಕ್ ಮುಖ್ಯಮಂತ್ರಿ ಎಂದು ಅವರು ಬಣ್ಣಿಸಿದರು.  ಬಳ್ಳಾರಿಯಲ್ಲಿ 10ರಂದು ರಾಹುಲ್‍ಗಾಂಧಿಯವರ ನೇತೃತ್ವದಲ್ಲಿ ಬೃಹತ್ ಎಸ್‍ಟಿ ಸಮಾವೇಶ ನಡೆಯಲಿದೆ. ಅದನ್ನು ಯಶಸ್ವಿಗೊಳಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಜಾತ್ಯತೀತ ತತ್ವಗಳಲ್ಲಿ ನಂಬಿಕೆ ಇರುವವರೆಲ್ಲರೂ ಕಾಂಗ್ರೆಸ್ ಪಕ್ಷ ಸೇರಬೇಕು. ಕೋಮುವಾದಿಗಳು ಅಧಿಕಾರದಲ್ಲಿರಬಾರದು ಎಂದು ಹೇಳಿದರು. ಆನಂದ್‍ಸಿಂಗ್ ಅವರು ಕಾಂಗ್ರೆಸ್ ಸೇರುವ ಒಳ್ಳೆಯ ತೀರ್ಮಾನ ಮಾಡಿದ್ದಾರೆ. ಸರ್ಕಾರ ಟಿಪ್ಪು ಜಯಂತಿ ಆಚರಿಸುವ ಸಂದರ್ಭದಲ್ಲಿ ಭಾಗಿಯಾಗುವುದಾಗಿ ಅವರು ಹೇಳಿದ್ದ ಸಂದರ್ಭದಲ್ಲಿಯೇ ಅವರ ಜಾತ್ಯತೀತ ಧೋರಣೆ ಅರ್ಥವಾಗಿತ್ತು.

ಜಾತ್ಯತೀತ ಮನೋಭಾವದವರಾರೂ ಬಿಜೆಪಿಯಲ್ಲಿ ಇರಬಾರದು. 2018ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬಾರದು. ಅದು ಗೆದ್ದರೆ ರಾಜ್ಯದಲ್ಲಿ ಶಾಂತಿ-ನೆಮ್ಮದಿ ಹಾಳಾಗುತ್ತದೆ ಎಂದು ಹೇಳಿದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ಆನಂದ್‍ಸಿಂಗ್ ಅವರು ಕಾಂಗ್ರೆಸ್ ಪಕ್ಷ ಸೇರಿರುವುದು ಹೆಚ್ಚಿನ ಬಲ ಬಂದಂತಾಗಿದೆ. ಅವರು ಪ್ರಾಥಮಿಕ ಸದಸ್ಯತ್ವ ಪಡೆದಿದ್ದು, ಪಕ್ಷ ಅವರಿಗೆ ಬೆಂಬಲ ನೀಡಲಿದೆ. ಪಕ್ಷ ಸಂಘಟನೆಯ ಕೆಲಸವನ್ನು ಅವರು ಮಾಡಲಿದ್ದಾರೆ ಎಂದು ತಿಳಿಸಿದರು. ಮಾಜಿ ಸಚಿವ ಸಂತೋಷ್ ಲಾಡ್ ಮಾತನಾಡಿ, ಆನಂದ್‍ಸಿಂಗ್ ವಿಭಿನ್ನ ರಾಜಕಾರಣಿ. ಬಳ್ಳಾರಿಯಲ್ಲಿ 9 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸುವ ಪ್ರಾಮಾಣಿಕ ಪ್ರಯತ್ನವನ್ನು ನಾವೆಲ್ಲ ಮಾಡಲಿದ್ದೇವೆ. ರಾಹುಲ್‍ಗಾಂಧಿಯವರ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದು ತಿಳಿಸಿದರು.

ಹಿರಿಯ ಕಾಂಗ್ರಸ್ ಮುಖಂಡ ಕೆ.ಸಿ.ಕೊಂಡಯ್ಯ ಮಾತನಾಡಿ, ಆನಂದ್‍ಸಿಂಗ್ ಸೇರ್ಪಡೆಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಅವರ ಮೇಲೆ ಪ್ರಕರಣಗಳಿದ್ದರೆ ಪಕ್ಷಕ್ಕೂ ಅದಕ್ಕೂ ಸಂಬಂಧವಿಲ್ಲ. ಅದನ್ನು ಅವರು ವೈಯಕ್ತಿಕವಾಗಿ ನಿಭಾಯಿಸಲಿದ್ದಾರೆ ಎಂದು ಹೇಳಿದರು.  ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಹಲವಾರು ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ವಿಜಯನಗರ ಸೈನ್ಯ ಕಾಂಗ್ರೆಸ್ ಪ್ರಚಾರದಲ್ಲಿ ತೊಡಗಿದೆ. ಬಳ್ಳಾರಿಯ ರಾಹುಲ್ ಕಾರ್ಯಕ್ರಮ ಶಕ್ತಿ ಪ್ರದರ್ಶನದ ವೇದಿಕೆಯಾಗಬೇಕು. ಅದರ ಯಶಸ್ವಿಯಿಂದ ಬಿಜೆಪಿಯ ಮತ್ತಷ್ಟು ಶಾಸಕರು ಕಾಂಗ್ರೆಸ್‍ಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದರು.

Facebook Comments

Sri Raghav

Admin