ಈ ಬಾರಿಯೂ ನಮ್ಮ ನಿರೀಕ್ಷೆ ಹುಸಿಯಾಗಿದೆ : ಕಾಸಿಯಾ ಕಾರ್ಯದರ್ಶಿ ಉಮಾಶಂಕರ್
ಬೆಂಗಳೂರು, ಫೆ.1- ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ನಮ್ಮ ನಿರೀಕ್ಷೆಯನ್ನು ಹುಸಿಗೊಳಿಸಿದೆ ಎಂದು ಕಾಸಿಯಾ ಅಭಿಪ್ರಾಯಪಟ್ಟಿದೆ. ಕಳೆದ ಹಲವಾರು ವರ್ಷಗಳಿಂದ ಕಡತದಲ್ಲೇ ಉಳಿದುಕೊಂಡಿರುವ ಸಣ್ಣ ಕೈಗಾರಿಕೆಗಳ ಕಾಯ್ದೆಗೆ ಅನುಮೋದನೆ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿರುವುದರಿಂದ ನಮ್ಮ ನಿರೀಕ್ಷೆ ಈ ಬಾರಿಯೂ ಹುಸಿಯಾಗಿದೆ ಎಂದು ಕಾಸಿಯಾ ಕಾರ್ಯದರ್ಶಿ ಉಮಾಶಂಕರ್ ಅಭಿಪ್ರಾಯಪಟ್ಟಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು, ಅರುಣ್ ಜೇಟ್ಲಿ ಅವರು ಬಜೆಟ್ನಲ್ಲಿ ಸಣ್ಣ ಕೈಗಾರಿಕೆಗಳ ಕಲ್ಯಾಣಕ್ಕೆ ಮನಸ್ಸು ಮಾಡಿಲ್ಲ ಎಂದು ಅವರು ಆರೋಪಿಸಿದರು.
ಮೂಲಭೂತ ಸೌಕರ್ಯ ಅಭಿವೃದ್ಧಿಗೆ 9 ಸಾವಿರ ಕೋಟಿ ರೂ.ಗಳನ್ನು ನಿಗದಿಪಡಿಸಿದ್ದರೂ ಯಾವ ವಿಭಾಗಕ್ಕೆ ಎಷ್ಟು ಹಣ ದೊರೆಯಲಿದೆ ಎಂಬ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಬ್ಯಾಂಕ್ ಬಡ್ಡಿದರ, ಆದಾಯ ತೆರಿಗೆಯಲ್ಲೂ ಯಾವುದೇ ವಿನಾಯಿತಿ ಘೋಷಣೆ ಮಾಡದಿರುವ ಕೇಂದ್ರ ಸರ್ಕಾರದ ಬಜೆಟ್ ನಿರಾಶಾದಾಯಕವಾಗಿದೆ ಎಂದು ಉಮಾಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಸಮಷ್ಠಿ ಬಜೆಟ್ : ಎಫ್ಕೆಸಿಸಿಐ
ಬೆಂಗಳೂರು, ಫೆ.1- ಕೇಂದ್ರ ಹಣಕಾಸು ಸಚಿವ ಅರುಣ್ಜೇಟ್ಲಿ ಮಂಡಿಸಿರುವ ಬಜೆಟ್ ಭವಿಷ್ಯದಲ್ಲಿ ಭಾರತದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಿದೆ ಎಂದು ಎಫ್ಕೆಸಿಸಿಐ ಅಧ್ಯಕ್ಷ ರವಿ ಅಭಿಪ್ರಾಯಪಟ್ಟರು. ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ರೈತರ ಉತ್ಪನ್ನಕ್ಕೆ ವೈಜ್ಞಾನಿಕ ಬೆಲೆ ಕೊಡಲಾಗಿದೆ. 250 ಕೋಟಿ ರೂ. ಒಳಗಿನ ವಹಿವಾಟು ನಡೆಸುವ ಕಂಪೆನಿಗಳಿಗೆ ಶೇ.5ರಷ್ಟು ತೆರಿಗೆ ರಿಯಾಯ್ತಿ ನೀಡಲಾಗಿದೆ. ವೇತನ ದಾರರಿಗೆ ಸಾಕಷ್ಟು ತೆರಿಗೆ ಅನುಕೂಲ ಮಾಡಿಕೊಡಲಾಗಿದೆ. ಕ್ರಿಪೆÇ್ಟೀ ಕರೆನ್ಸಿ ಮತ್ತು ಬಿಟ್ ಕಾಯಿನ್ಗಳನ್ನು ನಿಷೇಧಿಸುವ ಮೂಲಕ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಉತ್ಪಾದನಾ ವಲಯಕ್ಕೆ ಸಾಕಷ್ಟು ಅನುಕೂಲಗಳಾಗಿವೆ. ಇದರಿಂದ ಕೈಗಾರಿಕಾಭಿವೃದ್ಧಿ ಹೆಚ್ಚಾಗಲಿದ್ದು, ಮುಂದಿನ ದಿನಗಳಲ್ಲಿ ದೇಶದ ಅಭಿವೃದ್ಧಿಗೆ ನೆರವಾಗಲಿದೆ ಎಂದು ತಿಳಿಸಿದರು.