ಸದಾನಂದಗೌಡರ ವಿರುದ್ಧ ರಾಮಲಿಂಗಾರೆಡ್ಡಿ ಕಿಡಿ

ಈ ಸುದ್ದಿಯನ್ನು ಶೇರ್ ಮಾಡಿ

Ramalingareddy-01

ಬೆಂಗಳೂರು, ಫೆ.1- ಹಿಂದು ಸಂಘಟನೆಗಳ ಕಾರ್ಯಕರ್ತರು ಹಾಗೂ ಮುಖಂಡರಿಂದ ಹತ್ಯೆಯಾದವರನ್ನು ಸ್ಮರಿಸದೆ ರಾಜಕಾರಣ ಮಾಡುತ್ತಿರುವ ಬಿಜೆಪಿಗೆ ಹಿಂದು ಕುಟುಂಬಗಳ ಶಾಪ ತಟ್ಟುವುದಿಲ್ಲವೇ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ. ಕೇಂದ್ರ ಸಚಿವ ಸದಾನಂದಗೌಡ ಅವರ ಹೇಳಿಕೆಗೆ ತೀಕ್ಷಣವಾಗಿ ಪ್ರತಿಕ್ರಿಯಿಸಿರುವ ಅವರು, ಚುನಾವಣೆ ಸಂದರ್ಭದಲ್ಲಿ ಸುಳ್ಳು ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ. ಜಕಾರಣಕ್ಕಾಗಿ ಕೊಲೆ ಪ್ರಕರಣವನ್ನು ಬಳಸಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.  ಬಿಜಾಪುರದ ದಾನಮ್ಮಳ ಕೊಲೆ ಮಾಡಿದ್ದು ಬಿಜೆಪಿ ಕಾರ್ಯಕರ್ತರೇ. ಮೂಡಿಗೆರೆಯ ಧನ್ಯಶ್ರೀ ಸಾವಿಗೆ ಬಿಜೆಪಿ ಮುಖಂಡ ಕಾರಣರಲ್ಲವೆ ? ಉಡುಪಿಯ ಪ್ರವೀಣ್ ಪೂಜಾರಿ ಕೊಲೆಯಲ್ಲಿ ಭಾಗಿಯಾಗಿದ್ದು ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರಲ್ಲವೆ. ಭಂಟ್ವಾಳದ ಹರೀಶ್ ಪೂಜಾರಿ ಕೊಲೆ ಪ್ರಕರಣದಲ್ಲಿ ಸಂಘ ಪರಿವಾರ ನಾಯಕರ ಬಂಧನವಾಗಲಿಲ್ಲವೆ ಎಂದು ವಿವರಗಳನ್ನು ಗೃಹ ಸಚಿವರು ಮುಂದಿಟ್ಟಿದ್ದಾರೆ.

ಕಾರ್ತಿಕ್‍ರಾಜ್ ಕೊಲೆ ಪ್ರಕರಣದ ತನಿಖೆಯ ಹಾದಿ ತಪ್ಪಿಸಲು ಬಿಜೆಪಿಯ ಸಂಸದರು ಮಂಗಳೂರಿಗೆ ಬೆಂಕಿ ಹಚ್ಚುವುದಾಗಿ ಹೇಳಿಕೆ ನೀಡಿದ್ದನ್ನು ಮರೆಯಲಾದೀತೆ. ನಯ್‍ಬಾಳಿಗ ಕೊಲೆಗೆ ಕಾರಣರ್ಯಾರು ? ಇವರೆಲ್ಲಾ ಹಿಂದುಗಳಲ್ಲವೆ. ಇವರ ತಂದೆ-ತಾಯಿಗಳ ಶಾಪ ಬಿಜೆಪಿಯವರಿಗೆ ತಟ್ಟುವುದಿಲ್ಲವೆ ಎಂದು ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ಕಾರ್ಯಕರ್ತರಿಂದ ಕೊಲೆಯಾದ ದಲಿತ ಹಾಗೂ ಹಿಂದುಗಳ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ದೊಡ್ಡ ಮನಸ್ಸು ನಿಮಗೆ ಇಲ್ಲವೆ ಎಂದು ಕೇಂದ್ರ ಸಚಿವರನ್ನು ಪ್ರಶ್ನಿಸಿರುವ ರಾಮಲಿಂಗಾರೆಡ್ಡಿ, ಕೊಲೆಯನ್ನು ಅಪರಾಧವನ್ನಾಗಿಯೇ ನೋಡಿ. ಅದರಲ್ಲಿ ರಾಜಕಾರಣ ಬೆರಸಬೇಡಿ. ರಾಜ್ಯ ಸರ್ಕಾರ ಎಲ್ಲಾ ಪ್ರಕರಣಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳನ್ನು ಜೈಲಿಗಟ್ಟಿದೆ. ಮುಂದಿನ ಚುನಾವಣೆಯಲ್ಲಿ ಜನ ಬೆಂಕಿ ಹಚ್ಚುವರು ಬೇಕೋ ಅಥವಾ ಆರಿಸುವ ಜನ ಬೇಕೋ ಎಂಬುದನ್ನು ನಿರ್ಧರಿಸುತ್ತಾರೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವ ಹಗಲು ಕನಸು ಕಾಣಬೇಡಿ. ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರವೇ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ. ಕೊಲೆ ಪ್ರಕರಣವನ್ನು ಸಮರ್ಥವಾಗಿ ತನಿಖೆ ನಡೆಸಿ ಅಪರಾಧಿಗಳನ್ನು ಬಂಧಿಸುವ ನಮ್ಮ ಪೊಲೀಸರಿಗೆ ಇದೆ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.

Facebook Comments

Sri Raghav

Admin