ಫೆ.5 ರಿಂದ ವಿಧಾನಮಂಡಲ ಅಧಿವೇಶನ ಪ್ರಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

Vidhana

ಬೆಂಗಳೂರು, ಫೆ.2- ಇದೇ 5ರ ಸೋಮವಾರದಿಂದ ಫೆ.28ರವರೆಗೆ ವಿಧಾನಮಂಡಲದಲ್ಲಿ ಎರಡು ಅಧಿವೇಶನಗಳು ನಡೆಯಲಿವೆ ಎಂದು ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಇಂದಿಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಜಾ ದಿನ ಹೊರತುಪಡಿಸಿ ಎರಡು ಅಧಿವೇಶನಗಳನ್ನು ನಡೆಸಲಾಗುತ್ತಿದ್ದು, ಈ ವರ್ಷದ ಮೊದಲ ಅಧಿವೇಶನ ಇದಾಗಿದೆ.

ರಾಜ್ಯಪಾಲರ ಭಾಷಣದೊಂದಿಗೆ ಅಧಿವೇಶನ ಆರಂಭವಾಗಲಿದ್ದು, ಒಟ್ಟು 5 ದಿನಗಳು ನಡೆಯಲಿವೆ. ಫೆ.5ರ ಬೆಳಗ್ಗೆ 11 ಗಂಟೆಗೆ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ನಂತರ 5 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಫೆ.16 ರಿಂದ ಬಜೆಟ್ ಅಧಿವೇಶನ ನಡೆಯಲಿದೆ ಎಂದು ವಿವರಿಸಿದರು. ಒಟ್ಟು 14 ದಿನಗಳು ಅಧಿವೇಶನ ನಡೆಯಲಿದ್ದು, ಮೊದಲ ದಿನ ಇತ್ತೀಚೆಗೆ ಅಗಲಿದ ಗಣ್ಯರಿಗೆ ಎರಡೂ ಸದನಗಳಲ್ಲಿ ಪ್ರತ್ಯೇಕವಾಗಿ ಸಂತಾಪ ಸೂಚಿಸಲಾಗುವುದು. ವಿಧಾನಸಭೆಯಲ್ಲಿ ಫೆ.6 ರಿಂದ 9 ರವರೆಗೆ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಾಗಲಿದೆ ಎಂದು ಮಾಹಿತಿ ನೀಡಿದರು. ಫೆ.16 ರಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಲಿದ್ದು, ವಿಧಾನಪರಿಷತ್‍ನ ಸಭಾನಾಯಕರು ಅದರ ಪ್ರತಿಯನ್ನು ಮಂಡಿಸಲಿದ್ದಾರೆ. 28ರವರೆಗೂ ಬಜೆಟ್ ಮೇಲಿನ ಚರ್ಚೆ ನಡೆಯಲಿದೆ ಎಂದು ಹೇಳಿದರು.

2005ರಲ್ಲಿ ಎರಡೂ ಸದನಗಳಲ್ಲಿ ಕನಿಷ್ಠ ಪ್ರತಿವರ್ಷ 60 ದಿನಗಳ ಕಲಾಪ ನಡೆಸುವ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ 2015ರಲ್ಲಿ ಮಾತ್ರ 60 ದಿನಗಳ ಕಲಾಪ ನಡೆದಿದೆ. ಉಳಿದಂತೆ ಇನ್ಯಾವುದೇ ವರ್ಷದಲ್ಲಿ 60 ದಿನಗಳ ಕಲಾಪ ನಡೆಸಲಾಗಿಲ್ಲ. ಕಳೆದ ವರ್ಷ ಮಾತ್ರ 40 ದಿನ ಕಲಾಪ ನಡೆದಿತ್ತು. ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲಾಗಿದ್ದ ಮೂರು ವಿಧೇಯಕಗಳು ಈ ಅಧಿವೇಶನದಲ್ಲಿ ಚರ್ಚೆಗೆ ಬರಲಿದೆ ಎಂದ ಅವರು, ಸಭಾಪತಿಯಾದ ಈ ಎಂಟು ವರ್ಷಗಳ ಅನುಭವದಲ್ಲಿ 15 ರಿಂದ 16ರಷ್ಟು ವಿಧೇಯಕಗಳು ಮಾತ್ರ ಸಂಪೂರ್ಣ ಚರ್ಚೆಗೊಳಪಟ್ಟು ಅನುಮೋದನೆಗೊಂಡಿವೆ. 100ರಷ್ಟು ವಿಧೇಯಕಗಳು ಚರ್ಚೆಯಿಲ್ಲದೆ ಅನುಮೋದನೆಗೊಂಡಿವೆ ಎಂದರು. ತರಾತುರಿಯಲ್ಲಿ ವಿಧೇಯಕಗಳು ಮಂಡನೆಯಾಗಿ ಅನುಮೋದನೆ ಪಡೆಯಬಾರದು. ಯಾವುದೇ ವಿಧೇಯಕಗಳ ಬಗ್ಗೆ ಸೂಕ್ತ ರೀತಿಯಲ್ಲಿ ಚರ್ಚೆಯಾಗಲು ಸಮಯಾವಕಾಶ ಬೇಕು ಎಂದರು. ಶಾಸಕರ ವೇತನ ಹೆಚ್ಚಳ ಸೇರಿದಂತೆ ಇನ್ನಿತರ ಹಲವಾರು ವಿಧೇಯಕಗಳು ಈ ಬಾರಿ ಅಧಿವೇಶನದಲ್ಲಿ ಚರ್ಚೆಯಾಗಲಿದ್ದು, ಶಾಸಕರ ವೇತನ ಹೆಚ್ಚಳ ಕುರಿತ ವಿಧೇಯಕ ಚರ್ಚೆಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.

Facebook Comments

Sri Raghav

Admin