ಸಂತೋಷ್ ಕೊಲೆಯಾಗಿದ್ದು ಗಾಂಜಾ ವಿಚಾರಕ್ಕೆ..!
ಬೆಂಗಳೂರು, ಫೆ.2- ಗಾಂಜಾ ವಿಚಾರದಲ್ಲಿ ಸಂತೋಷನ ಕೊಲೆಯಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಚೇತನ್ಸಿಂಗ್ ರಾಥೋಡ್ ಸ್ಪಷ್ಟಪಡಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು, ಇದುವರೆಗೂ ನಡೆಸಿದ ತನಿಖೆಯಿಂದ ಗಾಂಜಾ ವಿಷಯದಲ್ಲೇ ಕೊಲೆ ನಡೆದಿರುವುದು ತಿಳಿದು ಬಂದಿದ್ದು, ಬಂಟಿಗ್ಸ್ ಕಟ್ಟುವ ವಿಚಾರದಲ್ಲಿ ಈ ಕೊಲೆ ನಡೆದಿಲ್ಲ ಎಂದು ತಿಳಿಸಿದರು. ನಾವು ಈಗಾಗಲೇ ಸಂತೋಷ್ ಕುಟುಂಬದವರು, ಸ್ನೇಹಿತರು, ಬಂಧಿತ ಆರೋಪಿಗಳು, ಸುತ್ತಮುತ್ತಲ ನಿವಾಸಿಗಳು, ಘಟನೆ ನಡೆದ ಸ್ಥಳದಲ್ಲಿನ ಬೇಕರಿ ಮಾಲೀಕರು, ಕೆಲಸಗಾರರಿಂದಲೂ ಮಾಹಿತಿ ಕಲೆ ಹಾಕಿದ್ದೇವೆ. ಈ ಎಲ್ಲಾ ವಿಚಾರಗಳನ್ನು ಆಧರಸಿ ಗಾಂಜಾ ವಿಷಯಕ್ಕಾಗಿ ಸಂತೋಷನ ಕೊಲೆ ಮಾಡಿರುವುದು ಕಂಡು ಬಂದಿದೆ ಎಂದು ಹೇಳಿದರು.
ಈಗಾಗಲೇ ಕೊಲೆ ನಡೆದ 24 ಗಂಟೆಯೊಳಗೆ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ನಿನ್ನೆ ಜೆ.ಸಿ.ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಇಂದೂ ಸಹ ಆ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮುಂದುವರೆಸಲಾಗಿದೆ ಎಂದರು. ಕೊಲೆಯಾಗಿರುವ ಸಂತೋಷ್ ಹಾಗೂ ಪ್ರಮುಖ ಆರೋಪಿ ಅಕ್ಕಪಕ್ಕ ಬೀದಿಯ ನಿವಾಸಿಗಳಾಗಿದ್ದು, ಇವರಿಬ್ಬರು ಮೊದಲಿನಿಂದಲೂ ಪರಿಚಯಸ್ಥರು ಎಂದು ಡಿಸಿಪಿ ತಿಳಿಸಿದ್ದಾರೆ.