ಆಸ್ತಿ ವಿಚಾರಕ್ಕೆ ಅಣ್ಣ, ಅತ್ತಿಗೆಯನ್ನೇ ಗುಂಡಿಟ್ಟು ಕೊಂದ ತಮ್ಮ..!

ಈ ಸುದ್ದಿಯನ್ನು ಶೇರ್ ಮಾಡಿ

gun-firing

ಮಡಿಕೇರಿ, ಫೆ.3- ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತಮ್ಮನೇ ಅಣ್ಣ ಹಾಗೂ ಅತ್ತಿಗೆಯನ್ನು ಬಂದೂಕಿನಿಂದ ಗುಂಡು ಹಾರಿಸಿ ಭೀಕರವಾಗಿ ಕೊಲೆ ಮಾಡಿ ನಂತರ ತಾನೂ ಸಹ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಂದು ಇಲ್ಲಿ ನಡೆದಿದೆ. ಮಡಿಕೇರಿ ತಾಲೂಕಿನ ಕಿಗ್ಗಾಲು ಗ್ರಾಮದ ದೇವಯ್ಯ (54) ಮತ್ತು ಪ್ರೇಮಾ (48) ಹತ್ಯೆಗೀಡಾದ ನತದೃಷ್ಟರು.

ಘಟನೆಯಲ್ಲಿ ಅಣ್ಣ-ಅತ್ತಿಗೆಗೆ ಗುಂಡು ಹಾರಿಸಿ ಕೊಲೆ ಮಾಡಿದ ತಮ್ಮಯ್ಯ ಸಹ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಈತನ ಸ್ಥಿತಿ ಚಿಂತಾಜನಕವಾಗಿದೆ. ದೇವಯ್ಯ ಹಾಗೂ ತಮ್ಮಯ್ಯ ನಡುವೆ ಆಸ್ತಿ ವಿಚಾರದಲ್ಲಿ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿದೆ. ಕಿಗ್ಗಾಲು ಗ್ರಾಮದಲ್ಲಿ ವಾಸವಾಗಿದ್ದ ದೇವಯ್ಯ ಅವರ ಮನೆಗೆ ನಿನ್ನೆಯೂ ಸಹ ತಮ್ಮಯ್ಯ ಬಂದು ಆಸ್ತಿ ವಿಚಾರವಾಗಿ ಅಣ್ಣ-ಅತ್ತಿಗೆಯೊಂದಿಗೆ ಜಗಳ ಮಾಡಿ ಹೋಗಿದ್ದನು. ಇಂದು ಬೆಳಗ್ಗೆ ತಮ್ಮಯ್ಯ ಬಂದೂಕಿನೊಂದಿಗೆ ಅಣ್ಣನ ಮನೆಗೆ ಬಂದು ಜಗಳವಾಡಿ ಬಂದೂಕಿನಿಂದ ಅಣ್ಣ-ಅತ್ತಿಗೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.

ತದನಂತರ ಆತನೂ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗುಂಡಿನ ಶಬ್ದ ಕೇಳಿ ನೆರೆಹೊರೆಯವರು ಸ್ಥಳಕ್ಕೆ ಬಂದು ನೋಡುವಷ್ಟರಲ್ಲಿ ಇಬ್ಬರ ಪ್ರಾಣಪಕ್ಷಿ ಹಾರಿಹೋಗಿತ್ತು. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ತಮ್ಮಯ್ಯನನ್ನು ಸ್ಥಳೀಯರು ತಕ್ಷಣ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಈತನ ಸ್ಥಿತಿಯೂ ಗಂಭೀರವಾಗಿದೆ. ಸುದ್ದಿ ತಿಳಿದ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಇಬ್ಬರ ಶವಗಳನ್ನೂ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin