ಪಶ್ಚಿಮ ಆಫ್ರಿಕಾದಲ್ಲಿ 22 ಭಾರತೀಯರಿದ್ದ ನೌಕೆ ನಾಪತ್ತೆ : ಕಡಲ್ಗಳ್ಳರ ಕೃತ್ಯ ಶಂಕೆ

ಈ ಸುದ್ದಿಯನ್ನು ಶೇರ್ ಮಾಡಿ

Boat--02
ಮುಂಬೈ, ಫೆ.4-ಪಶ್ಚಿಮ ಆಫ್ರಿಕಾದ ಬೆನಿನ್ ಕರಾವಳಿ ಪ್ರದೇಶದಲ್ಲಿ ಗುರುವಾರದಿಂದ ನಾಪತ್ತೆಯಾಗಿರುವ ಪನಾಮ ಮೂಲದ ಸರಕು ಸಾಗಣೆ ನೌಕೆ ಬಗ್ಗೆ ಈವರೆಗೆ ಯಾವುದೇ ಸುಳಿವು ಲಭಿಸಿಲ್ಲ. ಇದರಲ್ಲಿದ್ದ 22 ಭಾರತೀಯರು ಕಣ್ಮರೆಯಾಗಿದ್ದು, ಆತಂಕ ಸೃಷ್ಟಿಸಿದೆ.   ನೌಕೆ ದುರಂತಕ್ಕೀಡಾಗಿರುವ ಅಥವಾ ಕಡಲ್ಗಳ್ಳರಿಂದ ಅಪಹರಣಕ್ಕೆ ಒಳಗಾಗಿರುವ ಸಾಧ್ಯತೆ ಇದೆ ಎಂದು ಉನ್ನತಾಧಿಕಾರಿಯೊಬ್ಬರು ಆತಂಕದಿಂದ ಹೇಳಿದ್ದಾರೆ. ಅನಿಲ ತುಂಬಿದ್ದ ಎಂಟಿ ಮರೈನ್ ಎಕ್ಸ್‍ಪ್ರೆಸ್ ಹೆಸರಿನ ಹಡುಗು ನೈಜೀರಿಯಾ ಮತ್ತು ಬೆನಿನ್ ಸಾಗರ ಪ್ರದೇಶಗಳ ಮಧ್ಯದಲ್ಲಿ ನಿಗೂಢವಾಗಿ ನಾಪತ್ತೆಯಾಗಿದೆ. ಈ ಪ್ರದೇಶದಲ್ಲಿ ಕರಾವಳಿ ರಕ್ಷಣಾ ಪಡೆಗಳಿಂದ ತೀವ್ರ ಶೋಧ ಕಾರ್ಯ ಮುಂದುವರಿದಿದ್ದು, ನೌಕೆ ಮತ್ತು ಅದರಲ್ಲಿದ್ದ ಸಿಬ್ಬಂದಿ ಬಗ್ಗೆ ಈ ತನಕ ಮಾಹಿತಿ ಲಭಿಸಿಲ್ಲ.

ಈ ನೌಕೆಯನ್ನು ಪತ್ತೆ ಮಾಡಲು ನೈಜೀರಿಯಾ ಮತ್ತು ಬೆನಿನ್ ಪ್ರದೇಶಗಳ ಉನ್ನತಾಧಿಕಾರಿಯೊಂದಿಗೆ ಸಂಪರ್ಕ ಸಾಧಿಸಿ ನೆರವು ನೀಡಬೇಕೆಂದು ಟ್ಯಾಂಕರ್ ನೌಕೆಯ ಮಾಲೀಕರು ಮುಂಬೈನ ನೌಕಾ ಮಹಾ ನಿರ್ದೇಶನಾಲಯಕ್ಕೆ ಮನವಿ ಮಾಡಿದ್ದಾರೆ. ಕಣ್ಮರೆಯಾದ ಈ ನೌಕೆಯಲ್ಲಿ ಕೇರಳದ ಇಬ್ಬರೂ ಸೇರಿದಂತೆ 22 ಭಾರತೀಯರು ಇದ್ದರು.
ಫೆ.1ರಂದು ಬೆನಿನ್‍ನ ಕೊಟೊನೊವು ಲಂಗರು ಪ್ರದೇಶದಲ್ಲಿದ್ದಾಗ ನೌಕೆಯೊಂದಿಗೆ ಅದರ ಮಾಲೀಕರು ಸಂಪರ್ಕ ಸಾಧಿಸಿದ್ದರು. ಆದಾದ ಬಳಿಕೆ ಈ ತೈಲ ಟ್ಯಾಂಕರ್ ಸಂಪರ್ಕಕ್ಕೆ ಲಭಿಸಿಲ್ಲ. ಇದು ಏನಾಯಿತು? ಅದರಲ್ಲಿದ್ದವರ ಸ್ಥಿತಿ ಏನು? ಎಂಬ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ನಿರ್ದೇಶನಾಲಯದ ಮಹಾ ನಿರ್ದೇಶರಾದ ಮುಖ್ಯ ಸರ್ವೆಯರ್ ಬಿ.ಆರ್.ಶೇಖರ್ ಆತಂಕ ವ್ಯಕ್ತಪಡಿಸಿದ್ದಾರೆ.

ನಾವು ಈ ಸಂಬಂಧ ನೈಜೀರಿಯಾ ಅಧಿಕಾರಿಗಳು ಮತ್ತು ಕರಾವಳಿ ರಕ್ಷಣಾ ಪಡೆ ಜೊತೆ ಸಂಪರ್ಕ ಸಾಧಿಸಿದ್ದೇವೆ. ಇಂದು ಬೆಳಗ್ಗೆಯವರೆಗೂ ನೌಕೆ ಬಗ್ಗೆ ಯಾವುದೇ ಸುಳಿವು ಲಭಿಸಿಲ್ಲ ಎಂದು ಅವರು ಹೇಳಿದ್ದಾರೆ. ಪಶ್ಚಿಮ ಆಫ್ರಿಕಾದಲ್ಲಿ ಈ ನೌಕೆ ಭೀಕರ ದುರಂತಕ್ಕೀಡಾಗಿರಬಹುದು ಅಥವಾ ಕಡಲ್ಗಳ್ಳರಿಂದ (ಸೋಮಾಲಿಯಾದ ದುಷ್ಟರ ಗ್ಯಾಂಗ್‍ನಿಂದ) ಅಪಹರಣಕ್ಕೆ ಒಳಗಾಗಿರಬಹುದು ಎಂದು ಶಂಕಿಸಲಾಗಿದೆ. ಈ ನೌಕೆ ಮತ್ತು ಸಿಬ್ಬಂದಿ ಪತ್ತೆಗಾಗಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ.

Facebook Comments

Sri Raghav

Admin