ಉಭಯ ಸದನಗಳನ್ನುದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದ ಹೈಲೈಟ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Session--03
ಬೆಂಗಳೂರು, ಫೆ.5- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವನ್ನು ಈ ವರ್ಷದಿಂದ ಆರಂಭಿಸಲಾಗಿದೆ ಎಂದು ರಾಜ್ಯಪಾಲ ವಿ.ಆರ್.ವಾಲಾ ಹೇಳಿದರು. ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬರಪೀಡಿತ ಪ್ರದೇಶಗಳಿಗೆ ಸಂಜೀವಿನಿಯಾಗಿದೆ. ಕಳೆದ ವರ್ಷ 9.15 ಕೋಟಿ ಮಾನವ ದಿನಗಳು ಉದ್ಯೋಗ ಸೃಷ್ಟಿಯಾಗಿತ್ತು. ಮುಖ್ಯಮಂತ್ರಿಗಳು 21ಅಂಶಗಳ ಕಾರ್ಯಕ್ರಮ ಅನುಷ್ಠಾನಗೊಳಿಸಿ ಗ್ರಾಮೀಣ ಬದುಕಿನ ನೈಜ್ಯ ಅವಶ್ಯಕತೆಗಳನ್ನು ಪೂರೈಸಲಾಗಿದೆ. ಗಾಂಧಿಪಥ-ಗ್ರಾಮಪಥ ಯೋಜನೆಯಡಿ 9,983 ಕಿ.ಮೀ. ಗ್ರಾಮೀಣ ರಸ್ತೆ ನಿರ್ಮಿಸಲಾಗಿದೆ. ಸವದತ್ತಿ ಯಲ್ಲಮ್ಮ ಗುಡ್ಡದಲ್ಲಿ ಮೂಲ ಸೌಕರ್ಯ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ ಎಂದರು.
ಶೇ.87ರಷ್ಟು ಗ್ರಾಮೀಣ ಕುಟುಂಬಗಳು ವೈಯಕ್ತಿಕ ಶೌಚಾಲಯಗಳನ್ನು ಹೊಂದಿವೆ. ಮಾರ್ಚ್ ಅಂತ್ಯದ ವೇಳೆಗೆ ರಾಜ್ಯದ 25ಜಿಲ್ಲೆಗಳನ್ನು ಬಯಲು ಬಹಿರ್ದೆಸೆಮುಕ್ತಗೊಳಿಸಲಾಗುವುದು ಎಂದು ಹೇಳಿದ್ದಾರೆ.

Session--02

2013ರಿಂದ ಆರಂಭವಾದ ಅನ್ನಭಾಗ್ಯ ಯೋಜನೆಯಲ್ಲಿ ಪ್ರತಿ ವ್ಯಕ್ತಿಗೆ 7ಕೆಜಿ ಅಕ್ಕಿ ನೀಡಲಾಗುತ್ತಿದೆ. 30ಲಕ್ಷ ಮನೆಗಳಿಗೆ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ ಉಚಿತ ಅನಿಲ ಸಂಪರ್ಕ, ಒಂದು ಗ್ಯಾಸ್ ಸ್ಟೌವ್, ಎರಡು ರೀಫಿಲಿಂಗ್ ಒದಗಿಸಲಾಗುತ್ತಿದೆ.  ಬೆಂಗಳೂರಿನಲ್ಲಿ 198 ಇಂದಿರಾ ಕ್ಯಾಂಟೀನ್‍ಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲೆ, ತಾಲ್ಲೂಕು, ನಗರ ಸಂಸ್ಥೆಗಳಲ್ಲಿ 247 ಇಂದಿರಾಕ್ಯಾಂಟೀನ್‍ಗಳನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದರು.

ಕರ್ನಾಟಕವನ್ನು ಗುಡಿಸಲು ಮುಕ್ತಗೊಳಿಸುವುದು ಸರ್ಕಾರದ ಉದ್ದೇಶವಾಗಿದ್ದು, ಇದಕ್ಕಾಗಿ 15 ಲಕ್ಷ ಮನೆ ನಿರ್ಮಿಸುವ ಗುರಿ ಇತ್ತು. ಈವರೆಗೆ 13.7ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಮುಖ್ಯಮಂತ್ರಿಗಳ ಬೆಂಗಳೂರು ಒಂದು ಲಕ್ಷ ವಸತಿ ಯೋಜನೆಯಡಿ ಒಂದು ಲಕ್ಷ ಮನೆ ನಿರ್ಮಿಸಲಾಗುತ್ತಿದೆ. 5.43ಲಕ್ಷ ಮನೆ, ನಿವೇಶನಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ. ರಿಯಲ್‍ಎಸ್ಟೇಟ್ ವಲಯದಲ್ಲಿ ಪಾರದರ್ಶಕತೆ ತರಲು ಕರ್ನಾಟಕ ರಿಯಲ್‍ಎಸ್ಟೇಟ್ ಪ್ರಾಧಿಕಾರ ಸ್ಥಾಪಿಸಲಾಗಿದೆ. ನಿಯಮಗಳನ್ನು ರೂಪಿಸಲಾಗಿದೆ ಎಂದು ರಾಜ್ಯಪಾಲರು ಹೇಳಿದರು.

Session--05

ಗೊಲ್ಲರಹಟ್ಟಿ, ಲಂಬಾಣಿತಾಂಡ ಮತ್ತು ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ ಮಾಡಲು 551 ವಸತಿ ಪ್ರದಶಗಳಿಗೆ ಅಂತಿಮ ಅಧಿಸೂಚನೆಯನ್ನು 1,334 ವಸತಿ ಪ್ರದೇಶಗಳಿಗೆ ಹೊರಡಿಸಲಾಗಿದೆ. 50 ಹೊಸ ತಾಲ್ಲೂಕುಗಳನ್ನು ರಚಿಸಲು ಆಡಳಿತಾತ್ಮಕ ಅನುಮೋದÀನೆ ನೀಡಲಾಗಿದೆ. 35 ಲಕ್ಷ ಬರ ಪೀಡಿತ ಪ್ರದೇಶಗಳ ರೈತರಿಗೆ 2,450 ಕೋಟಿ ಬೆಳೆ ನಷ್ಟ ಪರಿಹಾರವನ್ನು ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ ಎಂದು ರಾಜ್ಯಪಾಲರು ವಿವರಿಸಿದರು.

ಭಾಗ್ಯಜ್ಯೋತಿ, ಕುಟೀರ ಜ್ಯೋತಿಗೆ ಪ್ರತಿ ತಿಂಗಳು ನೀಡುತ್ತಿದ್ದ 18ಯೂನಿಟ್ ಉಚಿತ ವಿದ್ಯುತ್ತನ್ನು 40 ಯೂನಿಟ್‍ಗೆ ಹೆಚ್ಚಿಸಲಾಗಿದೆ. ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಭನೆ ಸಾಧಿಸುವ ಸಲುವಾಗಿ ಈವರೆಗೂ 8,246 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ. 139 ಹೊಸ ಉಪ ಕೇಂದ್ರಗಳನ್ನು ಸ್ಥಾಪಿಸಿ 209 ಉಪ ಕೇಂದ್ರಗಳ ಉನ್ನತೀಕರಣ ಮಾಡಲಾಗಿದೆ. 3,707 ಸಕ್ರ್ಯೂಟ್ ಕಿ.ಮೀ. ಪ್ರಸರಣ ಮಾರ್ಗಗಳ ಜಾಲವನ್ನು ಬಲ ಪಡಿಸಲಾಗಿದೆ ಎಂದು ಹೇಳಿದರು.

Session--04

ರಾಜ್ಯದ 59 ಹಿಂದುಳಿದ ತಾಲ್ಲೂಕುಗಳಲ್ಲಿ 1,150 ಮೆಗಾ ವ್ಯಾಟ್‍ಗಳ ಸಾಮಥ್ರ್ಯದ ಸೌರಶಕ್ತಿ ಯೋಜನೆಗಳನ್ನು ಸ್ಥಾಪಿಸಲಾಗಿದೆ. ಎಸ್‍ಇಸಿಐ ವತಿಯಿಂದ 970 ಮೆಗಾವ್ಯಾಟ್ ಸಾಮಥ್ರ್ಯದ ಸೌರಶಕ್ತಿ ಯೋಜನೆಯನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ 666 ಮೆಗಾವ್ಯಾಟ್ ಯೋಜನೆ ಕಾರ್ಯಾರಂಭ ಮಾಡಿವೆ. ಪಾವಗಡದಲ್ಲಿ 2ಸಾವಿರ ಮೆಗಾವ್ಯಾಟ್ ಸಾಮಥ್ರ್ಯದ ಸೋಲಾರ್ ಪಾರ್ಕ್‍ನಲ್ಲಿ 500 ಮೆಗಾವ್ಯಾಟ್ ಉತ್ಪಾದನ ಘಟಕ ಕಾರ್ಯಾರಂಭವಾಗಿದೆ ಎಂದು ತಿಳಿಸಿದರು.

ಹುಬ್ಬಳ್ಳಿ-ಧಾರವಾಡಕ್ಕೆ ಹೈಸ್ಪೀಡ್ ಸಾರಿಗೆ : 

ಬೆಂಗಳೂರು, ಫೆ.5- ಹುಬ್ಬಳ್ಳಿ-ಧಾರವಾಡದಲ್ಲಿ ಮಾರ್ಚ್ ವೇಳೆಗೆ ತ್ವರಿತ ಬಸ್ ಸಾರಿಗೆ ವ್ಯವಸ್ಥೆಯನ್ನು ಆರಂಭಿಸುವುದಾಗಿ ರಾಜ್ಯಪಾಲ ವಿ.ಆರ್.ವಾಲಾ ಹೇಳಿದರು. ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದ ಮೂಲ ಸೌಕರ್ಯ ಅಭಿವೃದ್ಧಿಗೆ ನಗರೋತ್ಥಾನ 2 ಮತ್ತು 3ನೇ ಹಂತದ ಯೋಜನೆಗಳಲ್ಲಿ 6,479 ಕೋಟಿ ವೆಚ್ಚದ 7382 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.  ಕಲಬುರ್ಗಿ ವಿಮಾನ ನಿಲ್ದಾಣದ ಕಾಮಗಾರಿಯನ್ನು ಈ ವರ್ಷದ ಮಾರ್ಚ್ ವೇಳೆಗೆ ಹಾಗೂ ಪ್ರಾದೇಶಿಕ ವಿಮಾನ ನಿಲ್ದಾಣಗಳ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಲಾಗುವುದು. ರೈಲ್ವೆ ಮಂತ್ರಾಲಯದಿಂದ ವೆಚ್ಚ ಹಂಚಿಕೆ ಆಧಾರದ ಮೇಲೆ 12 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದರಲ್ಲಿ ಹಾಸನ- ಬೆಂಗಳೂರು ಹೊಸ ಮಾರ್ಗ, ಯಾದಗಿರಿ ಕೋಚ್ ಕಾರ್ಖಾನೆ, ಬೀದರ್-ಕಲಬುರ್ಗಿ ಹೊಸ ರೈಲು ಸ್ಥಾಪನೆ ಯೋಜನೆಯೂ ಇದೆ ಎಂದರು.  ರಾಜ್ಯದಲ್ಲಿ ರಸ್ತೆ ಜಾಲವನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದ್ದು, ನಾಲ್ಕು ವರ್ಷದಲ್ಲಿ 8190ಕೋಟಿ ರೂ. ವೆಚ್ಚದಲ್ಲಿ 80,644 ಕಿ.ಮೀ. ಹೆದ್ದಾರಿ ಅಭಿವೃದ್ಧಿ ಮಾಡಲಾಗಿದೆ. 20733ಕಿ.ಮೀ ಜಿಲ್ಲಾ ರಸ್ತೆಗಳನ್ನು, 1854ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲಾಗಿದೆ. 6433ಕಿ.ಮೀ. ರಸ್ತೆ ಮೇಲ್ದರ್ಜೆಗೆ ಕೇಂದ್ರ ಸರ್ಕಾರದಿಂದ ತಾತ್ವಿಕ ಅನುಮೋದನೆ ಪಡೆಯಲಾಗಿದೆ. ಇದರಿಂದ ರಾಜ್ಯ ಹೆದ್ದಾರಿ ಉದ್ದ 8287ಕಿ.ಮೀ. ಹೆಚ್ಚುವರಿಯಾಗಿ ಸೇರ್ಪಡೆಯಾಗಿದೆ ಎಂದು ಹೇಳಿದರು.

ವೇಗವಾಗಿ ಬೆಳೆಯುತ್ತಿರುವ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ವಲಯಕ್ಕೆ ಪ್ರೊತ್ಸಾಹ ನೀಡುವ ಸಲುವಾಗಿ ಕರ್ನಾಟಕ ಐ4 ನೀತಿ ಬಹುವಲಯ ನವೋದ್ಯಮ ನೀತಿಗಳನ್ನು ಘೋಷಿಸಲಾಗಿದೆ. ವಿವಿಧ ಸ್ಥಳಗಳಲ್ಲಿ ಪರಿಪೋಷಣ ಕೇಂದ್ರ ಮತ್ತು ಐಟಿ ಪಾರ್ಕ್‍ಗಳನ್ನು ಸ್ಥಾಪಿಸಲಾಗಿದೆ. 2014-19ರ ಕೈಗಾರಿಕಾ ನೀತಿ ಅನುಸಾರ 5ವರ್ಷದಲ್ಲಿ 5 ಲಕ್ಷ ಕೋಟಿ ಬಂಡವಾಳ ಆಕರ್ಷಿಸಿ 15 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಸುವ ಗುರಿ ಇದ್ದು, ನಾಲ್ಕೂವರೆ ವರ್ಷದಲ್ಲಿ 3.39ಲಕ್ಷ ಕೋಟಿ ಬಂಡವಾಳ ಹೂಡಿಕೆ ಮತ್ತು 9.45 ಲಕ್ಷ ವ್ಯಕ್ತಿಗಳಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ 1869 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಬೃಹತ್ ಕೈಗಾರಿಕಾವಲಯದಲ್ಲಿ 1.89 ಲಕ್ಷ ಉದ್ಯೋಗಗಳನ್ನು, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದಲ್ಲಿ 11.36 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ನೂತನ ಜವಳಿ ನೀತಿ 2013-18ರಂತೆ 4954 ಕೋಟಿ ಬಂಡವಾಳ ಹೂಡಿಕೆಗಳೊಂದಿಗೆ 844 ಜವಳಿ ಉದ್ಯಮಗಳನ್ನು ಸ್ಥಾಪಿಸಲಾಗಿದೆ. 1.3ಲಕ್ಷ ಜನರಿಗೆ ಉದ್ಯೋಗ ಒದಗಿಸಲಾಗಿದೆ. 247ಕೋಟಿ ರೂ. ವಿವಿಧ ರಿಯಾಯ್ತಿಗಳನ್ನು ಹಂಚಿಕೆ ಮಾಡಲಾಗಿದೆ ಎಂದರು.

ಕಳೆದ ವರ್ಷ ಜುಲೈ 1ರಿಂದ ಜಾರಿಗೆ ಬಂದಿರುವ ಜಿಎಸ್‍ಟಿಯನ್ನು ನಮ್ಮಲ್ಲಿ ಅನುಷ್ಠಾನಗೊಳಿಸಲಾಗಿದೆ. ಆದರೆ ಇದರ ಅಡಿ ರೂಪಿಸಿರುವ ಕಾನೂನು ಅವಶ್ಯಕತೆಗಳನ್ನು ಐಟಿ ವೇದಿಕೆಯಲ್ಲಿ ಪೂರೈಸಲು ತೆರಿಗೆ ದಾರರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕಾಲ ಕಾಲಕ್ಕೆ ಹಲವಾರು ಬದಲಾವಣೆಗಳು ನಡೆಯುತ್ತಿವೆ. ಇದರಿಂದ ಜಿಎಸ್‍ಟಿ ಸಂಗ್ರಹಣೆಯಲ್ಲಿ ಏರಿಳಿತವಾಗಿದೆ ಎಂದು ತಿಳಿಸಿದರು. ರಾಜ್ಯಕ್ಕಾದ ನಷ್ಟವನ್ನು ಕೇಂದ್ರ ಪರಿಹಾರದ ಮೂಲಕ ಪಾವತಿಸಲಿದೆ ಎಂಬ ನಿರೀಕ್ಷೆಗಳಿವೆ. ಕೆಲವು ವರ್ಷಗಳಿಂದ ಬಾಕಿ ಇರುವ ಅನೇಕ ವಸ್ತುಗಳ ಬೆಲೆಯನ್ನು ರಾಜ್ಯ ಸರ್ಕಾರ ಪರಿಷ್ಕರಿಸುತ್ತಿದ್ದು, ಇಲಾಖೆಗಳೊಂದಿಗೆ ತೆರಿಗೆಯೇತರ ಸಂಗ್ರಹಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಮುಂದಿನ ದಿನಗಳಲ್ಲಿ ಇದು ಆರ್ಥಿಕ ಲಾಭ ತರಬಹುದು ಎಂಬ ನಿರೀಕ್ಷೆಗಳಿವೆ ಎಂದರು.

ವಿಧಾನಮಂಡಲ ಸದಸ್ಯರು ರಚನಾತ್ಮಕ ಹಾದಿಯಲ್ಲಿ ಮುನ್ನಡೆಯುವ ಮೂಲಕ ವಿಸ್ತೃತ ಮತ್ತು ಗಹನ ಅಭಿವೃದ್ಧಿ ಕಾರ್ಯಕ್ರಮಗಳಿಗೆ ವಿಧಾನಮಂಡಲದ ಚೌಕಟ್ಟನ್ನು ರೂಪಿಸಬೇಕು. ಕರ್ನಾಟಕ ಸದಾ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧಿಸಿ ದೇಶದಲ್ಲಿ ಉತ್ತಮ ರಾಜ್ಯವನ್ನಾಗಿಸಲು ಪ್ರಯತ್ನಿಸೋಣ ಎಂದು ಕರೆ ನೀಡಿದರು.

ಶುದ್ಧ ಪರಿಸರಕ್ಕೆ ಸೈಕಲ್ ಬಳಕೆ : 
ಬೆಂಗಳೂರು, ಫೆ.5- ನಗರದ ಸಾರಿಗೆ ಒತ್ತಡವನ್ನು ಕಡಿಮೆ ಮಾಡಲು ಮತ್ತು ವಾಯುಮಾಲಿನ್ಯವನ್ನು ನಿಯಂತ್ರಿಸಲು ಬೈಸಿಕಲ್ ಬಳಕೆ ವ್ಯವಸ್ಥೆಯನ್ನು ಮೈಸೂರಿನಲ್ಲಿ ಆರಂಭಿಸಲಾಗಿದೆ. ಶೀಘ್ರದಲ್ಲೇ ಬೆಂಗಳೂರಿನಲ್ಲೂ ಇದೇ ರೀತಿ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ರಾಜ್ಯಪಾಲರು ಹೇಳಿದರು.
ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸಂಚಾರಿ ದಟ್ಟಣೆಯನ್ನು ಕಡಿಮೆ ಮಾಡಲು ಮೆಟ್ರೋ 1ನೇ ಹಂತದ ಕಾಮಗಾರಿ ಆರಂಭವಾಗಿದೆ. 2ನೇ ಹಂತದ 72 ಕಿ.ಮೀ. ಮಾರ್ಗ 2021ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ. ಬೆಂಗಳೂರು ಮೆಟ್ರೋ ಪಾಲಿಟನ್ ಪ್ರದೇಶಕ್ಕೆ ಉಪನಗರ ರೈಲನ್ನು ಪರಿಚಯಿಸಲು ಕೇಂದ್ರ ಸರ್ಕಾರದ ರೈಲ್ವೆ ಮಂತ್ರಾಲಯಕ್ಕೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೆ 407 ಎಕರೆ ಪ್ರದೇಶದಲ್ಲಿ ಬೆಂಗಳೂರು ಸಿಗ್ನೇಚರ್ ಬ್ಯುಸಿನೆಸ್ ಪಾರ್ಕ್‍ನ್ನು ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದೆ. 1,440ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.

2020ರ ವೇಳೆಗೆ ತ್ಯಾಜ್ಯ ನೀರು ಸಂಪೂರ್ಣ ಶುದ್ಧೀಕರಣ:
ನಗರದ ತ್ಯಾಜ್ಯ ನೀರನ್ನು 2020ರ ಅಂತ್ಯದ ವೇಳೆಗೆ ಸಂಪೂರ್ಣವಾಗಿ ನೀರನ್ನು ಶುದ್ಧೀಕರಿಸಿ ಮರುಬಳಕೆಗೆ ಉಪಯೋಗಿಸಲಾಗುತ್ತದೆ ಎಂದು ರಾಜ್ಯಪಾಲ ವಜುಭಾಯಿವಾಲಾ ತಿಳಿಸಿದರು.  ತ್ಯಾಜ್ಯನೀರಿನ ಶುದ್ಧೀಕರಣದಿಂದ ಮಾತ್ರ ಬೆಂಗಳೂರಿನ ಕೆರೆಗಳ ಸಂರಕ್ಷಣೆ ಸಾಧ್ಯವಾಗಲಿದೆ. ಪ್ರತಿ ದಿನ ಬೆಂಗಳೂರಿನಲ್ಲಿ 84.6ಕೋಟಿ ಲೀಟರ್ ತ್ಯಾಜ್ಯ ನೀರನ್ನು ಶುದ್ಧೀಕರಿಸುವ 18 ಘಟಕಗಳು ಕಾರ್ಯನಿರ್ವಹಿಸುತ್ತಿವೆ. 21.1ಕೋಟಿ ಲೀಟರ್ ತ್ಯಾಜ್ಯ ನೀರನ್ನು ಶುದ್ಧೀಕರಿಸುವ 6 ಘಟಕಗಳನ್ನು ಹೆಚ್ಚುವರಿಯಾಗಿ ಸ್ಥಾಪಿಸಲಾಗಿದೆ. ಜತೆಗೆ ಇನ್ನು 46ಕೋಟಿ ಲೀಟರ್ ತ್ಯಾಜ್ಯ ನೀರನ್ನು ಶುದ್ಧೀಕರಿಸುವ 4 ಹೆಚ್ಚುವರಿ ಘಟಕಗಳನ್ನು 1203 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದರು.

ಬೆಂಗಳೂರು, ಫೆ.5-ಮಹದಾಯಿ ಜಲಾನಯನ ಪ್ರದೇಶದಿಂದ ನಮ್ಮ ಜನರ ಹಕ್ಕಿನ ಪಾಲನ್ನು ದೊರಕಿಸಿಕೊಡುವಲ್ಲಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮುಂದುವರೆಸಲಾಗುವುದು ಎಂದು ಇಂದಿಲ್ಲಿ ಪ್ರತಿಪಾದಿಸಿದ ರಾಜ್ಯಪಾಲ ವಿ.ಆರ್.ವಾಲಾ ಕಾವೇರಿ, ಕೃಷ್ಣಾ ಜಲಾನಯನ ಪ್ರದೇಶಗಳ ನೀರಿಗಾಗಿ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳುವಲ್ಲಿ ರಾಜ್ಯಸರ್ಕಾರ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ಹೇಳಿದ್ದಾರೆ.  ಜಂಟಿ ಅಧಿವೇಶನವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಸರ್ಕಾರದ ಸಾಧನೆಗಳನ್ನು ಅನಾವರಣ ಮಾಡಿದ ಅವರು, ಕಾವೇರಿ, ಕೃಷ್ಣಾ ಜಲಾನಯನ ಪ್ರದೇಶಗಳ ನೀರಿನ ಬೇಡಿಕೆ ಈಡೇರಿಸಿಕೊಳ್ಳುವುದರ ಜೊತೆಗೆ ಮಹದಾಯಿ ಜಲಾನಯನ ಪ್ರದೇಶದ ನಮ್ಮ ನೀರಿನ ಹಕ್ಕನ್ನು ಪಡೆದುಕೊಳ್ಳುವಲ್ಲಿ ಎಲ್ಲಾ ರೀತಿಯ ಪ್ರಯತ್ನವನ್ನು ನಮ್ಮ ಸರ್ಕಾರ ಮುಂದುವರೆಸಲಿದೆ ಎಂದು ಹೇಳಿದರು.

ಪರಿಣಾಮಕಾರಿ ಕ್ರಮ :

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ. ಕೋಮುಸೌಹಾರ್ದ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಖಾತರಿ ಪಡಿಸಿದೆ ಎಂದು ಹೇಳಿದರು.  ಶಾಂತಿ ಸುವ್ಯವಸ್ಥೆ ಕಾಪಾಡಲು ಸರ್ಕಾರ ಬದ್ಧವಾಗಿದೆ. ಹಠಾತ್ತನೆ ಘಟಿಸುವ ಕೋಮುಗಲಭೆ, ಹಿಂಸಾಚಾರ ಘಟನೆ ಬಗ್ಗೆ ದೃಢವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ.  ಈ ಯೋಜನೆಯಡಿ 84 ಪೊಲೀಸ್ ಠಾಣೆಗಳು, 2 ಪೊಲೀಸ್ ಸಂಕೀರ್ಣ, 232 ವಸತಿ ಕ್ವಾಟ್ರರ್ಸ್‍ಗಳು, 6 ಜಿಲ್ಲಾ ಪೊಲೀಸ್ ತರಬೇತಿ ಕೇಂದ್ರಗಳು, 10 ಪೊಲೀಸ್ ಉಪಠಾಣೆಗಳು, 10 ಬ್ಯಾರಕ್‍ಗಳು, 10 ಶಸ್ತ್ರಾಗಾರಗಳು ಮತ್ತು ಇತರೆ 464ಕ್ಕಿಂತ ಹಚ್ಚಿನ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. 2013 ರಿಂದಲೂ ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡಲು ವ್ಯವಸ್ಥಿತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 29,684 ಪೊಲೀಸ್ ಕಾನ್‍ಸ್ಟೇಬಲ್, ಆರಕ್ಷಕ ಉಪನಿರೀಕ್ಷಕರು ಮತ್ತು ಇತರೆ ಸಿಬ್ಬಂದಿಯನ್ನು ನೇರ ನೇಮಕಾತಿ ಮಾಡಲಾಗಿದೆ. ಕಳೆದ ಸಾಲಿನಲ್ಲಿ 11 ಸಾವಿರಕ್ಕಿಂತ ಹೆಚ್ಚು ಪೊಲೀಸ್ ಕಾನ್‍ಸ್ಟೆಬಲ್ ಹಾಗೂ ಹೆಡ್‍ಕಾನ್‍ಸ್ಟೆಬಲ್‍ಗಳಿಗೆ ಏಕಕಾಲದಲ್ಲಿ ಬಡ್ತಿ ನೀಡಲಾಗಿದೆ. ಎಲ್ಲಾ ಜಿಲ್ಲಾ ಕಾರಾಗೃಹಗಳಲ್ಲಿ ಸಿಸಿ ಟಿವಿ ಅಳವಡಿಕೆ, 9 ಕಾರಾಗೃಹಗಳನ್ನು 25 ನ್ಯಾಯಾಲಯಗಳೊಂದಿಗೆ ಸಂಪರ್ಕಿಸಲು ವಿಡಿಯೋ ಕಾನ್ಫರೆನ್ಸ್ ನಡೆಸುವ ಸೌಲಭ್ಯ ಒದಗಿಸಲಾಗಿದೆ ಎಂದು ರಾಜ್ಯಪಾಲರು ಹೇಳಿದರು. ಸಾರ್ವಜನಿಕ ಸೇವೆಗಳಲ್ಲಿರುವ ಭ್ರಷ್ಟಾಚಾರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಚಿಸಲಾದ ಎಸಿಬಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಈವರೆಗೆ 278 ಟ್ರ್ಯಾಪ್ ಪ್ರಕರಣಗಳು, 65 ದಾಳಿ ಪ್ರಕರಣಗಳು, 61 ಇತರೆ ಪ್ರಕರಣಗಳು ಸೇರಿದಂತೆ ಒಟ್ಟು 400 ಪ್ರಕರಣಗಳು ದಾಖಲಾಗಿವೆ.
ದೂರು ಸ್ವೀಕರಿಸಿದ ನಂತರ ವಿಳಂಬವಿಲ್ಲದಂತೆ ಕಾನೂನು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಗುಣಮಟ್ಟದ ಆರೋಗ್ಯ ಸೇವೆ:
ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವುದಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. 1.48 ಕುಟುಂಬಗಳಿಗೆ ಉತ್ತಮ ಆರೋಗ್ಯ ಸೇವೆ ಭರವಸೆ ನೀಡಲು ಎಲ್ಲಾ ಸರ್ಕಾರಿ ಆರೋಗ್ಯ ವಿಮೆ ಯೋಜನೆಗಳನ್ನು ಒಂದೇ ಸೂರಿನಡಿಯಲ್ಲಿ ತರುವ ಮೂಲಕ ಪ್ರಪ್ರಥಮ ಬಾರಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆಯಾದ ಆರೋಗ್ಯ ಭಾಗ್ಯ ಯೋಜನೆಯನ್ನು ಹೊರತರುತ್ತಿದೆ.

ಅಸಮಾನತೆ ನಿವಾರಣೆ:
ವಿಶೇಷ ಅಭಿವೃದ್ಧಿ ಯೋಜನೆಯನ್ನು ಐದು ವರ್ಷಗಳ ಕಾಲ ಮುಂದುವರೆಸುವ ಮೂಲಕ 371(ಜೆ) ಅನ್ವಯ ಹೈದರಾಬಾದ್-ಕರ್ನಾಟಕ ಪ್ರದೇಶದ ಅಭಿವೃದ್ಧಿಯಲ್ಲಿದ್ದ ಅಸಮಾನತೆಯನ್ನು ನಿವಾರಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿದೆ.  ಉದ್ಯೋಗದಲ್ಲಿ ಮೀಸಲಾತಿ ಮೂಲಕ ಹೈ-ಕ ಪ್ರದೇಶದಲ್ಲಿ 18,993 ಹುದ್ದೆಗಳನ್ನು, ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗಿದೆ. ಕಳೆದ ಐದು ವರ್ಷದಲ್ಲಿ 3,750 ಕೋಟಿಯನ್ನು ಈ ಭಾಗದ ಅಭಿವೃದ್ಧಿಗೆ ಮೀಸಲಿರಿಸಲಾಗಿದೆ. ಕರ್ನಾಟಕವನ್ನು ಬರ ಮುಕ್ತವನ್ನಾಗಿಸಲು ಮಳೆಯಾಶ್ರಿತ ಕೃಷಿಕರಿಗೆ ನೆರವು ಒದಗಿಸಲು ಕೃಷಿ ಭಾಗ್ಯ ಯೋಜನೆ, 1.9 ಲಕ್ಷ ಕೃಷಿ ಹೊಂಡಗಳ ನಿರ್ಮಾಣ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ 1898 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ.

ಇದಲ್ಲದೆ, 8,891 ಕೋಟಿ ರೂ. ವೆಚ್ಚದಲ್ಲಿ 2672 ಕೆರೆಗಳನ್ನು ತುಂಬಿಸಲು ಯೋಜನೆಗಳನ್ನು ಕೈಗೊಳ್ಳಲಾಗಿದೆ. ಇದರಿಂದ ಅಂತರ್ಜಲ ಅಭಿವೃದ್ಧಿ ಮತ್ತು ಬರಪೀಡಿತ ಪ್ರದೇಶಗಳಿಗೆ ನೀರು ಒದಗಿಸಲು ಅನುಕೂಲವಾಗುತ್ತದೆ. ಭದ್ರಾ ಮೇಲ್ದಂಡೆಯೋಜನೆಯಡಿ 367 ಕೆರೆಗಳನ್ನು ಮತ್ತು ಎತ್ತಿನ ಹೊಳೆ ಯೋಜನೆಯಡಿ 527 ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. ಕೃಷಿ ಯಾಂತ್ರೀಕರಣ ಯೋಜನೆ ಪೊ್ರೀತ್ಸಾಹಿಸಲು ಕೈಗೆಟುಕುವ ಬೆಲೆಯಲ್ಲಿ ಕೃಷಿ ಯಂತ್ರೋಪಕರಣಗಳು ರೈತರಿಗೆ ಒದಗುವಂತೆ ಮಾಡಲಾಗಿದ್ದು, ಕೃಷಿ ಯಂತ್ರಧಾರೆ ಮೂಲಕ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ.
ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ವಿಮೆ ಯೋಜನೆ ಮತ್ತು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ 10.46 ಲಕ್ಷ ರೈತರು ಬೆಳೆ ವಿಮೆ ಪಡೆದಿದ್ದು, 6.25 ಲಕ್ಷ ರೈತರು ಇಳುವರಿ ಕೊರತೆ ಕಾರಣದಿಂದ ವಿಮೆ ಪಡೆದಿದ್ದಾರೆ ಎಂದು ಹೇಳಿದರು.

ರೈತರ ಸಾಲ ಮನ್ನಾ:

ಕೃಷಿಕರ ರಕ್ಷಣೆಗಾಗಿ ಮುಂದಾದ ಸರ್ಕಾರ 27.27 ಲಕ್ಷ ರೈತರಿಗೆ ಅನುಕೂಲವಾಗುವಂತೆ ಸಹಕಾರ ಸಂಘಗಳಲ್ಲಿ ಪಡೆದಿರುವ 8,165 ಕೋಟಿ ರೂ. ಗಳ ಕೃಷಿ ಸಾಲವನ್ನು 2017-18ರಲ್ಲಿ ಮನ್ನಾ ಮಾಡಿದೆ. ದೇಶದಲ್ಲಿಯೇ ಮಾದರಿಯಾದ ಕೃಷಿ ಮಾರುಕಟ್ಟೆ ನೀತಿ, ಆನ್‍ಲೈನ್ ವ್ಯಾಪಾರ ವ್ಯವಸ್ಥೆ, ವೈಜ್ಞಾನಿಕ ವಿಶ್ಲೇಷಣಾ ಪ್ರಯೋಗಾಲಯಗಳನ್ನು ಅಳವಡಿಸಿಕೊಳ್ಳಲಾಗಿದೆ. ತೊಗರಿ ಬೆಳೆಗೆ ವಿಶೇಷ ಬೆಂಬಲ ಬೆಲೆ ಅಲ್ಲದೆ, ಹೆಸರುಕಾಳು, ಉದ್ದು, ಹತ್ತಿ, ಶೇಂಗಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ. ಕರ್ನಾಟಕ ದೇಶದಲ್ಲಿಯೇ ಉತ್ತಮ ತೋಟಗಾರಿಕಾ ರಾಜ್ಯವೆಂದು 2015ರಲ್ಲಿ ಘೋಷಿಸಲಾಗಿದೆ.
20 ಸಾವಿರ ಎಕರೆ ಭೂಮಿಯನ್ನು ತೋಟಗಾರಿಕೆಗೆ ವಿಸ್ತರಿಸಲಾಗುವುದು ಎಂದು ಹೇಳಿದರು.

ಪಶುವೈದ್ಯಾಧಿಕಾರಿಗಳ ಕೊರತೆ ನೀಗಿಸಲು 476 ಪಶು ವೈದ್ಯಾಧಿಕಾರಿಗಳ ನೇರ ನೇಮಕಾತಿ ಆರಂಭಿಸಲಾಗಿದೆ. ಪಶುಭಾಗ್ಯ ಯೋಜನೆ, ಕ್ಷೀರಯೋಜನೆಗಾಗಿ 1206 ಕೋಟಿ ವೆಚ್ಚ ಮಾಡಲಾಗಿದೆ. ಮೀನುಗಾರಿಕೆ ಪೊ್ರೀತ್ಸಾಹಿಸಲು ಮತ್ಸ್ಯ ಕೃಷಿ ಆಶಾಕಿರಣ ಯೋಜನೆ ಜಾರಿಗೆ ತರಲಾಗಿದೆ.  ಕಳೆದ ಐದು ವರ್ಷಗಳಲ್ಲಿ ಇದಕ್ಕಾಗಿ 309 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ಹೇಳಿದರು.  ಜಲಸಂಪನ್ಮೂಲ ಇಲಾಖೆಗೆ ಕಳೆದ ಐದು ವರ್ಷಗಳಲ್ಲಿ 59, 393 ಕೋಟಿ ರೂಗಳನ್ನು ಹಂಚಿಕೆ ಮಾಡಲಾಗಿದೆ. 43.34 ಕೋಟಿ ರೂ. ವೆಚ್ಚದಲ್ಲಿ 2.64 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿ ಸಾಮಥ್ರ್ಯವನ್ನು ಕಲ್ಪಿಸಲಾಗಿದೆ.
ಬರಪೀಡಿತ ಪ್ರದೇಶಗಳಲ್ಲಿ ಅಂತರ್ಜಲ ಪುನಶ್ಚೇತನಗೊಳಿಸುವುದಕ್ಕೆ ಬಹುನಿರೀಕ್ಷಿತ ಎತ್ತಿನ ಹೊಳೆ ಯೋಜನೆಯನ್ನು ಪ್ರಾರಂಭಿಸಲಾಗಿದೆ.
ಸಮಾಜ ಕಲ್ಯಾಣ ಯೋಜನೆಗೆ 6341 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ.  ಗ್ರಾಮಾಂತರ ಪ್ರದೇಶಗಳಲ್ಲಿರುವ ಎಸ್ಸಿ-ಎಸ್ಟಿಯ ಸುಮಾರು 84.6ಲಕ್ಷಕ್ಕಿಂತ ಹೆಚ್ಚು ಜನರು ವಿವಿಧ ಯೋಜನೆಗಳ ಫಲಾನುಭವಿಗಳಾಗಿದ್ದಾರೆ ಎಂದು ಹೇಳಿದರು.

2,814 ಕೋಟಿ ರೂ. ವೆಚ್ಚದಲ್ಲಿ ವಿದ್ಯಾಸಿರಿ, ಸ್ವಯಂ ಉದ್ಯೋಗ ಸಾಲ ಯೋಜನೆ, ಗಂಗಾಕಲ್ಯಾಣ, ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ 1.5 ಲಕ್ಷದಷ್ಟು ಫಲಾನುಭವಿಗಳು ಪ್ರಯೋಜನ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.  ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆಯಡಿ 74,476 ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸಲಾಗಿದೆ. 1.23 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ. ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ದಾಖಲಾತಿ ಮತ್ತು ಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು ಬೆಂಗಳೂರು ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸ್ಥಾಪಿಸಲಾಗಿದೆ.2017-18ರ ಶೈಕ್ಷಣಿಕ ವರ್ಷದಲ್ಲಿ ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ ವಿವಿಗಳನ್ನು ಸ್ಥಾಪಿಸಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಸ ಪರ್ವವನ್ನೇ ಸೃಷ್ಟಿಸಲಾಗಿದ್ದು, ನಮ್ಮ ಗ್ರಾಮ, ನಮ್ಮ ಯೋಜನೆಯಡಿ 5,971 ಗ್ರಾ.ಪಂ.ಗಳಲ್ಲಿ ಸಮುದಾಯದ ಸಹಭಾಗಿತ್ವದ ಮೂಲಕ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗಿದೆ. ವಿವಿಧ ಇಲಾಖೆಗಳ 100 ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಬಾಪೂಜಿ ಸೇವಾ ಕೇಂದ್ರಗಳನ್ನು 5,648 ಗ್ರಾ.ಪಂ.ಗಳಲ್ಲಿ ಸ್ಥಾಪಿಸಲಾಗಿದೆ.   ಈ ಇಲಾಖೆಯ ಉತ್ತಮ ಕೆಲಸದಿಂದ ರಾಷ್ಟ್ರೀಯ ಇ-ಪುರಸ್ಕಾರ್ ಪ್ರಥಮ ಪ್ರಶಸ್ತಿಗೆ ಭಾಜನವಾಗಿದೆ.  2 ಕೋಟಿ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವುದಕ್ಕಾಗಿ 13 ಸಾವಿರ ನೀರು ಶುದ್ಧೀಕರಣ ಘಟಕಗಳನ್ನು ಪ್ರಾರಂಭಿಸಲಾಗಿದೆ. 247 ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ರಾಜ್ಯಪಾಲರು ಸರ್ಕಾರದ ಸಾಧನೆಗಳನ್ನು ಬಿಂಬಿಸಿದರು.

Facebook Comments

Sri Raghav

Admin