ಕ್ಯಾಂಟರ್ ಗೆ ಬೆಂಕಿಬಿದ್ದು 16 ರಾಸುಗಳ ಜೀವಂತ ದಹನ

ಈ ಸುದ್ದಿಯನ್ನು ಶೇರ್ ಮಾಡಿ

Fire-01

ತುಮಕೂರು,ಫೆ.5-ನೋಡು ನೋಡುತ್ತಿದ್ದಂತೆ ರಾಸುಗಳನ್ನು ಕರೆದೊಯ್ಯುತ್ತಿದ್ದ ಕ್ಯಾಂಟರ್ ಬೆಂಕಿಯಿಂದ ಹೊತ್ತು ಉರಿದು ರೈತ ಸೇರಿದಂತೆ 16 ರಾಸುಗಳು ಜೀವಂತ ದಹನವಾಗಿರುವ ದುರ್ಘಟನೆ ಮಾರನಾಯಕನಪಾಳ್ಯದಲ್ಲಿ ಸಂಭವಿಸಿದೆ. ಸಿದ್ದಗಂಗಾ ಮಠದಲ್ಲಿ ನಡೆಯುವ ಧನಗಳ ಜಾತ್ರೆಗಾಗಿ ಕೊರಟಗೆರೆ ತಾಲ್ಲೂಕಿನ ಪೂರಕೆಗ್ರಾಮಕ್ಕೆ ಸೇರಿದ 14 ರಾಸುಗಳನ್ನು 10 ಮಂದಿ ರೈತರು ಕ್ಯಾಂಟರ್‍ನಲ್ಲಿ ಹಾಕಿಕೊಂಡು ಮೇಲ್ಭಾಗದಲ್ಲಿ ಮೇವು(ಹುಲ್ಲು) ತುಂಬಿಕೊಂಡು ಸಂಜೆ ಬರುತ್ತಿದ್ದರು.

ಮಾರನಾಯಕನಪಾಳ್ಯದ ಬಳಿ ಬರುತ್ತಿದ್ದಂತೆ ವಿದ್ಯುತ್ ಕಂಬದಿಂದ ಅರ್ಧ ತುಂಡಾಗಿ ನೇತಾಡುತ್ತಿದ್ದ ಎರಡು ವಿದ್ಯುತ್ ತಂತಿಗಳು ಒಂದಕ್ಕೊಂದು ತಗಲಿ ಶಾರ್ಟ್ ಸಕ್ರ್ಯೂಟ್ ಸಂಭವಿಸಿ ಕ್ಯಾಂಟರ್‍ನ ಮೇಲ್ಭಾಗದಲ್ಲಿದ್ದ ಹುಲ್ಲಿಗೆ ತಾಗಿದೆ. ಪರಿಣಾಮವಾಗಿ ನೋಡು ನೋಡುತ್ತಿದ್ದಂತೆ ಬೆಂಕಿಯ ಕಿಡಿ ಕ್ಯಾಂಟರ್ ಪೂರ್ಣ ಆವರಿಸಿದೆ. ತಕ್ಷಣ ಮುಂಭಾಗದಲ್ಲಿ ಕುಳಿತಿದ್ದ ರೈತರು ಬೆಂಕಿ ಹತ್ತಿಕೊಂಡಿರುವುದು ಗಮನಿಸಿ ಚೀರಿಕೊಂಡಿದ್ದಾರೆ. ತಕ್ಷಣ ಚಾಲಕ ವಾಹನವನ್ನು ರಸ್ತೆಬದಿ ನಿಲ್ಲಿಸಿ ಎಲ್ಲರೂ ಕೆಳಗಿಳಿಯುವಷ್ಟರಲ್ಲಿ ಒಬ್ಬ ರೈತ ಒಳಗೆ ಸಿಕ್ಕಿ ಹಾಕಿಕೊಂಡು 16 ರಾಸುಗಳ ಪೈಕಿ 14 ರಾಸುಗಳೊಂದಿಗೆ ಸಜೀವ ದಹನವಾಗಿದ್ದಾರೆ.

ಸಾರ್ವಜನಿಕರು ನೋಡುತ್ತಿದ್ದರು ಏನೂ ಮಾಡದಂತಹ ಅಸಹಾಯಕ ಸ್ಥಿತಿಯಲ್ಲಿದ್ದರು. ಸುದ್ದಿ ತಿಳಿದ ಅಗ್ನಿ ಶಾಮಕ ದಳದವರು ವಾಹನದೊಂದಿಗೆ ಆಗಮಿಸಿ ನಂದಿ ನಂದಿಸುವಷ್ಟರಲ್ಲಿ 14 ರಾಸುಗಳು ಹಾಗೂ ರೈತರೊಬ್ಬರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.   ಘಟನೆಯಲ್ಲಿ ಎರಡು ರಾಸುಗಳು ಹಾಗೂ ಇಬ್ಬರು ರೈತರಿಗೆ ಸುಟ್ಟ ಗಾಯಗಳಾಗಿವೆ.   ಮೃತಪಟ್ಟ ರೈತನನ್ನು ಗಂಗರಾಜು(38) ಎಂದು ಗುರುತಿಸಲಾಗಿದೆ. ರೈತರಾದ ಈರಣ್ಣ , ಮುದ್ದುವೀರಪ್ಪ , ಮಂಜುನಾಥ್, ಲೋಕೇಶ್, ಗಂಗಾರಾಜು, ರಾಜಪ್ಪ ,ಪ್ರಸನ್ನ , ಗಂಗಾರಾಜು ಸೇರಿದಂತೆ 10 ಮಂದಿ ಈ ಕ್ಯಾಂಟರ್‍ನಲ್ಲಿ ಪ್ರಯಾಣಿಸುತ್ತಿದ್ದರು.  ಘಟನೆ ಸಂಭವಿಸಿದ್ದರೂ ಬೆಸ್ಕಾಂನವರು ಯಾರೂ ಸ್ಥಳಕ್ಕೆ ಬಾರದಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿ ತಿಳಿದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್ ಭೇಟಿ ಮಾಡಿ ರಾಸುಗಳನ್ನು ಕಳೆದುಕೊಂಡ ರೈತರಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೆ ಮೃತಪಟ್ಟ ರೈತನ ಕುಟುಂಬದವರಿಗೆ ಸಾಂತ್ವನ ಸೂಚಿಸಿದ್ದಾರೆ. ಶಾಸಕರಾದ ಸುರೇಶ್‍ಗೌಡ, ಸುಧಾಕರ್‍ಲಾಲ್ ಅವರು ಲಕ್ಷಾಂತರ ಬೆಲೆ ಬಾಳುವ ರಾಸುಗಳಿಗೆ ಹಾಗೂ ರೈತ ಕುಟುಂಬಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಘಟನೆಯ ದೃಶ್ಯ ಕಂಡು ಜಿಲ್ಲಾಧಿಕಾರಿ ಅವರ ಕಣ್ಣಾಲಿಗಳು ತುಂಬಿಬಂದು ಮಾತನಾಡಲು ಗದ್ಗರಿತರಾದರು. ಎತ್ತುಗಳು ಹಾಗೂ ರೈತ ಜೀವಂತ ದಹನವಾದ ದೃಶ್ಯ ಎಲ್ಲರ ಮನಕಲುಕುವಂತಿತ್ತು. ಕ್ಯಾತಸಂದ್ರ ಠಾಣೆ ಸಬ್‍ಇನ್‍ಸ್ಪೆಕ್ಟರ್ ರಾಜು, ಡಿವೈಎಸ್ಪಿ ನಾಗರಾಜ್, ವೃತ್ತ ನಿರೀಕ್ಷಕ ರಾಮಕೃಷ್ಣಯ್ಯ ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin