ಹೊಸದಾಗಿ ಬ್ಯಾಂಕ್ ಆರಂಭಿಸುವವರಿಗೆ ಸೆಕ್ಯೂರಿಟಿ ಆಡಿಟ್ ರಿಪೋರ್ಟ್ ಕಡ್ಡಾಯ

ಈ ಸುದ್ದಿಯನ್ನು ಶೇರ್ ಮಾಡಿ

Ravi-Channannanavar--01

ಮೈಸೂರು,ಫೆ.5-ಜಿಲ್ಲೆಯಲ್ಲಿ ಹೊಸದಾಗಿ ಬ್ಯಾಂಕ್ ಆರಂಭಿಸುವವರು ಸೆಕ್ಯೂರಿಟಿ ಆಡಿಟ್ ರಿಪೋರ್ಟ್‍ನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕೆಂದು ಜಿಲ್ಲಾ ಪೊಲೀಸ್‍ವರಿಷ್ಠಾಧಿಕಾರಿ ರವಿ ಚನ್ನಣ್ಣನವರ್ ತಿಳಿಸಿದ್ದಾರೆ. ಎಸ್‍ಪಿ ಕಚೇರಿಯಲ್ಲಿಂದು ನಡೆದ ಪೊಲೀಸ್ ವರಿಷ್ಠಾಧಿಕಾರಿ ರವಿ ಚನ್ನಣ್ಣನವರ್ ಹಾಗೂ ಜಿಲ್ಲಾ ವ್ಯಾಪ್ತಿಯ ಎಲ್ಲಾ ಬ್ಯಾಂಕ್ ಮ್ಯಾನೇಜರ್‍ಗಳ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಾ ಬ್ಯಾಂಕ್‍ಗಳಿಗೂ ಪೊಲೀಸರನ್ನು ನೇಮಕ ಮಾಡಲು ಸಾಧ್ಯವಿಲ್ಲ. ಹಾಗಾಗಿ ಬ್ಯಾಂಕ್‍ನವರೇ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು ಹಾಗೂ ಬ್ಯಾಂಕ್ ಕಟ್ಟಡ ಭದ್ರತೆಯಿಂದ ಕೂಡಿರುವ ಬಗ್ಗೆ ವರದಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಪ್ರತಿಯೊಂದು ಬ್ಯಾಂಕ್‍ಗಳಲ್ಲಿ ಸಿಸಿಟಿವಿ ಅಳವಡಿಸಿರಬೇಕು. ಬ್ಯಾಂಕ್‍ನ ಭದ್ರತೆಗಾಗಿ ಸೆಕ್ಯೂರಿಟಿ ಗಾರ್ಡ್‍ನ್ನು ನೇಮಿಸಿಕೊಳ್ಳಬೇಕು. ಎಟಿಎಂಗಳಿಗೂ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕೆಂದು ಬ್ಯಾಂಕ್ ಅಧಿಕಾರಿಗಳಿಗೆ ಎಸ್‍ಪಿ ಸೂಚಿಸಿದರು. ಈ ವೇಳೆ ಮಾತನಾಡಿದ ಬ್ಯಾಂಕ್‍ನ ಅಧಿಕಾರಿಗಳು, ಬ್ಯಾಂಕ್ ಬಳಿ ಪೊಲೀಸರ ನೈಟ್ ಬೀಟ್‍ನ್ನು ಹೆಚ್ಚಿಸಬೇಕು. ಈ ಹಿಂದೆ ಬ್ಯಾಂಕ್‍ಗಳ ಬಳಿ ನೈಟ್‍ಬೀಟ್ ಪೊಲೀಸರು ಬಂದು ಅಲ್ಲಿರುವ ಪುಸ್ತಕದಲ್ಲಿ ಸಹಿ ಹಾಕಿ ಹೋಗುತ್ತಿದ್ದರು. ಆದರೆ ಈಗ ರಾತ್ರಿ ವೇಳೆ ನೈಟ್ ಬೀಟ್‍ಪೊಲೀಸರು ಬರುತ್ತಿಲ್ಲ ಹಾಗಾಗಿ ರಾತ್ರಿ ವೇಳೆ ಭದ್ರತೆಯನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಚನ್ನಣ್ಣನವರ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಡಿವೈಎಸ್ಪಿ ರುದ್ರಮುನಿ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಬ್ಯಾಂಕ್‍ಗಳ ವ್ಯವಸ್ಥಾಪಕರು ಸಭೆಯಲ್ಲಿ ಭಾಗವಹಿಸಿದ್ದರು.

Facebook Comments

Sri Raghav

Admin