ಕುಣಿಗಲ್‍ನಲ್ಲಿ ಜೆಡಿಎಸ್‍ಗೆ ಸಡ್ಡು ಹೊಡೆಯಲು ಕೈ,ಕಮಲ ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

Kunigal--01

– ಶ್ರೀನಿವಾಸ ಬೀಚನಹಳ್ಳಿ

ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗಳು ಬಿರುಸುಗೊಂಡಿವೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳು ಅಬ್ಬರದ ಚುನಾವಣಾ ಪ್ರಚಾರವನ್ನು ಈಗಾಗಲೇ ಪ್ರಾರಂಭಿಸಿವೆ.   ಬಿಜೆಪಿ, ಕಾಂಗ್ರೆಸ್ ಪಕ್ಷದಲ್ಲಿ ಅಧಿಕೃತ ಅಭ್ಯರ್ಥಿಗಳು ಇನ್ನೂ ಪ್ರಕಟವಾಗಿಲ್ಲ. ಹಾಲಿ ಜೆಡಿಎಸ್ ಶಾಸಕರ ಟಿಕೆಟ್ ಖಚಿತವಾಗಿದ್ದು, ಕ್ಷೇತ್ರಾದ್ಯಂತ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಬಿಜೆಪಿ ಅನುಕಂಪದ ಅಲೆಯನ್ನು ನೆಚ್ಚಿಕೊಂಡಿದ್ದರೆ, ಕಾಂಗ್ರೆಸ್ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕುಣಿಗಲ್ ಕ್ಷೇತ್ರವನ್ನು ವಶಕ್ಕೆ ತೆಗೆದುಕೊಳ್ಳುವ ತಂತ್ರ ಹೆಣೆಯುತ್ತಿದೆ.

ತುಮಕೂರು ಜಿಲ್ಲೆ ಕುಣಿಗಲ್ ವಿಧಾನಸಭಾ ಕ್ಷೇತ್ರ ರಾಜಕೀಯ ವಾಗಿ ತನ್ನದೇ ಆದ ಇತಿಹಾಸ ಹೊಂದಿದೆ. ಮಾಜಿ ಸಚಿವರಾದ ಎನ್.ಹುಚ್ಚಮಾಸ್ತೀಗೌಡ, ವೈ.ಕೆ.ರಾಮಯ್ಯ, ಅಂದಾನಪ್ಪ, ತಮ್ಮಣ್ಣಗೌಡ, ಮುದ್ದಹನುಮೇಗೌಡ, ಜಿ.ಬಿ.ರಾಮಸ್ವಾಮಿಗೌಡ ಕ್ಷೇತ್ರವನ್ನಾಳಿದ್ದು, ಹುಚ್ಚ ಮಾಸ್ತೀಗೌಡ ಅವರ ಸಮಕಾಲೀನರಾದ ಡಿ.ನಾಗರಾಜಯ್ಯನವರು ಇಂದಿಗೂ ಶಾಸಕರಾಗಿ ಅಧಿಕಾರ ನಡೆಸುತ್ತಿ ದ್ದಾರೆ. ಒಕ್ಕಲಿಗರ ಪ್ರಾಬಲ್ಯ ಇಲ್ಲಿ ಹೆಚ್ಚಾಗಿರುವುದೇ ಇದಕ್ಕೆ ಕಾರಣ.
2018ರ ಆಚೆಗೆ ಕುಣಿಗಲ್ ತಾಲೂಕು, ಹುಲಿಯೂರು ದುರ್ಗ ಮತ್ತು ಕುಣಿಗಲ್ ವಿಧಾನಸಭಾ ಎಂಬ ಎರಡು ಕ್ಷೇತ್ರಗಳಿದ್ದು, ತದನಂತರ ಕ್ಷೇತ್ರ ಮರು ವಿಂಗಡಣೆಯಾಗಿ ಹುಲಿಯೂರು ದುರ್ಗವನ್ನು ಕೈಬಿಟ್ಟು ಇಡೀ ತಾಲೂಕನ್ನು ಕುಣಿಗಲ್ ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಲಾಯಿತು.

ಕ್ಷೇತ್ರ ಬದಲಾವಣೆ ನಂತರ ಮೊದಲಿಗೆ ಕಾಂಗ್ರೆಸ್‍ನಿಂದ ಸ್ಪರ್ಧಿ ಸಿದ ಬಿ.ಬಿ.ರಾಮಸ್ವಾಮಿಗೌಡ ಗೆಲುವು ಸಾಧಿಸಿದರು. ನಂತರ 2013ರಲ್ಲಿ ಪುನಃ ಜೆಡಿಎಸ್‍ನ ಡಿ.ನಾಗರಾಜಯ್ಯನವರು ಜಯಗಳಿಸಿದ್ದರು. ಆದರೆ, ಇವರ ಸಹೋದರ ಡಿ.ಕೃಷ್ಣಕುಮಾರ್ ಬಿಜೆಪಿಯಿಂದ ಸ್ಪರ್ಧಿಸಿ ಎರಡು ಬಾರಿ ಸೋಲನನುಭವಿಸಿದರು.
ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಅದರಲ್ಲೂ ಹುತ್ರಿದುರ್ಗ, ಹುಲಿಯೂರು ದುರ್ಗ ಮತ್ತು ಅಮೃತೂರು ಹೋಬಳಿಗಳಲ್ಲಿ ಅತಿ ಹೆಚ್ಚಿನ ಮತದಾರರಿದ್ದು, ಈ ಭಾಗ ಜೆಡಿಎಸ್‍ನ ಭದ್ರಕೋಟೆಯಾಗಿದೆ.

ಈ ಬಾರಿ ಬಿಜೆಪಿಯಿಂದ ಪುನಃ ಸ್ಪರ್ಧೆಗೆ ಇಳಿಯಲು ಕೃಷ್ಣಕುಮಾರ್ ಸಜ್ಜಾಗಿದ್ದು, ಅದೇ ಪಕ್ಷದಲ್ಲಿ ರಾಜೇಗೌಡ ಎಂಬ ಉದ್ಯಮಿ ಈಗಾಗಲೇ ಕ್ಷೇತ್ರದಲ್ಲಿ ತನ್ನದೇ ಆದ ಗುಂಪು ಕಟ್ಟಿಕೊಂಡು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಪ್ರಚಾರ ಆರಂಭಿಸಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷದಲ್ಲೂ ಕೂಡ ಗೊಂದಲ ಗೂಡಾಗಿದ್ದು, ಕಳೆದ ಬಾರಿ ಶಾಸಕರಾಗಿದ್ದ ಬಿ.ಬಿ.ರಾಮಸ್ವಾಮಿಗೌಡ ಬದಲಿಗೆ ಡಿ.ಕೆ.ಶಿವಕುಮಾರ್ ಅವರ ಸಂಬಂಧಿ ಡಾ.ರಂಗನಾಥ್ ಅವರನ್ನು ಕಣಕ್ಕಿಳಿಸುವ ಪ್ರಯತ್ನ ನಡೆಯುತ್ತಿದೆ.   ಕಾಂಗ್ರೆಸ್‍ನ ಮೂಲದ ಪ್ರಕಾರ ಅವರೇ ಅಭ್ಯರ್ಥಿ ಎಂದು ಕೇಳಿ ಬರುತ್ತಿದೆ. ಇದರಿಂದ ಕುಪಿತಗೊಂಡಿರುವ ರಾಮಸ್ವಾಮಿಗೌಡ ಅವರು 2018ರ ಚುನಾವಣೆಯಲ್ಲಿ ಬಂಡಾಯವಾದರೂ ಆಶ್ಚರ್ಯವಿಲ್ಲ. ಹೀಗಾದರೆ ಕಾಂಗ್ರೆಸ್‍ನ ಅಧಿಕೃತ ಅಭ್ಯರ್ಥಿಗೆ ಅಡಚಣೆ ಯಾಗುತ್ತದೆ.

ಕುಣಿಗಲ್ ತಾಲೂಕಿನಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಾಗಿದ್ದು, ಬಿಜೆಪಿಗೆ ಗೆಲುವು ಅಷ್ಟು ಸುಲಭವಲ್ಲ. ಏಕೆಂದರೆ, ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ ರುವ ಶಾಸಕ ಡಿ.ನಾಗ ರಾಜಯ್ಯ ಮತ್ತು ಮಕ್ಕಳು ರಾಜಕೀಯ ತಂತ್ರಗಾರಿಕೆ ಜೋರಾ ಗಿಯೇ ಇದೆ.  ಜೆಡಿಎಸ್‍ನ 40 ಸಾವಿರಕ್ಕೂ ಹೆಚ್ಚು ಸಾಂಪ್ರದಾಯಿಕ ಮತಗಳಿವೆ. ಇದರಿಂದ ಅವರ ಗೆಲುವು ಸುಲಭವಾಗುವ ಸಾಧ್ಯತೆಗಳಿವೆ ಎಂಬುದು ರಾಜಕೀಯ ಲೆಕ್ಕಾಚಾರವಾಗಿದೆ.  ಡಿ.ಕೆ.ಶಿವಕುಮಾರ್ ಅವರ ಸಂಬಂಧಿ ಡಾ. ರಂಗನಾಥ್ ಅವರು ಕೂಡ ಕಳೆದ ಹಲವು ವರ್ಷಗಳಿಂದ ಕ್ಷೇತ್ರಾದ್ಯಂತ ಜನರ ಸಂಪರ್ಕದಲ್ಲಿದ್ದು, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಾರಿ ಟಿಕೆಟ್ ಸಿಕ್ಕರೆ ಗೆಲುವಿನ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

19 ಸಾವಿರ ಮುಸ್ಲಿಮರಿರುವ ಈ ಕ್ಷೇತ್ರದಲ್ಲಿ ಇವರೇ ನಿರ್ಣಾಯಕರೂ ಕೂಡ. ಇವರು ಬಿಜೆಪಿಗೆ ಮಗ್ಗುಲ ಮುಳ್ಳಾಗುವ ಸಾಧ್ಯತೆಯಿದೆ. ಅಲ್ಲದೆ, ಈ ಬಾರಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿಯೇ ನೋಡಬೇಕೆಂಬ ಅಚಲ ನಿರ್ಧಾರ ಕ್ಷೇತ್ರದ ಮತದಾರರಲ್ಲಿ ಇರುವುದರಿಂದ ಈ ಕ್ಷೇತ್ರ ಪುನಃ ಜೆಡಿಎಸ್ ತೆಕ್ಕೆಗೆ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದು ಮತದಾರರ ಅಭಿಪ್ರಾಯವಾಗಿದೆ. ಬಿಜೆಪಿ ಅಭ್ಯರ್ಥಿಯೂ ಕೂಡ ಪಕ್ಷದ ಸಾಂಪ್ರದಾಯಿಕ ಮತಗಳಿಲ್ಲದೆ ಇದ್ದರೂ ಕೂಡ ಗೆಲುವಿಗಾಗಿ ಎರಡು ಬಾರಿ ಸೋಲನ್ನು ಮುಂದಿಟ್ಟುಕೊಂಡು ಅನುಕಂಪದ ಆಧಾರದ ಮೇಲೆ ಮತ ಕೇಳಲು ಹೊರಟಿದ್ದಾರೆ. ಈ ಎಲ್ಲದಕ್ಕೂ ಉತ್ತರವನ್ನು ಸದ್ಯದಲ್ಲೇ ಮತದಾರರು ನೀಡಲಿದ್ದಾರೆ.

ಮತದಾರರ ವಿವರ  :  ಒಕ್ಕಲಿಗ 74,207 / ಎಸ್‍ಸಿ 21,447 / ಮುಸ್ಲಿಂ 19,273 / ಲಿಂಗಾಯತರು 13,539 / ತಿಗಳರು 7,104 / ಉಪ್ಪಾರ 6,799 / ಬೆಸ್ತರು 3708 / ಕುರುಬ 3875 / ವೈಶ್ಯರು 2687 / ಎಸ್‍ಟಿ 2318  / ಬಲಿಜ 6595 / ಗೊಲ್ಲರು 5081  / ಮಡಿವಾಳರು 19,439 / ಒಟ್ಟು 1,87,037 ಮತದಾರರಿದ್ದಾರೆ

Facebook Comments

Sri Raghav

Admin