ತಿಂಗಳಾಂತ್ಯದಲ್ಲಿ ಬಿಬಿಎಂಪಿ ಬಜೆಟ್

ಈ ಸುದ್ದಿಯನ್ನು ಶೇರ್ ಮಾಡಿ

BBMP--02

ಬೆಂಗಳೂರು, ಫೆ.6- ಪ್ರಸಕ್ತ ಸಾಲಿನ ಬಿಬಿಎಂಪಿ ಬಜೆಟ್ ಈ ತಿಂಗಳ ಅಂತ್ಯದೊಳಗೆ ಮಂಡನೆಯಾಗಲಿದೆ ಎಂದು ಮೇಯರ್ ಸಂಪತ್‍ರಾಜ್ ಇಂದಿಲ್ಲಿ ತಿಳಿಸಿದರು. ಶಿವಾನಂದ ವೃತ್ತದ ಸಮೀಪ ನಿರ್ಮಿಸಲುದ್ದೇಶಿಸಿರುವ ಸ್ಟೀಲ್‍ಬ್ರಿಡ್ಜ್ ಕಾಮಗಾರಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.  ರಾಜ್ಯಸರ್ಕಾರದ ಬಜೆಟ್ ಇದೇ 16ರಂದು ಮಂಡನೆಯಾಗಲಿದೆ. ಇದಾದ ಹತ್ತು ದಿನಗಳಲ್ಲಿ ಬಿಬಿಎಂಪಿ ಬಜೆಟ್ ಮಂಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಅಧ್ಯಕ್ಷ ಎಂ.ಮಹದೇವು ಅವರು ಬಜೆಟ್ ಮಂಡನೆ ಕುರಿತಂತೆ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ. ಈ ವಾರವಿಡೀ ಬೆಂಗಳೂರು ಅಭಿವೃದ್ಧಿ ಬಗ್ಗೆ ವಿವಿಧ ಸಂಘ-ಸಂಸ್ಥೆಗಳು, ಉದ್ದಿಮೆದಾರರು, ಕನ್ನಡಪರ ಸಂಘಟನೆಗಳು ಹಾಗೂ ಮಾಧ್ಯಮ ಪ್ರತಿನಿಧಿಗಳ ಸಭೆ ನಡೆಸಲಾಗುವುದು ಎಂದರು.
ನಗರದ ಜನಸಂಖ್ಯೆ ವರ್ಷ ವರ್ಷ ದ್ವಿಗುಣಗೊಳ್ಳುತ್ತಿರುವುದರಿಂದ ಈ ಬಾರಿಯ ಬಿಬಿಎಂಪಿ ಬಜೆಟ್ 10 ಸಾವಿರ ಕೋಟಿ ದಾಟಬಹುದು. ಆದರೂ ಎಲ್ಲ ಅಗತ್ಯಗಳನ್ನೂ ಪರಿಗಣಿಸಿ ಜನಪರ ಬಜೆಟ್ ಮಂಡನೆ ಮಾಡಲಾಗುವುದು ಎಂದು ಮೇಯರ್ ವಿಶ್ವಾಸ ವ್ಯಕ್ತಪಡಿಸಿದರು.

ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ಫೆ.11ರಂದು ಸುಮಾರು 10 ಸಾವಿರ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸಲಾಗುತ್ತಿದೆ. ಉಳಿದ 15 ಸಾವಿರ ವ್ಯಾಪಾರಿಗಳಿಗೆ ಫೆ.25ರಂದು ಗುರುತಿನ ಚೀಟಿ ವಿತರಿಸಲಾಗುವುದು. ನಂತರ ಸಮೀಕ್ಷೆ ನಡೆಸಿ ಹೊಸ ವ್ಯಾಪಾರಿಗಳಿಗೂ ಗುರುತಿನ ಚೀಟಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಶೀಘ್ರ ಸ್ಟೀಲ್ ಬ್ರಿಡ್ಜ್:

ನಗರದಲ್ಲಿ ಹೆಚ್ಚುತ್ತಿರುವ ವಾಹನ ಮತ್ತು ಜನದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಶಿವಾನಂದ ವೃತ್ತದ ಸಮೀಪ ಸ್ಟೀಲ್‍ಬ್ರಿಡ್ಜ್ ನಿರ್ಮಿಸುವ ಕಾಮಗಾರಿ ಆರಂಭಿಸಲಾಗಿದೆ.   ಎಂವಿಆರ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ ಕಾಮಗಾರಿಯ ಹೊಣೆ ಹೊತ್ತಿದ್ದು, ಆದಷ್ಟು ಶೀಘ್ರ ಸ್ಟೀಲ್‍ಬ್ರಿಡ್ಜ್ ನಿರ್ಮಾಣ ಮಾಡುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು. ಸ್ಟೀಲ್‍ಬ್ರಿಡ್ಜ್ ನಿರ್ಮಾಣಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಕಾಮಗಾರಿ ಆರಂಭಕ್ಕೆ ಹೈಕೋರ್ಟ್ ಗ್ರೀನ್‍ಸಿಗ್ನಲ್ ನೀಡಿರುವುದರಿಂದ ಜನವರಿ ತಿಂಗಳಿನಿಂದ ಕೆಲಸ ಆರಂಭಿಸಲಾಗಿದೆ. 485 ಮೀಟರ್ ಉದ್ದದ ಸೇತುವೆ ನಿರ್ಮಾಣಕ್ಕೆ ಭೂ ಸ್ವಾಧೀನಪಡಿಸಿಕೊಳ್ಳಲು 50 ಕೋಟಿ ರೂ.ಗಳ ಹಣದ ಅವಶ್ಯಕತೆ ಇದೆ ಭಾವಿಸಲಾಗಿತ್ತು. ಆದರೆ, ಕೇವಲ 20 ಕೋಟಿ ರೂ.ಗಳಲ್ಲಿ ಭೂ
ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ಅವರು ಹೇಳಿದರು.

ಈ ಭಾಗದಲ್ಲಿ ರೈಲು, ಬಸ್ ನಿಲ್ದಾಣ, ಮಲ್ಲೇಶ್ವರಂ, ರಾಜಾಜಿನಗರ ಸೇರಿದಂತೆ ಪಶ್ಚಿಮ ಭಾಗದ ಪ್ರದೇಶಗಳಿಗೆ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುವುದರಿಂದ ನಿಗದಿತ ಅವಧಿಯೊಳಗೆ ಸ್ಟೀಲ್‍ಬ್ರಿಡ್ಜ್ ಕಾಮಗಾರಿ ಪೂರ್ಣಗೊಳಿಸುವಂತೆ ಸಂಸ್ಥೆಯವರಿಗೆ ತಾಕೀತು ಮಾಡಲಾಗಿದೆ ಎಂದು ಹೇಳಿದರು.
ಪರಿಶೀಲನೆ ಸಂದರ್ಭದಲ್ಲಿ ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಆಡಳಿತ ಪಕ್ಷದ ನಾಯಕ ಎಂ.ಶಿವರಾಜು, ಪ್ರಾಜೆಕ್ಟ್ ವಿಭಾಗದ ಚೀಫ್ ಎಂಜಿನಿಯರ್ ಕೆ.ಟಿ.ನಾಗರಾಜು ಮತ್ತಿತರರು ಹಾಜರಿದ್ದರು.

Facebook Comments

Sri Raghav

Admin