ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿ

ಈ ಸುದ್ದಿಯನ್ನು ಶೇರ್ ಮಾಡಿ

Namma-Metro--01
ಬೆಂಗಳೂರು, ಫೆ.6- ನಮ್ಮ ಮೆಟ್ರೋ ರೈಲಿನಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿ ಮೀಸಲಿರಿಸಬೇಕೆಂಬ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗುತ್ತಿದೆ. ಫೆ.14ರಂದು ವ್ಯಾಲೆಂಟೆನ್ಸ್ ದಿನದಂದು ನಮ್ಮ ಬೆಂಗಳೂರು ಮೆಟ್ರೋಗೆ ಮೂರು ಹೊಸ ಬೋಗಿಗಳನ್ನು ರೈಲ್ವೆ ಬೋಗಿ ಉತ್ಪಾದನಾ ಕಾರ್ಖಾನೆ ಬಿಇಎಂಎಲ್ ನೀಡುತ್ತಿದೆ. ಇದರ ಪರಿಶೀಲನಾ ಕಾರ್ಯ ನಡೆದು ಮಾರ್ಚ್ ವೇಳೆಗೆ ಕಾರ್ಯಾಚರಣೆ ಆರಂಭಿಸಲಾಗುತ್ತದೆ ಎಂಬ ಮಾಹಿತಿ ತಿಳಿದುಬಂದಿದೆ.

ಮಹಿಳೆಯರಿಗೆ ಪ್ರತ್ಯೇಕ ಬೋಗಿ ಇರಬೇಕೆಂಬ ಬೇಡಿಕೆ ಹಲವು ದಿನಗಳಿಂದ ಕೇಳಿಬರುತ್ತಿದ್ದು, ಹೆಚ್ಚುವರಿ ಬೋಗಿಯನ್ನು ಮಹಿಳಾ ಪ್ರಯಾಣಿಕರಿಗೆ ಮಾತ್ರ ಮೀಸಲಿರಿಸಲಾಗುವುದು, ಆರು ಬೋಗಿಗಳ ರೈಲಿನಲ್ಲಿ ಲೋಕೋ ಪೈಲಟ್ ಕ್ಯಾಬಿನ್ ಹಿಂಭಾಗದ ಬೋಗಿಯನ್ನು ಮಹಿಳೆಯರಿಗೆ ಮೀಸಲಿರಿಸಲು ನಿರ್ಧರಿಸಲಾಗಿದೆ ಎಂದು ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಸ್ಪಷ್ಪಪಡಿಸಿದ್ದಾರೆ.

ನಮ್ಮ ಮೆಟ್ರೋ ಮೊದಲ ಹಂತ ಕಳೆದ ವರ್ಷ ಪೂರ್ಣಗೊಂಡ ನಂತರ ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ 50 ರೈಲುಗಳಿಗೆ ಮೂರು ಹೆಚ್ಚುವರಿ ಬೋಗಿ ಅಳವಡಿಸಲಾಗುತ್ತಿದೆ. ಈಗ ಪ್ರತಿನಿತ್ಯ 4 ಲಕ್ಷ ಪ್ರಯಾಣಿಕರು ರೈಲಿನಲ್ಲಿ ಸಂಚರಿಸುತ್ತಿದ್ದಾರೆ. ಹೆಚ್ಚುವರಿ ಬೋಗಿ ಪೂರೈಕೆಗಾಗಿ ಕಳೆದ ವರ್ಷ ಬಿಇಎಂಎಲ್‍ನೊಂದಿಗೆ 1421 ಕೋಟಿ ರೂ. ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ. ಉಳಿದಿರುವ ರೈಲ್ವೆ ಕಾಮಗಾರಿ ಜೂನ್ 2019ರಂದು ಪೂರ್ಣಗೊಳ್ಳಲಿದ್ದು , ಫೆ.14ರಂದು ನಡೆಯುವ ಸಮಾರಂಭದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ. ಜೆ. ಜಾರ್ಜ್ ಪಾಲ್ಗೊಳ್ಳಲಿದ್ದಾರೆ ಎಂದು ಮಹೇಂದ್ರ ಜೈನ್ ತಿಳಿಸಿದರು.

ಹೆಚ್ಚುವರಿ ಎಸ್ಕಲೇಟರ್‍ಗಳ ಅಳವಡಿಕೆ:
ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಎಸ್ಕಲೇಟರ್‍ಗಳನ್ನ ಅಳವಡಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿರ್ಧರಿಸಿದೆ. ಅದರ ಭಾಗವಾಗಿ ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಇಳಿಯುವ ಎಸ್ಕಲೇಟರ್‍ಅನ್ನು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಉದ್ಘಾಟಿಸಿದರು. ಅನೇಕ ಮೆಟ್ರೋ ನಿಲ್ದಾಣಗಳಲ್ಲಿ ಮೇಲಕ್ಕೆ ಹತ್ತಲು ಮಾತ್ರ ಎಸ್ಕಲೇಟರ್ ಸೌಲಭ್ಯ ಇದೆ. ಇಳಿಯುವುದಕ್ಕೆ ಈ ಸೌಕರ್ಯ ಇಲ್ಲ. ಶೀಘ್ರವೇ ಈ ಸೌಕರ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಪ್ರೇಮಿಗಳ ದಿನದಂದು ನಮ್ಮ ಮೆಟ್ರೋಗೆ ಬಿಇಎಂಎಲ್‍ನಿಂದ ಮೂರು ಬೋಗಿಗಳು ಹಸ್ತಾಂತರವಾಗಲಿದೆ. 1,421 ಕೋಟಿ ರೂ. ವೆಚ್ಚದಲ್ಲಿ 150 ಬೋಗಿಗಳನ್ನು ಖರೀದಿಸಲು ಬಿಎಂಆರ್‍ಸಿಎಲ್ ಮತ್ತು ಬಿಇಎಂಎಲ್ ಒಪ್ಪಂದ ಮಾಡಿಕೊಂಡಿದೆ. ಜನವರಿ ಅಂತ್ಯದಲ್ಲಿ ಮೂರು ಬೋಗಿಗಳನ್ನು ನೀಡುವುದಾಗಿ ಬಿಎಂಆರ್ ಸಿಎಲ್‍ಗೆ ಬಿಇಎಂಎಲ್ ತಿಳಿಸಿತ್ತು. ಆದರೆ, ಹಲವು ಕಾರಣಗಳಿಂದ ಹಸ್ತಾಂತರಿಸುವ ದಿನವನ್ನು ಮುಂದೂಡಲಾಗಿತ್ತು. ಫೆ.14ರಂದು ಮೂರು ಬೋಗಿಗಳನ್ನು ನೀಡಲು ಸಿದ್ಧತೆ ನಡೆಸಿದೆ.

Facebook Comments

Sri Raghav

Admin