ಪಾರ್ಟಿಯಲ್ಲಿ ರಂಜಿಸಲು ಒಪ್ಪದ ನಟಿಯನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

ಈ ಸುದ್ದಿಯನ್ನು ಶೇರ್ ಮಾಡಿ

pak-actor
ಲಾಹೋರ್, ಫೆ. 6- ಪ್ರತಿಷ್ಠಿತ ಖಾಸಗಿ ಪಾರ್ಟಿಯೊಂದರಲ್ಲಿ ಪಾಲ್ಗೊಂಡು ರಂಜಿಸಲು ಒಪ್ಪದ ಪಾಕ್ ನಟಿಯೊಬ್ಬರನ್ನು ಗುಂಡಿಕ್ಕಿ ಕೊಂದಿರುವ ಪ್ರಕರಣ ಬೆಳಕಿಗೆ ಬಂದಿದೆ. ಪಾಕಿಸ್ತಾನದ ಶ್ರೇಷ್ಠ ನಟಿ ಹಾಗೂ ಗಾಯಕಿ ಸಂಬುಲ್ (25) ದುಷ್ಕರ್ಮಿಯೊಬ್ಬರಿಂದ ಹತ್ಯೆಯಾದ ನಟಿ. ಲಾಹೋರ್‍ನ ಶೇಖ್ ಮುಲ್ತಾನ್‍ನಲ್ಲಿರುವ ಸಂಬುಲ್‍ರ ಮನೆಗೆ ಆಗಮಿಸಿದ್ದ ಮೂವರು ದುಷ್ಕರ್ಮಿಗಳು ನಾವು ಹಮ್ಮಿಕೊಂಡಿರುವ ಅತಿ ವೈಭವೋಪೇತದ ಖಾಸಗಿ ಸಮಾರಂಭದಲ್ಲಿ ಪಾಲ್ಗೊಳ್ಳಬೇಕೆಂಬ ಆಹ್ವಾನವಿತ್ತಿದ್ದರು. ಇದಕ್ಕೆ ಒಪ್ಪದ ನಟಿಯ ಜೊತೆಗೆ ವಾಗ್ವಾದಕ್ಕೂ ಇಳಿದಿದ್ದಾರೆ.

ಗಲಾಟೆ ಅತಿರೇಕವಾದಾಗ ದುಷ್ಕರ್ಮಿಗಳು ಆಕೆಯ ಮೇಲೆ ಗುಂಡಿಕ್ಕಿರುವುದೇ ಅಲ್ಲದೆ ಚಾಕುವಿನಿಂದ ಮನಸೋಇಚ್ಛೆ ತಿವಿದು ಕೊಂದಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡಿದಾಗ ಈ ಕೃತ್ಯದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ನೀಮ್ ಕಟ್ಟಾಕ್ ಅವರ ಕೈವಾಡವಿರುವುದು ಖಚಿತಪಟ್ಟ ನಂತರ ಅವರನ್ನು ಬಂಧಿಸಿ ಉಳಿದಿಬ್ಬರು ದುಷ್ಕರ್ಮಿಗಳ ಪತ್ತೆಗೆ ಜಾಲ ಬೀಸಿದ್ದಾರೆ. ಸಂಬುಲ್‍ಖಾನ್ ಅವರು ಪಾಕಿಸ್ತಾನದ ಪ್ರಸಿದ್ಧ ನಟಿಯಾಗಿದ್ದು ಪಾಸ್ಟೋ ಭಾಷೆಯ ಚಿತ್ರಗಳಲ್ಲೂ ನಟಿಸಿದ್ದಾರೆ. ಇತ್ತೀಚೆಗೆ ಕಿರುತೆರೆಯತ್ತ ವಾಲಿದ್ದ ಅವರು, ಮೇರಿ ಕಹ್ಯೂಬ್ ರೈಜಾ ರೈಜಾ, ಬುರಿ ಔರಾತ್, ದಿಲ್-ಈ-ಆಬಾದ್, ರಾಜು ರಾಕೆಟ್ ಧಾರಾವಾಹಿಗಳಲ್ಲಿ ತಮ್ಮ ನಟನೆಯ ಮೂಲಕ ಗಮನ ಸೆಳೆದಿದ್ದರು. ಕಳೆದ 2016ರಲ್ಲೂ ಕೂಡ ಇದೇ ರೀತಿಯ ಪ್ರಕರಣ ನಡೆದಿದ್ದು , ಖ್ಯಾತ ನಟಿ, ಡ್ಯಾನ್ಸರ್ ಕಿಸ್ಮತ್ ಬೇಗ್ ಹತ್ಯೆ ಪ್ರಕರಣವನ್ನು ಇಲ್ಲಿ ಸ್ಮರಿಸಬಹುದು.

Facebook Comments

Sri Raghav

Admin