ನೆಹರು ಬದಲು ಪಟೇಲರು ಪ್ರಧಾನಿಯಾಗಿದ್ದರೆ ಕಾಶ್ಮೀರ ಪಾಕ್ ನಿಯಂತ್ರಣಕ್ಕೊಳಪಡುತ್ತಿರಲಿಲ್ಲ : ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi--1 Modi--2

ನವದೆಹಲಿ, ಫೆ.7- ವಿಭಜನೆಯು ಕಾಂಗ್ರೆಸ್‍ನ ದೋಷಪೂರಿತ ನೀತಿಗಳ ಫಲಿತಾಂಶ ಎಂದು ಕಟುವಾಗಿ ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ, ಆ ಪಕ್ಷ ಬಿತ್ತಿದ ವಿಷಬೀಜದಿಂದ ದೇಶ ಇಂದಿಗೂ ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಎಂದು ವಾಗ್ದಾಳಿ ನಡೆಸಿದರು.  ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯಕ್ಕೆ ಪ್ರತ್ಯುತ್ತರವಾಗಿ ಮಾತನಾಡಿದ ಅವರು, ಭಾರತದ ಪ್ರಥಮ ಪ್ರಧಾನಮಂತ್ರಿ ಜವಾಹರ್‍ಲಾಲ್ ನೆಹರು ಮತ್ತು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ನೆಹರು ಮತ್ತು ಕಾಂಗ್ರೆಸ್‍ನಿಂದಲೇ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು ಎಂದು ಆ ಪಕ್ಷದ ನಾಯಕರಲ್ಲಿ ಒಬ್ಬರು ಹೇಳುತ್ತಾರೆ. ಹಾಗಾದರೆ ಬೇರೆ ಯಾವ ನಾಯಕರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಶ್ರಮಿಸಲಿಲ್ಲವೆ ಎಂದು ಪ್ರಶ್ನಿಸಿದರು.

ನೆಹರು ಬದಲು ಸರ್ದಾರ್ ವಲ್ಲಭಭಾಯ್ ಪಟೇಲರು ಪ್ರಥಮ ಪ್ರಧಾನಿಯಾಗಿದ್ದರೆ, ಕಾಶ್ಮೀರದ ಒಂದು ಭಾಗವು ಪಾಕಿಸ್ತನಾದ ನಿಯಂತ್ರಣಕ್ಕೆ ಒಳಪಡುತ್ತಿರಲಿಲ್ಲ ಎಂದು ಹೇಳಿದರು. ಪ್ರಜಾಪ್ರಭುತ್ವದ ಬಗ್ಗೆ ನಮಗೆ ಪಾಠ ಹೇಳಲು ಬರಬೇಡಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಮೋದಿ, ನೀವು (ಕಾಂಗ್ರೆಸ್) ಹಿಂದೆ ಏನು ಮಾಡಿದ್ದೀರಿ ಎಂಬುದು ನಮಗೆ ಗೊತ್ತಿದೆ ಎಂದು ಕಟುವಾಗಿ ಟೀಕಿಸಿದರು.  ಸಂಸತ್ ಕಲಾಪಗಳಿಗೆ ಅಡ್ಡಿಯುಂಟುಮಾಡುತ್ತಿರುವ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಪ್ರತಿಭಟಿಸುವುದು ವಿರೋಧ ಪಕ್ಷದ ಹಕ್ಕು. ಆದರೆ, ಕಲಾಪಗಳಿಗೆ ಅಡಚಣೆ ಮಾಡುವುದಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಆಂಧ್ರ ಪ್ರದೇಶದಿಂದ ತೆಲಂಗಾಣವನ್ನು ಪ್ರತ್ಯೇಕಗೊಳಿಸುವ ಕಾಂಗ್ರೆಸ್ ನಿರ್ಧಾರದ ಬಗ್ಗೆ ವಾಗ್ದಾಳಿ ನಡೆಸಿದ ಅವರು, ರಾಜಕೀಯ ಉದ್ದೇಶಗಳಿಗಾಗಿ ರಾಜ್ಯವನ್ನು ವಿಭಜನೆ ಮಾಡಲಾಗಿದೆ. ಈ ನಿರ್ಧಾರದಿಂದ ಜನರು ನರಳುವಂತಾಗಿದೆ ಎಂದರು. ಒಂದು ವರ್ಗದ ಜನರ ಹಿತಾಸಕ್ತಿಗಾಗಿ ಈ ನಿರ್ಧಾರಕ್ಕೆ ಸಹಿ ಮಾಡಲಾಗಿದೆ ಹೊರತು ರಾಷ್ಟ್ರದ ಒಳಿತಿಗಾಗಿ ಅಲ್ಲ ಎಂದು ಮೋದಿ ಛೇಡಿಸಿದರು.

Facebook Comments

Sri Raghav

Admin