ಕದಿರೇಶ್ ಹತ್ಯೆ: ವಿಧಾನಸಭೆಯಲ್ಲಿ ಪ್ರತಿಧ್ವನಿ, ಬಿಜೆಪಿ-ಕಾಂಗ್ರೆಸ್ ನಡುವೆ ವಾಕ್ಸಮರ

ಈ ಸುದ್ದಿಯನ್ನು ಶೇರ್ ಮಾಡಿ

c-t-ravi-session
ಬೆಂಗಳೂರು, ಫೆ.8- ನಿನ್ನೆ ನಗರದಲ್ಲಿ ನಡೆದ ಬಿಬಿಎಂಪಿ ಮಾಜಿ ಸದಸ್ಯ ಕದಿರೇಶ್ ಅವರ ಹತ್ಯೆ ವಿಷಯ ವಿಧಾನಭೆಯಲ್ಲಿಂದು ಪ್ರತಿಧ್ವನಿಸಿ ಆಡಳಿತ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿಗೆ ಅವಕಾಶ ಮಾಡಿಕೊಟ್ಟಿತು. ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಶಾಸಕಾಂಗ ಪಕ್ಷದ ಉಪ ನಾಯಕ ಮೊನ್ನೆ ಸಂತೋಷ್ ಹತ್ಯೆಯಾಯಿತು. ಇಂದು ಕದಿರೇಶ್ ಹತ್ಯೆಯಾಗಿದೆ. ನಾಳೆ ಯಾರು ಎಂದು ಪ್ರಶ್ನಿಸುತ್ತಿದ್ದರು. ಅಷ್ಟರಲ್ಲಿ ಆಡಳಿತ ಪಕ್ಷದ ಕಡೆಯಿಂದ ಸಿ.ಟಿ.ರವಿ ಎಂಬ ಹೆಸರು ಕೇಳಿಬಂತು.

ಆಗ ಸಿಟ್ಟಿಗೆದ್ದ ರವಿ ಇನ್ನು ಯಾರ್ಯಾರ ಹೆಸರು ಸ್ಕೆಚ್ ಹಾಕಿದ್ದೀರಿ ಹೇಳಿ. ನಾವು ಸಾವಿಗೆ ಹೆದರುವುದಿಲ್ಲ. ಹುಟ್ಟಿದವರು ಸಾಯಲೇಬೇಕು. ಯಾರು ಮೊಳೆ ಹೊಡೆದುಕೊಂಡು ಇರುವುದಿಲ್ಲ ಎಂದು ಏರಿದ ದನಿಯಲ್ಲಿ ಮಾತನಾಡಿದರು. ಇದಕ್ಕೆ ಬಿಜೆಪಿ ಶಾಸಕರಾದ ಅರವಿಂದ ಲಿಂಬಾವಳಿ, ದೇವರಾಜ್ ಬೆಂಬಲಿಸಿ ಮಾತನಾಡಿದರು. ಮಧ್ಯ ಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಶಾಸಕರ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ನಾಚಿಕೆಯಾಗಬೇಕು. ಸರ್ಕಾರ ಹಾಳಾಗಿದೆ. ಇವರು ಮಾನಸಿಕವಾಗಿ ಯಾವ ರೀತಿ ಸಿದ್ದರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಗೂಂಡಾಗಿರಿ ಓಪನ್ ಆಗಿ ನಡೆಯುತ್ತಿದೆ ಎಂದರು.
ಆಗ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಓಹೋ….ಎಂದರು. ಲಿಂಬಾವಳಿ ಕೂಡ ಮಾತಿಗೆ ಮಾತು ನೀಡಲು ಮುಂದಾದಾಗ ಕಂದಾಯ ಸಚಿವರು ಹೇಳ್ತಾರೆ ಎಂದು ಒತ್ತಿ ಒತ್ತಿ ಹೇಳಿದರು. ಆಗ ಶಾಸಕ ಜೀವರಾಜ್ ಮಾತನಾಡಿ, ಸಿ.ಟಿ.ರವಿ ಅವರಿಗೆ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಎಸ್ಪಿ ಅವರಿಗೆ ದೂರು ನೀಡಿದ್ದಾರೆ. ಅವರಿಗೆ ರಕ್ಷಣೆ ಕೊಡಿ ಎಂದು ಆಗ್ರಹಿಸಿದರು.

ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಕೃಷಿ ಸಚಿವ ಕೃಷ್ಣಬೈರೇಗೌಡ ಅವರು, ಸಿ.ಟಿ.ರವಿ ಅವರ ಹೆಸರು ಪ್ರಸ್ಥಾಪಿಸಿದ್ದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇವೆ ಎಂದರು. ಆಗಲೂ ಬಿಜೆಪಿ ಸದಸ್ಯ ಸುಮ್ಮನಾಗದಿದ್ದಾಗ ಸಭಾಧ್ಯಕ್ಷ ಪೀಠದಲ್ಲಿದ್ದ ಉಪಸಭಾಧ್ಯಕ್ಷ ಎನ್.ಎಚ್.ಶಿವಶಂಕರ್‍ರೆಡ್ಡಿ ಅವರು, ಈಗಾಗಲೇ ಸರ್ಕಾರ ವಿಷಾದ ವ್ಯಕ್ತಪಡಿಸಿದೆ. ಆ ವಿಚಾರ ಬಿಡಿ ಎಂದಾಗ ಈ ಚರ್ಚೆಗೆ ತೆರೆ ಬಿದ್ದಿತು. ಮತ್ತೆ ಮಾತು ಮುಂದುವರೆಸಿದ ಬಿಜೆಪಿ ಉಪ ನಾಯಕ ಆರ್.ಅಶೋಕ್, ರಾಜಕಾರಣಕ್ಕಾಗಿ ಕೊಲೆಗಳಾಗುತ್ತಿವೆ. ಇದರಿಂದ ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತಿದೆ. ಒಳ್ಳೆಯದಾಗುವುದಿಲ್ಲ. ಸಾವು ನಮ್ಮ ಹಿಂದೆಯೇ ಇರುತ್ತದೆ. ಯಾರೂ ಕೂಡ ಶಾಶ್ವತವಲ್ಲ. ಸಿ.ಟಿ.ರವಿ, ಸುರೇಶ್‍ಬಾಬು ಸೇರಿದಂತೆ ನಾಲ್ಕೈದು ಶಾಸಕರಿಗೆ ಬೆದರಿಕೆ ಕರೆಗಳು ಬಂದಿವೆ. ನಿನ್ನೆ ಮಧ್ಯಾಹ್ನ 3.30ಕ್ಕೆ ಹಾಡಹಗಲೇ ಕದಿರೇಶ್ ಹತ್ಯೆಯಾಗಿದೆ. ಗುಪ್ತಚರ ಇಲಾಖೆ ಏನಾಗಿದೆ? ಪೊಲೀಸರೆಂದರೆ ಭಯ ಇಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಸ್ತಿತಿಯಲ್ಲಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಸುರಕ್ಷಿತ ಸಿಟಿಯಾಗಿದ್ದ ಬೆಂಗಳೂರು ಕ್ರೈಂ ಸಿಟಿಯಾಗಿದೆ. ಈ ವಿಚಾರದಲ್ಲಿ ರಾಜಕಾರಣಗೊಳಿಸದೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆರೋಪಿಗಳನ್ನ ಬಂಧಿಸಬೇಕು. ದಕ್ಷ ಅಧಿಕಾರಿಗಳನ್ನು ನೇಮಿಸಬೇಕು ಎಂದು ಆಗ್ರಹಿಸಿದರು.

ಜಗದೀಶ್ ಶೆಟ್ಟರ್ ಮಾತನಾಡಿ, ರಾಜ್ಯ ಸರ್ಕಾರ ಹತ್ಯೆ ಪ್ರಕರಣ ಗಳನ್ನು ಗಂಭೀರವಾಗಿ ಪರಿಗಣಿಸಬೇಕು. ರೌಡಿ ಪಟ್ಟಿಯಲ್ಲಿರುವವರ ಮೇಲೆ ನಿಗಾ ಇಡಬೇಕು ಪೊಲೀಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಆಗ ಸರ್ಕಾರದ ಪರವಾಗಿ ಕೃಷಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಗೃಹ ಸಚಿವರಿಂದ ಉತ್ತರ ಕೊಡಿಸುವ ಭರವಸೆ ನೀಡಿದರು.

Facebook Comments