ಮಠಗಳ ಉಸಾಬರಿ ಬೇಡ ಎಂದು ಸುತ್ತೋಲೆ ಹಿಂಪಡೆದ ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-Session

ಬೆಂಗಳೂರು,ಫೆ.8- ಯಾವುದೇ ಮಠ ಮಂದಿರಗಳು, ದೇವಸ್ಥಾನ ಗಳನ್ನು ಸರ್ಕಾರ ಸ್ವಾಧೀನಕ್ಕೆ ತೆಗೆದುಕೊಳ್ಳುವ ಉದ್ದೇಶವಿಲ್ಲ. ಅಂತಹ ಆಲೋಚನೆ ಯನ್ನೂ ಮಾಡಿಲ್ಲ. ಮಾಡು ವುದೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದ ರಾಮಯ್ಯ ಸ್ಪಷ್ಟಪಡಿಸಿದರು.  ಮೇಲ್ಮನೆ ಕಲಾಪದಲ್ಲಿ ಮಠಮಾನ್ಯಗಳನ್ನು ಧಾರ್ಮಿಕ ದತ್ತಿ ಇಲಾಖೆ ಸ್ವಾಧೀನಪಡಿಸಿಕೊಳ್ಳುವ ಸಂಬಂಧ ಪ್ರಕಟಣೆ ಹೊರಡಿಸಲಾಗಿದೆ.  ಈ ಬಗ್ಗೆ ನಿಲುವಳಿ ಸೂಚನೆ ಪ್ರಸ್ತಾಪ ಮಾಡಿದ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡುವ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಿದ್ದರಾಮಯ್ಯನವರು ಮಠಮಂದಿರಗಳು, ಧಾರ್ಮಿಕ ಕೇಂದ್ರಗಳು ಸೇರಿದಂತೆ ಯಾವುದನ್ನೂ ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳುವುದಿಲ್ಲ. ಅದರ ಉಸಾಬರಿ ನಮಗೇಕೆ ಎಂದು ಪ್ರಶ್ನಿಸಿದರು.

ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು ಇಂದೇ ವಾಪಸ್ ಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಠ-ಮಂದಿರಗಳನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳಲಿದೆ ಎಂಬುದು ಕೇವಲ ವದಂತಿ. ಆ ಪ್ರಸ್ತಾವನೆಯೇ ನಮ್ಮ ಮುಂದೆ ಇಲ್ಲ ಎಂದು ಪುನರುಚ್ಚಿರಿಸಿದರು. ದೇವಸ್ಥಾನ-ಮಠ ಮಂದಿರಗಳನ್ನು ಸ್ವಾಧೀನಪಡಿಸಿಕೊಳ್ಳುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ. ಹೈಕೋರ್ಟ್‍ನ ವಿಭಾಗೀಯ ಪೀಠದ ಸೂಚನೆಯಂತೆ ಸಾರ್ವಜನಿಕ ಅಭಿಪ್ರಾಯವನ್ನು ಪಡೆಯಲು ಮುಂದಾಗಿತ್ತು. ಈ ಸಂಬಂಧ ನಾವು ಸಾರ್ವಜನಿಕ ಅಭಿಪ್ರಾಯ ಕೇಳಲು ಪ್ರಕಟಣೆ ಮಾತ್ರ ಹೊರಡಿಸಿದ್ದೆವು. ಅದನ್ನು ಕೂಡ ವಾಪಸ್ ತೆಗೆದುಕೊಳ್ಳುತ್ತಿದ್ದೇವೆ ಎಂದರು.

ಮಠ-ಮಂದಿರ, ಧಾರ್ಮಿಕ ಸಂಸ್ಥೆಗಳ ಸ್ವಾಧೀನಕ್ಕೆ ಯಾವುದೇ ಆದೇಶ, ನಿರ್ದೇಶನ, ಸುತ್ತೋಲೆ ಹೊರಡಿಸಿಲ್ಲ. ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಗೆ ಪ್ರಕಟಣೆ ಮಾತ್ರ ಹೊರಡಿಸಲಾಗಿತ್ತು. ಈ ಪ್ರಕಟಣೆಯಿಂದ ಸಾರ್ವಜನಿಕರ ಮನಸ್ಸಿಗೆ ನೋವಾದ ಹಿನ್ನೆಲೆಯಲ್ಲಿ ಸುತ್ತೋಲೆಯನ್ನು ವಾಪಸ್ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ಯಾರಿಗೂ ಯಾವುದೇ ರೀತಿಯ ಸಂಶಯ ಬೇಡ ಎಂದು ಮುಖ್ಯಮಂತ್ರಿ ಸ್ಪಷ್ಪಡಿಸಿದರು.  2007ರಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ನಿವೃತ್ತ ನ್ಯಾಯಮೂರ್ತಿ ರಾಮ ಜೋಯಿಸ್ ನೇತೃತ್ವದ ಸಮಿತಿ ಇದೇ ರೀತಿ ಪ್ರಕಟಣೆಯನ್ನು ಹೊರಡಿಸಿ ಸಾರ್ವಜನಿಕರ ಅಭಿಪ್ರಾಯ ಕೇಳಿತ್ತು. ಅದೇ ಪ್ರಕಟಣೆಯನ್ನು ಯಥಾವತ್ತಾಗಿ ನಾವು ಪ್ರಕಟಿಸಿದ್ದೇವೆ.

ರಾಮ ಜೋಯಿಸರು ಪ್ರಕಟಣೆ ಹೊರಡಿಸಿದ್ದಾಗ ನೀವೇ ಆಡಳಿತದ ಭಾಗವಾಗಿದ್ರಿ. ಆಗ ಏಕೆ ವಿರೋಧಿಸಲಿಲ್ಲ. ಹಿಂದೂ ಧರ್ಮ ನಿಮ್ಮ ಗುತ್ತಿಗೆಯೇ? ನಾವು ಹಿಂದೂಗಳಲ್ಲವೆ? ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.  2007ರ ಪ್ರಕಟಣೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ದಾಖಲೆಗಳ ಉಲ್ಲೇಖವನ್ನು ಸದನದಲ್ಲಿ ವಿವರಿಸಿದ ಮುಖ್ಯಮಂತ್ರಿಗಳು ಪ್ರತಿಪಕ್ಷಗಳ ಬಾಯನ್ನು ಕಟ್ಟಿ ಹಾಕಿದರು.  ನಮಗೆ ಯಾವುದೇ ದೇವಸ್ಥಾನ, ಮಠ-ಮಂದಿರಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಉದ್ದೇಶವಿಲ್ಲ. ಆ ಉದ್ದೇಶ ಅವರಿಗೂ ಇಲ್ಲ ಎಂದು ಭಾವಿಸುತ್ತೇನೆ. ಅವರಿಗೆ ಬೇರೆ ವಿಷಯಗಳಿಲ್ಲ. ಹಾಗಾಗಿ ಇಂಥ ವಿಚಾರಗಳನ್ನು ಟೀಕೆ ಮಾಡುತ್ತಾರೆಂದು ತಿರುಗೇಟು ನೀಡಿದರು.

Facebook Comments

Sri Raghav

Admin