18ರಂದು ಷಾ ಆಗಮನ : ಕರಾವಳಿಯಲ್ಲಿ ಹೆಚ್ಚಾಗಲಿದೆ ಎಲೆಕ್ಷನ್ ಕಾವು

ಈ ಸುದ್ದಿಯನ್ನು ಶೇರ್ ಮಾಡಿ

Amit-Shah--0124

ಬೆಂಗಳೂರು,ಫೆ.8-ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಚಾರದ ಭರಾಟೆಯನ್ನು ಇನ್ನಷ್ಟು ಚುರುಕುಗೊಳಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇದೇ 18ರಂದು ಮೂರು ದಿನಗಳ ಭೇಟಿಗಾಗಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ಈ ಬಾರಿ ಮೂರು ದಿನಗಳ ಪ್ರವಾಸದಲ್ಲಿ ಅಮಿತ್ ಷಾ ಆರ್‍ಎಸ್‍ಎಸ್‍ನ ಪ್ರಯೋಗ ಶಾಲೆ ಕರಾವಳಿ ಜಿಲ್ಲೆಗಳನ್ನು ಕೇಂದ್ರೀಕರಿಸಿ ಪ್ರವಾಸ ಮಾಡಲಿದ್ದಾರೆ.

18ರಂದು ಮಂಗಳೂರಿಗೆ ಆಗಮಿಸಲಿರುವ ಅವರು ಅಂದು ಸಂಜೆ ಇಲ್ಲಿನ ವಿಮಾನ ನಿಲ್ದಾಣದ ಹೊರವಲಯದಲ್ಲಿ ಬೃಹತ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. 19ರಂದು ಬೆಳಗ್ಗೆ ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ. ಬಳಿಕ ಅಮಿತ್ ಷಾ ಪುತ್ತೂರು ಹಾಗೂ ಬಂಟ್ವಾಳ ವಿಧಾನಸಭೆ ಕ್ಷೇತ್ರಗಳ ಕಾರ್ಯಕರ್ತರ ಸಭೆ ನಡೆಸಿ ಚುನಾವಣೆಗೆ ರಣಕಹಳೆ ಮೊಳಗಿಸುವರು. ಬಳಿಕ ಉಡುಪಿಯಲ್ಲಿರುವ ಪೇಜಾವರ ಮಠಕ್ಕೆ ಭೇಟಿ ನೀಡಿ ವಿಶ್ವೇಶ್ವರ ತೀರ್ಥ ಸ್ವಾಮಿಗಳ ಆಶೀರ್ವಾದ ಪಡೆಯಲಿದ್ದಾರೆ. ಇತ್ತೀಚೆಗೆ ದುಷ್ಕರ್ಮಿಗಳಿಂದ ಹಲ್ಲೆಗೀಡಾದ ಬಿಜೆಪಿ ಕಾರ್ಯಕರ್ತ ದಿಲೀಪ್‍ರಾವ್ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ.

ನಂತರ 20ರಂದು ಉತ್ತರಕನ್ನಡ ಜಿಲ್ಲೆಗೆ ಭೇಟಿ ನೀಡಲಿರುವ ಅಮಿತ್ ಷಾ ಬೃಹತ್ ಕಾರ್ಯಕರ್ತರ ಸಮಾವೇಶವನ್ನು ನಡೆಸಲಿದ್ದಾರೆ. ಬೆಳಗ್ಗೆ ಇತಿಹಾಸ ಪ್ರಸಿದ್ಧ ಶಿರಸಿಯ ಮಾರಿಕಾಂಬ ದೇವಸ್ಥಾನಕ್ಕೂ ಭೇಟಿ ಕೊಡಲಿರುವ ಷಾ ದೇವರ ದರ್ಶನ ಪಡೆಯಲಿದ್ದಾರೆ. ಬಳಿಕ ಶಿರಸಿಯಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ತದನಂತರ ಹೊನ್ನಾವರಕ್ಕೂ ಭೇಟಿ ನೀಡಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳುವರು.  ಹೊನ್ನಾವರ ಭೇಟಿ ವೇಳೆ ದುಷ್ಕರ್ಮಿಗಳಿಂದ ಕೊಲೆಯಾದ ಪರೇಶ್ ಮೇಸ್ತ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ ಎಂದು ತಿಳಿದುಬಂದಿದೆ.

Facebook Comments

Sri Raghav

Admin