ಇಂದಿರಾ ಕ್ಯಾಂಟೀನ್ ನಿರ್ಮಿಸಿದ ಗುತ್ತಿಗೆದಾರರ ಅನ್ನಕ್ಕೇ ಕುತ್ತು ..!

ಈ ಸುದ್ದಿಯನ್ನು ಶೇರ್ ಮಾಡಿ

Indira-Canteen

ಬೆಂಗಳೂರು,ಫೆ.9-ಬಡವರ ಹಸಿವು ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಇಂದಿರಾ ಕ್ಯಾಂಟೀನ್ ಬಗ್ಗೆ ಎಲ್ಲರಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ಆದರೆ ಕ್ಯಾಂಟೀನ್ ನಿರ್ಮಿಸಿರುವ ಗುತ್ತಿಗೆದಾರರ ಅನ್ನಕ್ಕೆ ಕುತ್ತು ಬಂದಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಕಡಿಮೆ ದರದಲ್ಲಿ ಹಾಗೂ ಬಡವರ ಹಸಿವು ನೀಗಿಸುವ ಉದ್ದೇಶದಿಂದ ಸರ್ಕಾರ ನಗರದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಯೋಜನೆಯನ್ನು ಕೈಗೊಂಡಿದ್ದಾಗ ಯಾವುದೇ ಸಾಧಕ-ಬಾಧಕಗಳನ್ನು ಪರಿಶೀಲಿಸದೆ ತರಾತುರಿಯಲ್ಲಿ ಹಾಗೂ ಕ್ಯಾಂಟೀನ್ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಕರೆಯದೆ ತಮಿಳುನಾಡಿನ ಸಂಸ್ಥೆಯೊಂದರಿಂದ ವಿನ್ಯಾಸ ತರಿಸಿಕೊಂಡು ಸಿಕ್ಕ ಸಿಕ್ಕ ಗುತ್ತಿಗೆದಾರರಿಗೆ ಕ್ಯಾಂಟೀನ್ ನಿರ್ಮಾಣ ಗುತ್ತಿಗೆಯನ್ನು ನೀಡಿತ್ತು.

ಸರ್ಕಾರದ ಕೆಲಸವಲ್ಲವೇ ಹಣ ಬಂದೇ ಬರುತ್ತದೆ ಎಂದು ಸುಮಾರು 50ರಿಂದ 60 ಗುತ್ತಿಗೆದಾರರು ತಮ್ಮಲ್ಲಿದ್ದ ಹಣ ಹಾಗೂ ಆಭರಣಗಳನ್ನು ಒತ್ತೆಯಿಟ್ಟು ಹಣ ತಂದು ಕ್ಯಾಂಟೀನ್‍ನೇನೋ ನಿರ್ಮಿಸಿಕೊಟ್ಟರು.  ಆದರೆ ಬಿಲ್ ನೀಡಲು ಪಾಲಿಕೆ ಮತ್ತು ಸರ್ಕಾರ ಜಂಗಿಕುಸ್ತಿ ನಡೆಸುತ್ತಿದೆ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತಾಗಿದೆ ಗುತ್ತಿಗೆದಾರರ ಪಾಡು.

ಗುತ್ತಿಗೆದಾರರು ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳನ್ನು ನ್ನು ಕೇಳಿದರೆ ನಮಗೆ ಸರ್ಕಾರದಿಂದ ಹಣ ಬಂದಿಲ್ಲ. ಬಂದರೆ ಖಂಡಿತವಾಗಿಯೂ ಕೊಡುತ್ತೇವೆ. ನೀವು ಸರ್ಕಾರವನ್ನೇ ಕೇಳಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಇತ್ತ ಸರ್ಕಾರವನ್ನು ಕೇಳಿದರೆ ಇದಕ್ಕೆ ನಾವು ಹಣ ಕೊಡಲು ಬರುವುದಿಲ್ಲ. ಪಾಲಿಕೆಯವರನ್ನೇ ಹೋಗಿ ಕೇಳಿ ಅವರೇ ಹಣ ಕೊಡುತ್ತಾರೆ ಅಂತ ಸಬೂಬು ಹೇಳಿ ಕಳುಹಿಸುತ್ತಿದ್ದಾರೆ. ಪಾಲಿಕೆ ಮತ್ತು ಸರ್ಕಾರದ ಬಾಗಿಲಿಗೆ ಅಲೆದು ಗುತ್ತಿಗೆದಾರರು ಸುಸ್ತಾಗಿ ಹೋಗಿದ್ದಾರೆ. ಹಣ ಮಾತ್ರ ತಲುಪಿಲ್ಲ ಎಂದು ಗುತ್ತಿಗೆದಾರರು ದೂರಿದರು. ಕ್ಯಾಂಟೀನ್ ನಿರ್ಮಾಣವಾಗಿ ಮೂರ್ನಾಲ್ಕು ತಿಂಗಳಾದರೂ ಬಿಲ್ ಮಾತ್ರ ಬಂದಿಲ್ಲ ನ್ಯಾಯಾಲಯದ ಮೊರೆ ಹೋಗೋಣ ಅಂದರೆ ನಾವು ಅಧಿಕೃತವಾಗಿ ಯಾವುದೇ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿಲ್ಲ. ಹಾಗಾಗಿ ನಮ್ಮಲ್ಲಿ ದಾಖಲೆಗಳಿಲ್ಲ. ನ್ಯಾಯಾಲಯಕ್ಕೆ ಸೂಕ್ತ ದಾಖಲೆ ಬೇಕು. ನಮ್ಮಲ್ಲಿ ಯಾವುದೇ ಅಧಿಕೃತ ದಾಖಲೆಗಳಿಲ್ಲ. ಬಾಯಿ ಮಾತಿಗೆ ಕಾಮಗಾರಿಯನ್ನು ಮಾಡಿದ್ದೇವೆ. ಸರ್ಕಾರದ ಮಾತುಕೇಳಿ ಈಗ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಪಾಲಿಕೆ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಗುತ್ತಿಗೆದಾರರ ಅಳಲಿಗೆ ಸ್ಪಂದಿಸಿ ಕಾನೂನಾತ್ಮಕವಾಗಿ ಹೋರಾಟ ಮಾಡೋಣವೆಂದರೆ ನೀವುಗಳು ಅಧಿಕೃತ ಟೆಂಡರ್ ಮುಖಾಂತರ ಕಟ್ಟಡ ನಿರ್ಮಾಣ ಮಾಡಿಲ್ಲ. ನಿಮ್ಮದು ತಪ್ಪಿದೆ. ನಿಮ್ಮ ಕಷ್ಟ ನಮಗೆ ತಿಳಿದಿದೆ. ಮಾನವೀಯ ದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ನಿಮ್ಮ ಹಣವನ್ನು ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

Facebook Comments

Sri Raghav

Admin