ಜಿಮ್ ರಘುವಿನ ನೈಜ ಘಟನೆ ‘ರಘುವೀರ’ ಆಗಮನ

ಈ ಸುದ್ದಿಯನ್ನು ಶೇರ್ ಮಾಡಿ

raghuveer

2011ರಲ್ಲಿ ನಡೆದ ಹೃದಯ ವಿದ್ರಾವಕ ಪ್ರೇಮ ಪ್ರಕರಣವನ್ನು ಮಂಡ್ಯ ಭಾಗದ ಜನ ಈವರೆಗೂ ಮರೆತಿಲ್ಲ. ಆ ನೈಜ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ನಿರ್ಮಾಣ ವಾಗಿರುವ ಚಲನಚಿತ್ರ ರಘ ವೀರ್ ಈ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪ್ರೀತಿಯ ಹಿಂದೆ ಬಿದ್ದ ಯುವಕನೊಬ್ಬನ ಕಣ್ಣುಗಳನ್ನು ನಿರ್ದಯವಾಗಿ ಕಿತ್ತು ಹಾಕಿದ ರಾಕ್ಷಸರ ನೈಜ ಕಥಾನಕವನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಈ ಚಿತ್ರವನ್ನು ಕೊಡಗಿನ ಕುವರಿ ಹಾಗೂ ರಘು ಬಾಲ್ಯಸ್ನೇಹಿತೆ ದೇನು ಅಚ್ಚಪ್ಪ ಅವರು ನಿರ್ಮಾಣ ಮಾಡಿದ್ದಾರೆ. ಅಲ್ಲದೆ ಚಿತ್ರದ ನಾಯಕಿ ಅನಿತಾಳ ಪಾತ್ರವನ್ನು ಕೂಡ ಅವರೇ ನಿರ್ವಹಿಸಿದ್ದಾರೆ. ಈ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿ ಮೊನ್ನೆ ನಡೆಯಿತು. ಈ ಘಟನೆಯ ಪ್ರಮುಖ ಪಾತ್ರದಾರಿ ಜಿಮ್ ರಘು, ನಾಯಕಿ ಕಮ್ ನಿರ್ಮಾಪಕಿ ದೇನು ಅಚ್ಚಪ್ಪ, ನಿರ್ದೇಶಕ ಸೂರ್ಯಸತೀಶ್, ನಾಯಕ ನಟ ಹರ್ಷ ಹಾಗೂ ಖಳ ನಾಯಕ ಸ್ವಾಮಿನಾಥನ್ ಹಾಜರಿದ್ದು ಚಿತ್ರದ ಬಗ್ಗೆ ಒಂದಷ್ಟು ಮಹತ್ವದ ವಿಷಯಗಳನ್ನು ವಿವರಗಳನ್ನು ಹಂಚಿಕೊಂಡರು.

ಈ ಚಿತ್ರಕ್ಕೆ ಸೂರ್ಯಸತೀಶ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ. ತಮ್ಮ ನಿರ್ದೇಶನದ ಚಿತ್ರದ ಬಗ್ಗೆ ಮಾತನಾಡಿದ ಅವರು, ನನ್ನ ಸ್ನೇಹಿತನ ಜೀವನದಲ್ಲಿ ನಡೆದ ಈ ನೈಜ ಘಟನೆಯನ್ನು ತೆರೆಯ ಮೇಲೆ ತರಬೇಕೆಂಬುದು ನನ್ನ ಬಹುದಿನಗಳ ಕನಸಾಗಿತ್ತು. ಅದು ಈ ದೇನು ಅಚ್ಚಪ್ಪ ಅವರ ಮೂಲಕ ನೆರವೇರುತ್ತಿದೆ. ಈ ಘಟನೆಯ ಹಿಂದಿರುವ ಕೆಲವು ಸೂಕ್ಷ್ಮ ವಿಚಾರಗಳನ್ನು ಎಳೆಎಳೆಯಾಗಿ ತೆರೆ ಮೇಲೆ ತೆರೆದಿಡುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿದ್ದೇನೆ ಎಂದು ಹೇಳಿದರು. ಕಥೆಯ ರಿಯಲ್ ಹೀರೋ ರಘು ಪಾತ್ರವನ್ನು ನಟ ಹರ್ಷ ನಿರ್ವಹಿಸಿದ್ದಾರೆ. ತನ್ನ ಪಾತ್ರದ ಬಗ್ಗೆ ಮಾತನಾಡಿದ ಹರ್ಷ ರಘು ನನಗೆ ಉತ್ತಮ ಸ್ನೇಹಿತ. ಹಿಂದೆ ಬಣ್ಣಬಣ್ಣದ ಲೋಕ ಚಿತ್ರದಲ್ಲಿ ನಾವಿಬ್ಬರೂ ಒಟ್ಟಿಗೆ ಅಭಿನಯಿಸಿದ್ದೆವು. ಆ ಚಿತ್ರ ರಿಲೀಸಾಗುವ ಮೊದಲೇ ರಘು ಜೀವನದಲ್ಲಿ ಈ ಘಟನೆ ನಡೆದುಹೋಯಿತು ಎಂದು ಮನನೊಂದು ಮಾತನಾಡಿದರು.

ಇನ್ನು ಈ ಚಿತ್ರದ ನಾಯಕಿ ಹಾಗೂ ನಿರ್ಮಾಪಕಿ ಕೂಡ ಆದ ಕೊಡಗಿನ ಬೆಡಗಿ ದೇನು ಅಚ್ಚಪ್ಪ ಚಿತ್ರರಂಗಕ್ಕೆ ಹೊಸಬರೇನಲ್ಲ. ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದಿಂದ ಬರುವ ಲಾಭದಿಂದ ರಘು ಅವರ ಕಣ್ಣಿನ ಆಪರೇಷನ್‍ಗೆ ಸಹಾಯ ಮಾಡುತ್ತೇನೆ ಎಂದು ಹೇಳಿದರು. ಈ ಚಿತ್ರದ ಹಾಡುಗಳಿಗೆ ಲಯಕೋಕಿಲ ರಾಗ ಸಂಯೋಜನೆ ಮಾಡಿದ್ದಾರೆ. ಚಿತ್ರ ಈ ವಾರ ತೆರೆ ಮೇಲೆ ಬರಲಿದೆ.

Facebook Comments

Sri Raghav

Admin