ಜೆಡಿಎಸ್ ಅಧಿಕಾರಕ್ಕೆ ಬಂದರೆ ಅರ್ಧಕ್ಕೆ ನಿಂತಿರುವ ನೀರಾವರಿ ಯೋಜನೆಗಳು ಪೂರ್ಣ

ಈ ಸುದ್ದಿಯನ್ನು ಶೇರ್ ಮಾಡಿ

devegowda
ವಿಜಯಪುರ(ಆಲಮಟ್ಟಿ), ಫೆ.9-ಜೆಡಿಎಸ್ ಅಧಿಕಾರಕ್ಕೆ ಬಂದರೆ ನೀರಾವರಿಗೆ ಹೆಚ್ಚು ಒತ್ತು ಕೊಡಲಾಗುವುದು ಮತ್ತು ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಇಂದಿಲ್ಲಿ ಹೇಳಿದರು. ಸುದ್ದಿಗಾರರದೊಂದಿಗೆ ಮಾತನಾಡಿದ ಅವರು, ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ತಮ್ಮಪಕ್ಷ ಈಗಲೂ ಬದ್ಧ ಎಂದ ಅವರು, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅರ್ಧಕ್ಕೆ ನಿಂತಿರುವ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣ ಗೊಳಿಸುವುದಾಗಿ ಭರವಸೆ ನೀಡಿದರು. ಆಲಮಟ್ಟಿ ನಾರಾಯಣಪುರ ಅಣೆಕಟ್ಟು ನಿರ್ಮಾಣ ತಮ್ಮ ಅವಧಿಯಲ್ಲೇ ಆಗಿದ್ದಾಗಿ ತಿಳಿಸಿದರು.

ಮುಂಬೈ ಕರ್ನಾಟಕ ಎಂಬ ಬೇಧಭಾವವಿಲ್ಲ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು. ತಮ್ಮ ಪಕ್ಷದಲ್ಲಿ ಮೇಲ್ವರ್ಗ, ಕೆಳವರ್ಗ ಎಂಬ ಭೇದಭಾವವಿಲ್ಲ. ಎಲ್ಲ ಸಮಾಜದವರೊಂದಿಗೆ ಒಟ್ಟುಗೂಡಿ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.  ಬಿಎಸ್‍ಪಿ ಜತೆ ಮೈತ್ರಿ ಮಾಡಿಕೊಂಡಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ 20 ಕ್ಷೇತ್ರ ಬಿಟ್ಟುಕೊಡಲಾಗುವುದು. ಮಾಯಾವತಿ ಹಾಗೂ ತಾವು ರಾಜ್ಯಾದ್ಯಂತ ಚುನಾವಣಾ ಪ್ರಚಾರ ಕೈಗೊಳ್ಳುವುದಾಗಿ ಹೇಳಿದರು. ಪ್ರತಿ ತಾಲೂಕು, ಹೋಬಳಿ ಮಟ್ಟದಲ್ಲಿ ಪಕ್ಷದ ಸಮಾವೇಶವನ್ನು ನಡೆಸಲಾಗುವುದು. ನಂತರ ಬೆಂಗಳೂರಿನಲ್ಲಿ ಬೃಹತ್ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗುವುದೆಂದರು.  ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಸಿ.ಮನಗೂಳಿ, ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ, ಮಲ್ಲಿಕಾರ್ಜುನ ಅಂಡಿಗೇರಿ ಸೇರಿದಂತೆ ಇತರರು ಈ ಸಂದರ್ಭದಲ್ಲಿದ್ದರು.

Facebook Comments