ಡೈಮಂಡ್ ನೆಕ್ಲೆಸ್‍ ಗೆಲ್ಲುವ ಅವಕಾಶ ನೀಡಿದ್ದಾರೆ ಕಲಾ ಸಾಮ್ರಾಟ್ ಎಸ್ ನಾರಾಯಣ್..!

ಈ ಸುದ್ದಿಯನ್ನು ಶೇರ್ ಮಾಡಿ

s-narayan-1
ನಮ್ಮ ಚಂದನವನದ ಕಲಾ ಸಾಮ್ರಾಟ್ ಎಸ್.ನಾರಾಯಣ್ ಮತ್ತೆ ಸದ್ದು ಮಾಡುತ್ತಿದ್ದಾರೆ. ಈ ಬಾರಿ ಒಂದಷ್ಟು ಹೊಸಬರ ತಂಡವನ್ನು ಕಟ್ಟಿಕೊಂಡು ಈಗಿನ ಯುವಜನಾಂಗಕ್ಕೆ ಒಂದು ಉತ್ತಮ ಸಂದೇಶ ಹೇಳಲು ಹೊರಟಿದ್ದಾರೆ. ಕಾಲೇಜು ಬ್ಯಾಕ್‍ಡ್ರಾಪ್‍ನಲ್ಲಿ ನಡೆಯುವಂಥ ಈ ಕಥೆಯಲ್ಲಿ ಹಲವಾರು ಸೂಕ್ಷ್ಮ ವಿಚಾರಗಳನ್ನು ಹೇಳುವ ಪ್ರಯತ್ನವನ್ನು ನಾರಾಯಣ್ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಹನುಮಂತನಗರದ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಈ ಚಿತ್ರದ ಶೀರ್ಷಿಕೆಯನ್ನು ಊಹಿಸಿ ಹೇಳುವ ಅವಕಾಶವನ್ನು ಸಾರ್ವಜನಿಕರಿಗೆ ಬಿಟ್ಟಿರುವ ಈ ಚಿತ್ರತಂಡ ಸರಿಯಾದ ಹೆಸರನ್ನು ಸೂಚಿಸಿದವರಿಗೆ ಒಂದು ಲಕ್ಷದವರೆಗಿನ ಡೈಮಂಡ್ ನೆಕ್ಲೆಸ್‍ವೊಂದನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದೆ.

ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಾರಾಯಣ್ 30 ವರ್ಷಗಳ ಈ ಸಿನಿ ಜರ್ನಿಯಲ್ಲಿ ನನ್ನ ಮನಸ್ಸಿಗೆ ತುಂಬಾ ನೋವು ಕೊಡುವಂಥ ಘಟನೆಗಳು ನಡೆದವು. ಸುಮಾರು 18 ಪ್ರಾಜೆಕ್ಟ್‍ಗಳು ನನ್ನ ಕೈತಪ್ಪಿ ಹೋದವು. ಆದರೆ, ಈ ನಿರ್ಮಾಪಕರು ನನ್ನ ಮೇಲೆ ಅತೀವವಾದ ನಂಬಿಕೆಯಿಟ್ಟು ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ. ಅಭಿಜಿತ್ ಮೂಲಕ ಈ ನಿರ್ಮಾಪಕರು ನನಗೆ ಸಿಕ್ಕರು. ಅಭಿಜಿತ್ ಬಹಳ ದಿನಗಳ ನಂತರ ಒಂದು ಒಳ್ಳೆ ಪಾತ್ರವನ್ನು ಈ ಚಿತ್ರದಲ್ಲಿ ಮಾಡುತ್ತಿದ್ದಾರೆ. ಪಂಕಜ್ ಈಗಿನ ಯುವ ಜನಾಂಗದ ಪ್ರತಿನಿಧಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 2 ಜನರೇಷನ್‍ನಲ್ಲಿ ನಡೆಯುವಂಥ ಕಥೆಯಿದು. ಮಾರ್ಚ್ ಮೊದಲ ವಾರದಿಂದ ಶೂಟಿಂಗ್ ಆರಂಭಿಸುತ್ತಿದ್ದೇವೆ. ಸಾಧುಕೋಕಿಲ ಒಂದು ವಿಶೇಷವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂದಿನ ಯುವಪೀಳಿಗೆ ಎತ್ತ ಸಾಗುತ್ತಿದೆ. ಏನನ್ನು ಕಳೆದುಕೊಳ್ಳುತ್ತಿದೆ, ಯಾವುದನ್ನು ಮರೆತಿದೆ. ಇದರಿಂದ ಪೋಷಕರಾದವರು ಎಂಥ ನೋವನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳುತ್ತಿದ್ದೇವೆ ಎಂದು ಹೇಳಿದರು. ಬಿಗ್‍ಬಾಸ್‍ನಿಂದ ಹೊರಬಂದ ನಂತರ ಚಂದನ್‍ಶೆಟ್ಟಿ ಪ್ರಥಮ ಬಾರಿಗೆ ಈ ಚಿತ್ರದ ಸಾಹಿತ್ಯ, ಸಂಗೀತ, ನಿರ್ದೇಶನ ಮಾಡುತ್ತಿದ್ದಾರೆ.

ನಟ ಅಭಿಜಿತ್ ಮಾತನಾಡಿ, ಒಳ್ಳೆಯ ಪಾತ್ರ ಸಿಕ್ಕಿದೆ ಇದರಿಂದ ನನ್ನ 2ನೇ ಇನ್ನಿಂಗ್ಸ್ ಸ್ಟಾಟ್ ಆಗಿದೆ ಎಂದು ಹೇಳಿದರು. ನಂತರ ನಾಯಕ ನಟ ಪಂಕಜ್ ಮಾತನಾಡಿ, ಈ ಕಥೆ ಕೇಳಿದಾಗ ನಾನು ಈ ಪಾತ್ರಕ್ಕಾಗಿ ಪ್ರಿಪೇರ್ ಆಗುವ ಅವಶ್ಯಕತೆ ಇಲ್ಲ ಎನಿಸಿತು. ನಾನು ಹೇಗಿರ್ತೇನೋ ಅದೇ ಥರದ ಪಾತ್ರ ಈ ಚಿತ್ರದಲ್ಲಿದೆ ಎಂದು ಹೇಳಿದರು. ಈ ಚಿತ್ರವನ್ನು ಡ್ರೀಮ್ಸ್ ಅಸೋಸಿಯೇಟ್ ಮೂಲಕ ಅಶೋಕ್ ಶೇಟ್, ಶ್ರೀನಿವಾಸನ್ ದೊರೈ, ಫಾರೂಕ್ ಪಾಷಾ ನಿರ್ಮಾಣ ಮಾಡುತ್ತಿದ್ದು, ನಿರ್ಮಾಪಕರಲ್ಲಿ ಒಬ್ಬರಾದ ಅಶೋಕ್ ಮಾತನಾಡಿ, ಚಿತ್ರರಂಗದಲ್ಲಿ ನಿಮ್ಮ ಬ್ಯಾನರ್ ಗಟ್ಟಿಯಾಗಿ ನೆಲೆ ನಿಲ್ಲಬೇಕು. ಮುಂದೆ ಇನ್ನೂ ಒಳ್ಳೊಳ್ಳೆ ಸಿನಿಮಾಗಳನ್ನು ನಿರ್ಮಾಣ ಮಾಡಬೇಕೆಂಬ ಕನಸಿಟ್ಟುಕೊಂಡು ಈ ಬ್ಯಾನರ್ ಆರಂಭಿಸಿದ್ದೇವೆ ಎಂದು ಹೇಳಿದರು. ಈ ಚಿತ್ರವನ್ನು ಪವನ್ ಕಾರ್ತಿಕ್ ನಿರ್ಮಾಣ-ನಿರ್ವಹಣೆ ಮಾಡುತ್ತಿದ್ದು, ಛಾಯಾಗ್ರಹಣವನ್ನು ಪ್ರಥಮ ಬಾರಿಗೆ ಕಿಟ್ಟಿ ಕೌಶಿಕ್ ನಿರ್ವಹಿಸುತ್ತಿದ್ದು, ಬಹಳ ಅಚ್ಚುಕಟ್ಟಾಗಿ ತಂಡ ಕಟ್ಟಿಕೊಂಡು ಎಸ್.ನಾರಾಯಣ್ ಮುಂದೆ ಸಾಗುತ್ತಿದ್ದಾರೆ.

Facebook Comments

Sri Raghav

Admin