ಬಿಡುಗಡೆಗೆ ಸಿದ್ದವಾದ ‘ಮಿಸ್ಟರ್ ಎಲ್‍ಎಲ್‍ಬಿ’

ಈ ಸುದ್ದಿಯನ್ನು ಶೇರ್ ಮಾಡಿ

mister-LLb-1

ಆರ್.ವಿ. ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಮಿಸ್ಟರ್ ಎಲ್‍ಎಲ್‍ಬಿ ಚಿತ್ರ ಇದೀಗ ಬಿಡುಗಡೆಗೆ ಸಿದ್ದವಾಗಿದೆ. ಈ ಹಿಂದೆ ಪ್ರೇಮ್ ಅಭಿನಯದ ಗುಣವಂತ ಚಿತ್ರವನ್ನು ಡೈರೆಕ್ಟ್ ಮಾಡಿದ್ದ ರಘುವರ್ಧನ್ ಈ ಚಿತ್ರದ ಕಥೆ, ಚಿತ್ರಕಥೆ ರಚಿಸಿ ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಸಹ ಹೊತ್ತುಕೊಂಡಿದ್ದಾರೆ. ಫೆಬ್ರವರಿ 16 ರಂದು ಸುಮಾರು 70 ರಿಂದ 80 ಥಿಯೇಟರ್‍ಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದ್ದು ಚಿತ್ರದ ಬಿಡುಗಡೆಯ ಕುರಿತಂತೆ ವಿವರಗಳನ್ನು ಹಂಚಿಕೊಳ್ಳಲು ಚಿತ್ರತಂಡ ಮೊನ್ನೆ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ನಿರ್ದೇಶಕ ರಘುವರ್ಧನ್ ಮಾತನಾಡುತ್ತ ಈ ತಂಡದಲ್ಲಿ ನಾನೊಬ್ಬ ಹಳಬನಾಗಿದ್ದರೂ ಉಳಿದವರೆಲ್ಲ ಹೊಸಬರು. ಇಷ್ಟು ದಿನ ನಿರ್ದೇಶನ ಮಾಡಿಕೊಂಡಿದ್ದ ನಾನು ಈ ಚಿತ್ರದ ಮೂಲಕ ನಿರ್ಮಾಪಕನಾಗಿದ್ದೇನೆ. ಇದೊಂದು ಅಪ್ಪಟ ಗ್ರಾಮೀಣ ಸೊಗಡಿನ ಚಿತ್ರ. 2 ಜನರೇಶನ್‍ನಲ್ಲಿ ನಡೆಯುವ ಕಥೆಯಿದು ಎಂದು ಹೇಳಿದರು. ನಾಯಕ ಶಿಶಿರ್ ಮಾತನಾಡುತ್ತ ಸೀರಿಯಲ್ ಮೂಲಕವೇ ನಾನು ಚಿತ್ರರಂಗಕ್ಕೆ ಬಂದೆ. ಒಬ್ಬ ಹೀರೋ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಏನೇನು ಬೇಕೋ ಅದೆಲ್ಲ ಈ ಚಿತ್ರದಲ್ಲಿದೆ.

ಒಬ್ಬ ಗೌಡನ ಮಗನಾಗಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ನಂತರ ನಾಯಕಿ ಲೇಖಾಚಂದ್ರ ಮಾತನಾಡಿ ತುಂಬಾ ಕ್ಯೂಟ್ ಆಗಿರುವಂಥ ಹಾಗೂ ನಾಯಕನಿಗೆ ಯಾವಾಗಲೂ ಕ್ವಾಟ್ಲೆ ಕೊಡುವಂಥ ಪಾತ್ರ ಎಂದು ತನ್ನ ಪಾತ್ರವನ್ನು ವಿವರಿಸಿದರು. ಉಳಿದಂತೆ ನಾರಾಯಣಸ್ವಾಮಿ, ಕೆಂಪೇಗೌಡ, ಹಾಗೂ ಸುಜಯ್ ಹೆಗಡೆ ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು. ಮಂಜು ಚರಣ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಚಿತ್ರದ ಪ್ರತಿ ಹಾಡುಗಳು ವಿಶೇಷತೆ ಯಿಂದ ಕೂಡಿವೆ. ಸುರೇಶ್ ಬಾಬು ಅವರ ಛಾಯಾಗ್ರಹಣವಿರುವ ಈ ಚಿತ್ರ ಮುಂದಿನ ವಾರ ತೆರೆ ಮೇಲೆ ರಾರಾಜಿಸಲಿದೆ.

Facebook Comments