ಮಾಗಡಿ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪಕ್ಷ ಅದಲು-ಬದಲು

ಈ ಸುದ್ದಿಯನ್ನು ಶೇರ್ ಮಾಡಿ

Magadi--01

– ಶಿವಣ್ಣ

ನಾಡಪ್ರಭು ಕೆಂಪೇಗೌಡರ ಆಳ್ವಿಕೆಗೆ ಒಳಪಟ್ಟಿದ್ದ ಮಾಗಡಿ ವಿಧಾನಸಭಾ ಕ್ಷೇತ್ರ ಐತಿಹಾಸಿಕವಾಗಿ ಹೆಚ್ಚು ಮಹತ್ವ ಪಡೆದುಕೊಂಡಿದೆ. ಅದೇ ರೀತಿ ರಾಜಕೀಯ ವಾಗಿಯೂ ಕೂಡ ಮಾಗಡಿ ಹೆಸರಾಗಿದೆ. ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಭದ್ರ ಕೋಟೆಯಾಗಿರುವ ಈ ಕ್ಷೇತ್ರವನ್ನು ಅಲು ಗಾಡಿಸಲು ಜೆಡಿಎಸ್ ಸಿದ್ಧತೆ ನಡೆಸುತ್ತಿದೆ.  ಈ ಹಿನ್ನೆಲೆಯಲ್ಲಿ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಹೆಚ್ಚು ಕುತೂಹಲ ಕೆರಳಿಸಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ರಾಮನಗರ ಜಿಲ್ಲೆಯ ಮಾಗಡಿ ಕ್ಷೇತ್ರವೂ ಒಂದಾಗಿದೆ.  ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಕಳೆದ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದವರೇ ಆಗಿದ್ದರೂ ಪಕ್ಷಗಳು ಮಾತ್ರ ಬದಲಾಗಲಿವೆ.

ಯಾವುದೇ ಪ್ರಮುಖ ರಾಜಕೀಯ ಪಕ್ಷ ತನ್ನ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಣೆ ಮಾಡದಿದ್ದರೂ, ಸ್ಪರ್ಧಾಕಾಂಕ್ಷಿಗಳು ಈಗಾಗಲೇ ಚುನಾವಣಾ ತಯಾರಿಯನ್ನು ನಿರಂತರವಾಗಿ ಮಾಡತೊಡಗಿದ್ದಾರೆ. ಕ್ಷೇತ್ರದಲ್ಲಿ ಬಿರುಸಿನ ಪ್ರವಾಸ ಕೈಗೊಂಡು ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಅಲ್ಲದೆ, ಮತದಾರರನ್ನು ಆಕರ್ಷಿಸುವ ತಂತ್ರ, ಪ್ರತಿತಂತ್ರಗಳನ್ನು ಅನುಸರಿಸುತ್ತಿದ್ದಾರೆ.   ಮಾಗಡಿ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿರುವ ಬಾಲಕೃಷ್ಣ ಅವರು ಸತತ ಮೂರು ಬಾರಿ ಜೆಡಿಎಸ್‍ನಿಂದ ಸ್ಪರ್ಧಿಸಿ ಚುನಾಯಿತರಾಗಿದ್ದಾರೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಶಾಸಕರು ಜನ ಮನ್ನಣೆ ಗಳಿಸಿದ್ದಾರೆ. ಕ್ಷೇತ್ರದಾದ್ಯಂತ ನಿರಂತರ ಪ್ರವಾಸದಲ್ಲಿದ್ದು, ಜನರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸುವ ಅಪೇಕ್ಷೆಯನ್ನು ಹೊಂದಿದ್ದು, ಕ್ಷೇತ್ರದಲ್ಲಿ ಬಿರುಸಿನ ಚುನಾವಣಾ ಸಿದ್ಧತೆಯನ್ನು ಕೂಡ ನಡೆಸುತ್ತಿದ್ದಾರೆ.  2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿಲ್ಲಾ ಪಂಚಾಯ್ತಿ ಸದಸ್ಯ ಎ.ಮಂಜುನಾಥ್ ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ.  ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮಂಜು ಅವರಿಗೆ ಜೆಡಿಎಸ್ ಟಿಕೆಟ್ ನೀಡುವ ಖಾತ್ರಿ ನೀಡಿದ್ದು, ಮಂಜು ಪರ ವಾಗಿ ಕ್ಷೇತ್ರದಲ್ಲಿ ಪ್ರಚಾರವನ್ನೂ ಕೂಡ ಕೈಗೊಂಡಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿ ಯಾರೆಂಬುದು ಇನ್ನೂ ದೃಢ ಪಟ್ಟಿಲ್ಲ. ಪಕ್ಷಾಂತರಿಗಳಿಗಾಗಿ ಎದುರು ನೋಡುತ್ತಿದೆ. ಕಳೆದ ಬಾರಿ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಎಚ್.ಎಂ. ಕೃಷ್ಣಮೂರ್ತಿ ಅವರನ್ನು ಪಕ್ಷಕ್ಕೆ ಕರೆ ತರಲು ಬಿಜೆಪಿಯ ಮುಖಂಡರು ಮುಂದಾಗಿದ್ದಾರೆ.
ಅದೇ ರೀತಿ 2008ರ ಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿ ಯಾಗಿದ್ದ, ಪ್ರಸ್ತುತ ಕೆಎಂಎಫ್ ಅಧ್ಯಕ್ಷರಾಗಿರುವ ಪಿ.ನಾಗರಾಜ್ ಅವರನ್ನು ಕೂಡ ಬಿಜೆಪಿಗೆ ಕರೆತರಲು ಯತ್ನಿಸಲಾಗುತ್ತಿದೆ.

ಒಂದು ವೇಳೆ ನಾಗರಾಜ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದರೆ, ಮಾಗಡಿ ಕ್ಷೇತ್ರದಿಂದ ಕಣಕ್ಕಿಳಿಸುವ ಲೆಕ್ಕಾಚಾರ ಹಾಕಲಾಗಿದೆ. ಹೀಗಾಗಿ ಪಕ್ಷಾಂತರಿಗಳಿಗೆ ಮಣೆ ಹಾಕಲು ಬಿಜೆಪಿ ಮುಂದಾಗಿದೆ. ಅಂತಿಮ ಘಳಿಗೆಯಲ್ಲಿ ಬಿಜೆಪಿ ಯಾರನ್ನು ಕಣಕ್ಕಿಳಿಸುವುದೋ ಕಾದು ನೋಡಬೇಕಿದೆ.  ಒಟ್ಟಾರೆ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಮೂರು ರಾಜಕೀಯ ಪಕ್ಷಗಳು ಸ್ಪರ್ಧೆಗಿಳಿದರೂ ಅಭ್ಯರ್ಥಿ ಗಳು ಮಾತ್ರ ಬದಲಾಗುವುದಿಲ್ಲ. ಆದರೆ ಪಕ್ಷಗಳು ಮಾತ್ರ ಬದಲಾಗಲಿವೆ. ವಿಶೇಷವೆಂದರೆ ಮೂರು ಪಕ್ಷಗಳಲ್ಲೂ ಪಕ್ಷಾಂತರಿಗಳೇ ಅಭ್ಯರ್ಥಿಗಳಾಗಲಿದ್ದಾರೆ.

Facebook Comments

Sri Raghav

Admin