ಹುಷಾರ್…! ದ್ವಿತೀಯ ಪಿಯು ಪ್ರಶ್ನೆ ಪತ್ರಿಕೆ ಲೀಕ್ ಮಾಡಿದವರಿಗೆ, 5 ವರ್ಷ ಜೈಲು,5 ಲಕ್ಷ ದಂಡ

ಈ ಸುದ್ದಿಯನ್ನು ಶೇರ್ ಮಾಡಿ

Question-Papers

ಬೆಂಗಳೂರು, ಫೆ.10-ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದವರಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 5 ಲಕ್ಷ ದಂಡ ವಿಧಿಸುವುದಾಗಿ ಪದವಿಪೂರ್ವ ಶಿಕ್ಷಣ ಮಂಡಳಿ ಎಚ್ಚರಿಸಿದೆ.  ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಪದವಿಪೂರ್ವ ಶಿಕ್ಷಣ ಮಂಡಳಿಯು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಆರೋಪಿಗಳಿಗೆ ಐದು ವರ್ಷ ಜೈಲು ಶಿಕ್ಷೆ ಹಾಗೂ ಐದು ಲಕ್ಷ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಹೇಳಿದರು. ಡಿಡಿಪಿಐ, ಬಿಇಒ ಹಾಗೂ ಎಲ್ಲ ಪದವಿಪೂರ್ವ ಕಾಲೇಜುಗಳಲ್ಲಿ ಈ ಸುತ್ತೋಲೆಯನ್ನು ಕಡ್ಡಾಯವಾಗಿ ಪ್ರಕಟಿಸಬೇಕೆಂದು ಸೂಚನೆ ನೀಡಿರುವ ಮಂಡಳಿಯು, ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಜಾಗೃತಿ ಮೂಡಿಸುವಂತೆ ಸಲಹೆ ಮಾಡಿದೆ.

1983ರ ಕರ್ನಾಟಕ ಶಿಕ್ಷಣ ಕಾಯ್ದೆಗೆ ಕಳೆದ ಅಧಿವೇಶನದಲ್ಲಿ ತಿದ್ದುಪಡಿ ಮಾಡಲಾಗಿತ್ತು. ಪರೀಕ್ಷೆಯಲ್ಲಿ ಹೆಚ್ಚುತ್ತಿರುವ ನಕಲನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ಮಾಡಿ ತಪ್ಪಿತಸ್ಥ ಆರೋಪಿಗಳಿಗೆ ಐದು ವರ್ಷ ಜೈಲು ಶಿಕ್ಷೆ ಹಾಗೂ ಐದು ಲಕ್ಷ ದಂಡ ವಿಧಿಸಲು ಅವಕಾಶ ನೀಡಲಾಗಿತ್ತು. ವಿಧಾನಪರಿಷತ್ ಹಾಗೂ ವಿಧಾನಸಭೆಯಲ್ಲಿ ಈ ತಿದ್ದುಪಡಿಯನ್ನು ಬಹುಮತದಿಂದ ಅಂಗೀಕಾರ ಮಾಡಲಾಗಿತ್ತು. ಸಾಮಾಜಿಕ ಜಾಲತಾಣ, ಎಸ್‍ಎಂಎಸ್ ಮೊಬೈಲ್ ಸೇರಿದಂತೆ ಯಾವುದಾದರೂ ಮೂಲಕ ಪ್ರಶ್ನೆ ಪತ್ರಿಕೆ ಮೂಲಕ ಸೋರಿಕೆ ಮಾಡುವುದು ಶಿಕ್ಷಾರ್ಹ ಅಪರಾಧವಾಗುತ್ತದೆ.
ಕಳೆದ ವರ್ಷ 2016ರ ಚುನಾವಣೆಯಲ್ಲಿ ವಿಜ್ಞಾನ ವಿಭಾಗದ ಕೆಲ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿ ಸರ್ಕಾರ ಭಾರೀ ಮುಜುಗರಕ್ಕೆ ಸಿಲುಕಿತ್ತು. ಇಲಾಖೆಯಲ್ಲಿ ಕೆಲಸ ಮಾಡುವವರೇ ಮಧ್ಯವರ್ತಿಗಳ ಜೊತೆ ಶಾಮೀಲಾಗಿ ಪತ್ರಿಕೆಗಳನ್ನು ಸೋರಿಕೆ ಮಾಡಿದ್ದರು.  ಪ್ರತಿವರ್ಷ ಎಸ್ಸೆಸ್ಸೆಲ್ಸಿ , ಪಿಯುಸಿ ಹಾಗೂ ಪದವಿ ಸೇರಿದಂತೆ ಮತ್ತಿತರ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುವುದು ಮಾಮೂಲಿ ಎಂಬಂತಾಗಿತ್ತು. ಇದಕ್ಕೆ ಅಂಕುಶ ಹಾಕಲೆಂದೇ ರಾಜ್ಯ ಸರ್ಕಾರ ಹಾಲಿ ಇರುವ ಕಾನೂನಿಗೆ ತಿದ್ದುಪಡಿ ಮಾಡಿ ಸೋರಿಕೆ ವೀರರಿಗೆ ಶ್ರೀಕೃಷ್ಣನ ಜನ್ಮಸ್ಥಳ ದರ್ಶನ ಮಾಡಿಸಲು ಮುಂದಾಗಿದೆ.

ಸಿಸಿ ಕ್ಯಾಮೆರಾ ಅಳವಡಿಕೆ:
ಇನ್ನು ಪರೀಕ್ಷೆ ನಡೆಯುವ ರಾಜ್ಯದ ಪ್ರತಿಯೊಂದು ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಲು ಸೂಚಿಸಲಾಗಿದೆ. ಈಗಾಗಲೇ ಕೆಲವು ಕಡೆ ಅಳವಡಿಕೆಯಾಗಿದ್ದು , ಬಾಕಿ ಇರುವ ಕೇಂದ್ರಗಳಿಗೆ ಶೀಘ್ರದಲ್ಲಿ ಅಳವಡಿಸಲು ಇಲಾಖೆ ಮುಂದಾಗಿದೆ.  ಖಾಸಗಿ ಕಂಪನಿಯೊಂದು ಎಲ್ಲಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಮುಂದೆ ಬಂದಿದೆ. ಈಗಾಗಲೇ ಶೇ.50ರಷ್ಟು ಕಾರ್ಯ ಮುಗಿದಿದ್ದು , ತಿಂಗಳಾಂತ್ಯಕ್ಕೆ ಬಹುತೇಕ ಎಲ್ಲ ಕಡೆ ಅಳವಡಿಕೆಯಾಗಲಿದೆ.
ಪ್ರಶ್ನೆ ಪತ್ರಿಕೆಗಳನ್ನು ಜಿಲ್ಲಾ ಖಜಾನೆಯಿಂದಲೇ ತೆಗೆದುಕೊಂಡು ಹೋಗಬೇಕು. ಪ್ರಶ್ನೆಪತ್ರಿಕೆ ಇರುವ ಕಚೇರಿಗಳಿಗೆ ರಹಸ್ಯ ಸಂಕೇತವನ್ನು ನೀಡಲಾಗುತ್ತದೆ. ಡಿಡಿಪಿಐ ಸಮ್ಮುಖದಲ್ಲೇ ಪ್ರಶ್ನೆ ಪತ್ರಿಕೆಗಳನ್ನು ಆಯಾ ಕೇಂದ್ರಗಳಿಗೆ ವಿತರಣೆ ಮಾಡಲಾಗುತ್ತದೆ.  ಈವರೆಗೂ ಸರ್ಕಾರ ಚಾಪೆ ಕೆಳಗೆ ತೂರಿದರೆ ಮಧ್ಯವರ್ತಿಗಳು ರಂಗೋಲಿ ಕೆಳಗೆ ತೂರುತ್ತಿದ್ದರು. ಇದಕ್ಕೆ ಶಾಶ್ವತ ಕಡಿವಾಣ ಹಾಕಲು ಮುಂದಾಗಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.

Facebook Comments

Sri Raghav

Admin