ಶಬ್ಧ-ವಾಯುಮಾಲಿನ್ಯ ನಿಯಂತ್ರಣಕ್ಕೆ 300 ಕೋಟಿ ರೂ. ವೆಚ್ಚದಲ್ಲಿ ಕಂಟ್ರೋಲ್ ಅಂಡ್ ಕಮಾಂಡ್ ಸ್ಥಾಪನೆ

ಈ ಸುದ್ದಿಯನ್ನು ಶೇರ್ ಮಾಡಿ

Mayor--01

ಬೆಂಗಳೂರು, ಫೆ.11-ನಗರದಲ್ಲಿ ಹೆಚ್ಚಿರುವ ಶಬ್ಧ ಹಾಗೂ ವಾಯು ಮಾಲಿನ್ಯ ನಿಯಂತ್ರಣ ದೃಷ್ಟಿಯಿಂದ 300 ಕೋಟಿ ರೂ. ವೆಚ್ಚದಲ್ಲಿ ಕಂಟ್ರೋಲ್ ಅಂಡ್ ಕಮಾಂಡ್ ಕೇಂದ್ರವನ್ನು ಸ್ಥಾಪನೆ ಮಾಡಲಿದ್ದೇವೆ ಎಂದು ಮೇಯರ್ ಸಂಪತ್‍ರಾಜ್ ಇಂದಿಲ್ಲಿ ತಿಳಿಸಿದರು. ವಿಧಾನಸೌಧ ಮುಂಭಾಗ ದೇಶದಲ್ಲೇ ಮೊದಲ ಬಾರಿಗೆ ಆಚರಿಸಲಾದ ವಿರಳ ಸಂಚಾರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರು ನಗರವನ್ನು ಸುರಕ್ಷಿತಗೊಳಿಸುವ ಉದ್ದೇಶದಿಂದ ನಗರದ 20 ಕಡೆಗಳಲ್ಲಿ ಮಾಲಿನ್ಯ ಪತ್ತೆ ಉಪಕರಣ ಅಳವಡಿಸಲಾಗುವುದು. ಇದನ್ನು ಮುಂದಿನ ಬಜೆಟ್‍ನಲ್ಲಿ ಘೋಷಿಸಲಾಗುವುದು ಎಂದು ಮಾಹಿತಿ ನೀಡಿದರು.

ಎಲ್ಲೆಲ್ಲಿ ಮಾಲಿನ್ಯ ಹೆಚ್ಚಾಗಿದೆ ಎಂಬ ಬಗ್ಗೆ ಗಮನ ಹರಿಸಲಾಗುವುದು. ಮಾಲಿನ್ಯ ಹೆಚ್ಚಿರುವ ಕಡೆಗಳಲ್ಲಿ ಅದನ್ನು ನಿಯಂತ್ರಿಸಲು ಕ್ರಮ ವಹಿಸಲಾಗುವುದು ಎಂದರು. ಮಾಲಿನ್ಯ ನಿಯಂತ್ರಣ ಸಂಬಂಧ ಇನ್ನಿತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಅದರಲ್ಲಿ ಪ್ರಮುಖವಾಗಿ ಸೈಕಲ್ ಚಾಲನೆಗೆ ಆದ್ಯತೆ ನೀಡಲಾಗಿದೆ. ಜಿಪಿಎಸ್ ಕ್ಯಾಮೆರಾ ಅಳವಡಿಕೆ ಹಾಗೂ ಐಡಿ ಕಾರ್ಡ್ ಪಡೆದು ಸೈಕಲ್ ಚಾಲನೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಈ ವ್ಯವಸ್ಥೆಯಿಂದ ಮಾಲಿನ್ಯ ನಿಯಂತ್ರಣಕ್ಕೆ ಒತ್ತು ನೀಡಿದಂತಾಗುತ್ತದೆ. ಇದರೊಂದಿಗೆ 200 ಎಲೆಕ್ಟ್ರಿಕ್ ಕಾರು ಹಾಗೂ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಖರೀದಿ ಮಾಡಿ ಮೆಟ್ರೋ ಸ್ಟೇಷನ್‍ಗಳಿಗೆ ಬರುವವರಿಗೆ ಇದರ ಸೌಲಭ್ಯ ಕಲ್ಪಿಸುವ ಚಿಂತನೆ ಇದೆ. ಇಂತಹ ಕೆಲಸಗಳಿಗೆ ಬೆಂಗಳೂರಿನ ಜನ ಸಹಕಾರ ನೀಡಬೇಕು ಎಂದು ತಿಳಿಸಿದರು.

ಬಿಎಂಟಿಸಿ ಉಪಾಧ್ಯಕ್ಷ ನಾಗರಾಜ್ ಯಾದವ್ ಮಾತನಾಡಿ, ದೇಶದಲ್ಲೇ ಮೊದಲ ಬಾರಿಗೆ ವಿರಳ ಸಂಚಾರ ದಿನವನ್ನು ಆಚರಿಸಲಾಗುತ್ತಿದ್ದು, ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಚಾರ ಆರಂಭಿಸುವ ಮೂಲಕ ಮತ್ತೆ ಬೆಂಗಳೂರನ್ನು ಗಾರ್ಡನ್ ಸಿಟಿಯನ್ನಾಗಿಸುವ ಉದ್ದೇಶ ಹೊಂದಲಾಗಿದೆ ಎಂದು ಅಭಿಪ್ರಾಯಪಟ್ಟರು. ನಗರದಲ್ಲಿ ಒಟ್ಟು 6500 ಬಿಎಂಟಿಸಿ ಬಸ್‍ಗಳಿವೆ. ಅದನ್ನು ಹೆಚ್ಚಿಸುವ ಮೂಲಕ ನಾಗರಿಕರಿಗೆ ಸಾರ್ವಜನಿಕ ವಾಹನ ಬಳಕೆಗೆ ಹೆಚ್ಚಿನ ಅವಕಾಶ ನೀಡಲಾಗುವುದು. ಪ್ರತಿ ಮೆಟ್ರೋ ಸ್ಟೇಷನ್‍ನಲ್ಲಿ ಬಿಬಿಎಂಪಿ, ಬಿಎಂಟಿಸಿ ಜೊತೆಗೂಡಿ ಏಕೀಕೃತ ಸಾರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ಇದರಿಂದ ಅಪಘಾತ ನಿಯಂತ್ರಣದೊಂದಿಗೆ ವಾಯು, ಶಬ್ಧ ಮಾಲಿನ್ಯವನ್ನು ತಡೆಗಟ್ಟಲು ಸಾಧ್ಯವಿದೆ. ಪ್ರಸ್ತುತ 52 ಲಕ್ಷ ಮಂದಿ ಸಮೂಹ ಸಾರಿಗೆಯನ್ನು ಅವಲಂಬಿಸಿದ್ದಾರೆ. ಅದನ್ನು 80 ಲಕ್ಷ ಮಂದಿ ಬಳಸುವಂತಾಗಬೇಕು ಎಂದು ಹೇಳಿದರು.

ವಿಧಾನಸೌಧದ ಮುಂಭಾಗ ನಗರದ ಮಾಲಿನ್ಯ ನಿಯಂತ್ರಣಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಮಾಲಿನ್ಯ ನಿಯಂತ್ರಣಾ ಮಂಡಳಿ, ಸಾರಿಗೆ ಇಲಾಖೆ ಸೇರಿದಂತೆ ಇನ್ನಿತರ ಸಂಸ್ಥೆಗಳ ಸಹಯೋಗದಲ್ಲಿ ವಿರಳ ಸಂಚಾರ ದಿನಾಚರಣೆಯನ್ನು ಇದೇ ಮೊದಲ ಬಾರಿಗೆ ಆಚರಿಸಲಾಯಿತು.
ವಿರಳ ಸಂಚಾರ ದಿನಾಚರಣೆ ಅಂಗವಾಗಿ ಸೈಕಲ್, ಎಲೆಕ್ಟ್ರಿಕ್ ಆಟೋ, ಕಾರು ಸಂಚಾರಕ್ಕೆ ಚಾಲನೆ ನೀಡಲಾಯಿತು. ಸಾರ್ವಜನಿಕ ವಾಹನ ಬಳಸಿ ಸಂಚಾರ ದಟ್ಟಣೆ, ಮಾಲಿನ್ಯ ನಿಯಂತ್ರಿಸಿ, ಬೆಂಗಳೂರನ್ನು ರಕ್ಷಿಸಿ ಎಂಬ ಘೋಷವಾಕ್ಯದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.  ಕಾರ್ಯಕ್ರಮದಲ್ಲಿ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಬಿ.ದಯಾನಂದ್, ನಟಿ ರೂಪಿಕಾ, ನಟ ಅನೂಪ್‍ರೇವಣ್ಣ ಮತ್ತಿತರರು ಪಾಲ್ಗೊಂಡಿದ್ದರು.

Facebook Comments

Sri Raghav

Admin