ಹೈದರಾಬಾದ್ ಕರ್ನಾಟಕದಲ್ಲಿ ರಾಹುಲ್ ಗೆ ಜೈ ಹೋ..

ಈ ಸುದ್ದಿಯನ್ನು ಶೇರ್ ಮಾಡಿ

Rahul-GAndhi--01ಕೊಪ್ಪಳ, ಫೆ.11- ರಾಜ್ಯಕ್ಕೆ ಭೇಟಿ ನೀಡಿರುವ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಇಂದು ರಾಯಚೂರು, ಕೊಪ್ಪಳ, ಕುಷ್ಟಗಿ, ಸಿಂಧನೂರು ಮುಂತಾದೆಡೆ ರೋಡ್ ಶೋ ನಡೆಸುವ ಮೂಲಕ ಮಿಂಚಿನ ಸಂಚಲನ ಮೂಡಿಸಿದರು. ಜನಾಶೀರ್ವಾದ ಯಾತ್ರೆ ಅಂಗವಾಗಿ ಎರಡನೆ ದಿನವಾದ ಇಂದು ವಿಶೇಷ ಬಸ್‍ನಲ್ಲಿ ರಾಹುಲ್‍ಗಾಂಧಿಯವರು ನಡೆಸಿದ ರೋಡ್ ಶೋಗೆ ಹೈದರಾಬಾದ್ ಕರ್ನಾಟಕದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕುಕನೂರಿನಲ್ಲಿ ವಾಸ್ತವ್ಯ ಹೂಡಿದ್ದ ಅವರು ಇಂದು ಕುಷ್ಟಗಿಗೆ ಆಗಮಿಸಿದಾಗ ಅದ್ಧೂರಿ ಸ್ವಾಗತ ನೀಡಲಾಯಿತು. ಕಾಂಗ್ರೆಸ್‍ನ ಫ್ಲಕ್ಸ್, ಬಂಟಿಂಗ್ಸ್, ಬ್ಯಾನರ್‍ಗಳು ರಸ್ತೆಯುದ್ದಕ್ಕೂ ರಾರಾಜಿಸುತ್ತಿದ್ದವು. ಮಹಿಳೆಯರು, ಯುವಕರು ಸಾಲಾಗಿ ನಿಂತು ಭವಿಷ್ಯದ ಭರವಸೆಯ ನಾಯಕನನ್ನು ಬರಮಾಡಿಕೊಂಡರು.

ಅವರು ಹೋದೆಡೆಯಲ್ಲೆಲ್ಲ ಭಾರೀ ಜನಸ್ತೋಮ ಸೇರಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಜನ ಸಾಲು ಸಾಲಾಗಿ ನಿಂತು ರಾಹುಲ್‍ಗಾಂಧಿಯವರತ್ತ ಕೈ ಬೀಸಿ ಅಭಿನಂದನೆ ಸಲ್ಲಿಸಿದರು. ಕುಕನೂರಿನ ಗೆಸ್ಟ್‍ಹೌಸ್‍ನಿಂದ ಹೊರಟ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಬೆರೆತು ಮಾತನಾಡಿದರು. ಅಲ್ಲಿಯೇ ಇದ್ದ ಪುಟ್ಟ ಮಗುವನ್ನು ಎತ್ತಿ ರಾಹುಲ್ ಮುದ್ದಾಡಿದರು. ಇದಕ್ಕೂ ಮುನ್ನ ಯಲಬುರ್ಗದಲ್ಲಿ ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.  ಚಂಡಿ ಕ್ರಾಸ್‍ನಿಂದ ಕುಷ್ಟಗಿ, ಕನಕಗಿರಿ, ಗಂಗಾವತಿ, ಕಾರಟಗಿ ಮುಂತಾದ ಕಡೆ ರಾಹುಲ್ ತಂಡ ರೋಡ್ ಶೋ ನಡೆಸಿ ರೈತರು, ಶ್ರಮಿಕರು, ಹಿಂದುಳಿದ ವರ್ಗದವರು, ವಿದ್ಯಾರ್ಥಿಗಳು, ಯುವಕರು ಎಲ್ಲರ ಸಮಸ್ಯೆಗಳನ್ನು ಆಲಿಸಿದರು.

 

ರೋಡ್ ಶೋ ಸಂದರ್ಭದಲ್ಲಿ ಆಯ್ದ ಸ್ಥಳಗಳಲ್ಲಿ ಕೆಲವರನ್ನು ಭೇಟಿ ಮಾಡಿ ಮಾತನಾಡಿದರು. ಹಲವು ವಿದ್ಯಾರ್ಥಿಗಳು, ರೈತರೊಂದಿಗೆ ಕೆಲಕಾಲ ಸಂವಾದವನ್ನೂ ನಡೆಸಿದರು. ಯಲಬುರ್ಗಿ, ಕುಕನೂರು ಮಾರ್ಗಮಧ್ಯೆ ಇರುವ ಉಗ್ರ ನರಸಿಂಹ ದೇವಸ್ಥಾನ ಹಾಗೂ ಗಂಗಾವತಿ ಸಮೀಪದ ಕನಕಚಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.  ಕೊಪ್ಪಳ, ರಾಯಚೂರು, ಹೈದರಾಬಾದ್ ಕರ್ನಾಟಕ ಬಹುತೇಕ ಕಾಂಗ್ರೆಸ್‍ನ ಭದ್ರಕೋಟೆ. ಹಾಗಾಗಿ ಸಹಜವಾಗಿ ಇಲ್ಲಿ ಭಾರೀ ಸಂಖ್ಯೆಯಲ್ಲಿ ಜನ ರಾಹುಲ್ ರೋಡ್ ಶೋಗೆ ನೆರೆದಿದ್ದರು.

ಜನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಕರ್ನಾಟಕ ಕಾಂಗ್ರೆಸ್ ಸರ್ಕಾರ ಉತ್ತಮ ಕೆಲಸ ಮಾಡಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಿದೆ. ರೈತರ ಸಾಲ ಮನ್ನಾ ಮಾಡುವ ಮೂಲಕ ರೈತರ ನೆರವಿಗೆ ದಾವಿಸಿದೆ. ದಲಿತರು, ಹಿಂದುಳಿದವರ ಅಭಿವೃದ್ಧಿಗೆ ಹತ್ತು-ಹಲವು ಕಾರ್ಯಕ್ರಮಗಳನ್ನು ರೂಪಿಸಿ ದೇಶಕ್ಕೆ ಮಾದರಿಯಾದ ಸರ್ಕಾರವಾಗಿದೆ. ನಮ್ಮ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಜನರು ಆಶೀರ್ವಾದ ಮಾಡಬೇಕು. ಈ ಮೂಲಕ ದೇಶದಲ್ಲಿ ಬದಲಾವಣೆ ತರಲು ಸಹಕರಿಸಬೇಕೆಂದು ಮನವಿ ಮಾಡಿದರು. ಗುಜರಾತ್‍ನಲ್ಲೂ ಇದೇ ರೀತಿ ರಾಹುಲ್ ಬಸ್ ಮೂಲಕ ರೋಡ್ ಶೋ ನಡೆಸಿ ಜನಮನ್ನಣೆ ಗಳಿಸಿ ಕಾಂಗ್ರೆಸ್ ಬಲ ವೃದ್ಧಿಗೊಳ್ಳಲು ಕಾರಣವಾಗಿದ್ದರು. ಅದೇ ತಂತ್ರವನ್ನು ಕರ್ನಾಟಕದಲ್ಲೂ ಅನುಸರಿಸಿ ವಿಶೇಷ ಬಸ್ ಮೂಲಕ ರೋಡ್ ಶೋ ನಡೆಸುತ್ತಿರುವ ರೋಡ್ ಶೋಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಪಕ್ಷದ ಉಸ್ತುವಾರಿ ವೇಣುಗೋಪಾಲ್, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವ ಬಸವರಾಜ ರಾಯರೆಡ್ಡಿ, ಶಿವರಾಜ್ ತಂಗಡಗಿ, ಯುವ ಕಾಂಗ್ರೆಸ್ ಮುಖಂಡರು, ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು ಸೇರಿದಂತೆ ಹಲವರು ರೋಡ್ ಶೋನಲ್ಲಿ ಪಾಲ್ಗೊಂಡಿದ್ದರು.

Facebook Comments

Sri Raghav

Admin