‘ನನ್ನತ್ರ ದುಡ್ಡಿದ್ದಿದ್ರೆ ರವಿ ಪೂಜಾರಿಗೆ ಕೊಡ್ತಿದ್ದೆ, ಇಲ್ದಿದ್ದಕ್ಕೆ ಪೊಲೀಸರಿಗೆ ದೂರು ಕೊಟ್ಟೆ’
ತುಮಕೂರು,ಫೆ.12-ನನ್ನತ್ರ ಹಣ ಇದ್ದಿದ್ರೆ ಭೂಗತ ಪಾತಕಿ ರವಿ ಪೂಜಾರಿ ಬಳಿ ಹೋಗಿ ಅವರಿಗೆ ಹಣ ನೀಡುತ್ತಿದೆ. ಆದರೆ ನನ್ನ ಬಳಿ ಹಣ ಇಲ್ಲ. ಹಾಗಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಸದ್ಯದಲ್ಲೇ ಸತ್ಯಾಸತ್ಯತೆ ಬಹಿರಂಗಗೊಳ್ಳಲಿದೆ ಎಂದು ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಾವುದೇ ಅಕ್ರಮ ವ್ಯವಹಾರ ಚಟುವಟಿಕೆಗಳಲ್ಲಿ ತೊಡಗಿಕೊಂಡಿಲ್ಲ. ದೊಡ್ಡ ದೊಡ್ಡ ಬಿಲ್ಡರ್ ಆಗಿ ರಿಯಲ್ ಎಸ್ಟೇಟ್ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರೆ ಅವರು ಕೇಳಿದ ತಕ್ಷಣವೇ 10 ಕೋಟಿ ಕೊಡಬಹುದಾಗಿತ್ತು ಎಂದು ಹೇಳಿದರು. ಎರಡು ಬಾರಿ ಚುನಾವಣೆಯಲ್ಲಿ ಸೋತಿದ್ದೇನೆ. ಮೂರು ಬಾರಿ ಶಾಸಕನಾಗಿದ್ದೇನೆ. ನನ್ನ ಕ್ಷೇತ್ರದ ಜನರಿಗೆ ಪ್ರಾಮಾಣಿಕವಾಗಿ ಸೇವೆ ಮಾಡುತ್ತಿದ್ದೇನೆ. ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದೇನೆ. ಅಷ್ಟಕ್ಕೆ ನನ್ನ ಬಳಿ ಹಣವಿದೆ ಎಂದು ತಪ್ಪು ಕಲ್ಪನೆ ಮೂಡಿದೆ ಎಂದರು.
ನನಗೆ ರವಿ ಪೂಜಾರಿಯಿಂದ ಕರೆ ಬಂದ ಕೂಡಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಈಗಾಗಲೇ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಈ ಬಾರಿಯೂ ಅತಿ ಹೆಚ್ಚು ಮತಗಳಿಂದ ಚಿಕ್ಕನಾಯಕನಹಳ್ಳಿಯಲ್ಲಿ ಗೆಲ್ಲುತ್ತೇನೆ. ಇದಕ್ಕೆ ಕ್ಷೇತ್ರದ ಜನ ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ನಾನು ಸಾಕಷ್ಟು ಬಾರಿ ಗಾರ್ಮೆಂಟ್ಸ್ ತೆಗೆಯಲು ಪ್ರಯತ್ನಪಟ್ಟಿದ್ದೇನೆ. ಕೆಲವು ಉದ್ಯಮಿಗಳು ಗಾರ್ಮೆಂಟ್ಸ್ ತೆಗೆಯಲು ಪ್ರೋತ್ಸಾಹ ತೋರದ ಹಿನ್ನೆಲೆಯಲ್ಲಿ ಗೊಂದಲವಾಗಿದೆ. ಸದ್ಯದಲ್ಲಿಯೇ ಗಾರ್ಮೆಂಟ್ಸ್ ತೆರೆಯಲಾಗುವುದು ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ತುಮಕೂರು ನಗರದಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಗೋವಿಂದರಾಜ ಮತ್ತು ನರಸೇಗೌಡರ ಜೊತೆ ಈ ಬಗ್ಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುತ್ತೇವೆ. ಇದೇ 14ರಂದು ಚಿಕ್ಕನಾಯಕನಹಳ್ಳಿಯ ಹೈಸ್ಕೂಲ್ ಮೈದಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಸಾಮೂಹಿಕ ಮಡಿಲು ತುಂಬುವ ಕಾರ್ಯಕ್ರಮ , ಪ್ರಸೂತಿ ತಜ್ಞರದಿಂದ ತಪಾಸಣೆ, ಉಚಿತ ಚಿಕಿತ್ಸಾ ಶಿಬಿರ, 1008 ದಂಪತಿಗಳಿಂದ ಸತ್ಯನಾರಾಯಣಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯರಾದ ಕಾಂತರಾಜ್, ಜೆಡಿಎಸ್ ವಕ್ತಾರ ಮಧು ಸೇರಿದಂತೆ ಮತ್ತಿತರರು ಇದ್ದರು.