ಸದಾಶಿವ ಆಯೋಗ ವರದಿ ಕುರಿತು ದಲಿತ ಮುಖಂಡರೊಂದಿಗೆ ರಾಹುಲ್ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

Rahul--011

ರಾಯಚೂರು, ಫೆ.12-ಸದಾಶಿವ ಆಯೋಗ ವರದಿ ಸಂಬಂಧ ನಿನ್ನೆ ರೋಡ್‍ಶೋ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರು ಇಲ್ಲಿನ ಸರ್ಕಾರಿ ಅತಿಥಿ ಗೃಹದಲ್ಲಿ ಇಂದು ಬೆಳಗ್ಗೆ ದಲಿತ ನಾಯಕರೊಂದಿಗೆ ಮಾತುಕತೆ ನಡೆಸಿದರು. ಮಾದಿಗ ದಂಡೋರ ಸಮಿತಿ ಮುಖಂಡರು ಹಾಗೂ ವಿವಿಧ ದಲಿತ ಪರ ಸಂಘಟನೆಗಳ ನಾಯಕರೊಂದಿಗೆ ಇಂದು ಬೆಳಗ್ಗೆ ಸರ್ಕಾರಿ ಅತಿಥಿ ಗೃಹದಲ್ಲಿ ಮಹತ್ವದ ಚರ್ಚೆ ನಡೆಸಿದ ಅವರು, ಸದಾಶಿವ ಆಯೋಗ ವರದಿ ಕುರಿತು ಲೋಕಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದ್ದಾರೆ.

ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಕೆ.ಎಚ್.ಮುನಿಯಪ್ಪ ಸೇರಿದಂತೆ ಹಲವು ಮುಖಂಡರೊಂದಿಗೆ ಸಭೆ ನಡೆಸಿದ ರಾಹುಲ್‍ಗಾಂಧಿಯವರು ದಲಿತ ನಾಯಕರ ಬೇಡಿಕೆಗಳನ್ನು ಸಮಚಿತ್ತವಾಗಿ ಆಲಿಸಿದರು. ಈ ಸಂಬಂಧ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸುವ ಭರವಸೆಯನ್ನು ನೀಡಿದರು. ನಿನ್ನೆ ಕೊಪ್ಪಳ, ಕುಷ್ಟಗಿ ಮುಂತಾದೆಡೆ ರಾಹುಲ್ ನಡೆಸಿದ ರೋಡ್‍ಶೋ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಿರೀಕ್ಷೆಗೂ ಮೀರಿ ಜನ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ರಾಹುಲ್‍ಗಾಂಧಿಯವರು ಕಾರ್ಯಕ್ರಮದ ನಡುವೆ ದೇವಾಲಯ, ಮಠ, ಮಂದಿರಗಳಿಗೂ ಕೂಡ ಭೇಟಿ ನೀಡಿದರು. ಈ ನಡುವೆ ಸದಾಶಿವ ಆಯೋಗ ವರದಿ ಸಂಬಂಧ ಹಲವು ದಲಿತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ರಾಹುಲ್‍ಗಾಂಧಿಯವರು ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡುವ ಸಂದರ್ಭದಲ್ಲೇ ಹಲವರು ಪ್ರತಿಭಟನೆ ಮಾಡಿದ್ದರು. ಇಂದು ರಾಹುಲ್ ಅವರು ದಲಿತ ಮುಖಂಡರು ಹಾಗೂ ಕಾಂಗ್ರೆಸ್ ನಾಯಕರೊಂದಿಗೆ ಚರ್ಚಿಸಿ ಈ ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದ್ದಾರೆ.

Facebook Comments

Sri Raghav

Admin