ಅಲ್ಪಸಂಖ್ಯಾತರ ಓಲೈಕೆಗಾಗಿ ಮುಸ್ಲಿಂ ಮುಖಂಡರ ಮನೆಗಳ ಕಡೆಗೆ ರಾಹುಲ್ ನಡಿಗೆ

ಈ ಸುದ್ದಿಯನ್ನು ಶೇರ್ ಮಾಡಿ

rahul-gandhi-1
ಕಲಬುರಗಿ, ಫೆ.13- ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ಅಲ್ಪ ಸಂಖ್ಯಾತರ ಮತಗಳು ಚದುರಿ ಹೋಗದಂತೆ ಎಚ್ಚರ ವಹಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಆ ಭಾಗದ ಅಲ್ಪ ಸಂಖ್ಯಾತ ಮುಖಂಡರೊಂದಿಗೆ ಮಹತ್ವದ ಚರ್ಚೆ ನಡೆಸಿದರು.  ಕಲಬುರಗಿಯಲ್ಲಿ ಮಾಜಿ ಸಚಿವ ದಿ.ಖಮ ರುಲ್ಲಾ ಇಸ್ಲಾಂ ಹಾಗೂ ಮಾಜಿ ಮುಖ್ಯಮಂತ್ರಿ ದಿ.ಧರಂಸಿಂಗ್ ಅವರ ನಿವಾಸಕ್ಕೆ ತೆರಳಿ ಸಾಂತ್ವನ ಹೇಳಿ ಕೆಲಕಾಲ ಮಾತುಕತೆ ನಡೆಸಿದರು.
ಧರಂಸಿಂಗ್ ಅವರ ನಿವಾಸಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರ ಪುತ್ರ ಅಜಯ್‍ಸಿಂಗ್ ರಾಹುಲ್ ಅವರನ್ನು ಸ್ವಾಗತಿಸಿದರು. ಧರಂಸಿಂಗ್ ಅವರ ಪತ್ನಿ ಪ್ರಭಾವತಿ ಅವರೊಂದಿಗೆ ಕುಶಲೋಪರಿ ವಿಚಾರಿಸಿದರು.

ನಂತರ ಖಮರುಲ್ಲಾ ಅವರ ನಿವಾಸಕ್ಕೆ ತೆರಳಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮುಖಂಡರೊಂದಿಗೆ ಚರ್ಚೆ ನಡೆಸಿದರು.  ರಾಜ್ಯ ರಾಜಕಾರಣದಲ್ಲಿ ಖಮರುಲ್ಲಾ ಇಸ್ಲಾಂ ಅವರು ಈ ಭಾಗದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರ ಪ್ರಭಾವದ ಬಗ್ಗೆ ನಮಗೆ ಅರಿವಿದೆ. ಅದನ್ನು ನಾವು ಬಳಸಿಕೊಳ್ಳುತ್ತೇವೆ ಎಂಬ ಭರವಸೆ ನೀಡಿದರಲ್ಲದೆ ಮುಂಬರುವ ಚುನಾವಣೆಯಲ್ಲಿ ಅವರ ಕುಟುಂಬದವರಿಗೆ ಟಿಕೆಟ್ ನೀಡುವ ವಿಶ್ವಾಸ ವ್ಯಕ್ತಪಡಿಸಿದರು.

ಖಮರುಲ್ಲಾ ಇಸ್ಲಾಂ ಹೈದರಾಬಾದ್ ಕರ್ನಾಟಕ ಭಾಗದ ಪ್ರಭಾವಿ ನಾಯಕ. ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ಅವರನ್ನು ಕೈ ಬಿಡಲಾಗಿತ್ತು. ಆ ಸಂದರ್ಭ ಈ ಭಾಗದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಖಮರುಲ್ಲಾ ಇಸ್ಲಾಂ ಅವರು ಬೇಸತ್ತು ಕಾಂಗ್ರೆಸ್ ತೊರೆಯುವ ಚಿಂತನೆ ಕೂಡ ನಡೆಸಿದ್ದರು. ಒವೈಸಿ ಪಕ್ಷ ಅಥವಾ ಶರದ್‍ಪವಾರ್ ನೇತೃತ್ವದ ಎನ್‍ಸಿಪಿ, ಸಮಾಜವಾದಿ ಪಕ್ಷದತ್ತ ತೆರಳುವ ಯೋಚನೆ ಮಾಡಿದ್ದರು.  ಈ ಹಿನ್ನೆಲೆಯಲ್ಲಿ ರಾಹುಲ್‍ಗಾಂಧಿ ಅವರು ಅವರ ನಿವಾಸಕ್ಕೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದರಲ್ಲದೆ ಈ ಭಾಗದ ಹಲವು ಅಲ್ಪ ಸಂಖ್ಯಾತ ಮುಖಂಡರೊಂದಿಗೆ ಚರ್ಚಿಸಿ ಭವಿಷ್ಯದಲ್ಲಿ ಅಲ್ಪ ಸಂಖ್ಯಾತರಿಗೆ ಆದ್ಯತೆ ನೀಡುವ ಭರವಸೆ ನೀಡಿದ್ದಾರೆ.

ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮುಸ್ಲಿಂ ಮತಗಳು ನಿರ್ಣಾಯಕವಾಗಿವೆ. ಒವೈಸಿ ಪಕ್ಷ ಇಲ್ಲಿ ನೆಲೆಯೂರುವ ಕಸರತ್ತು ನಡೆಸುತ್ತಿದೆ. ಜೆಡಿಎಸ್ ಪಕ್ಷ ಕೂಡ ತನ್ನ ಪ್ರಯತ್ನ ಮುಂದುವರಿಸಿದೆ. ಮುಂಬರುವ ಚುನಾವಣೆಯಲ್ಲಿ ಅಲ್ಪ ಸಂಖ್ಯಾತ ಮತಗಳು ಚದುರದಂತೆ ಎಚ್ಚರ ವಹಿಸಿದರೆ ಕಾಂಗ್ರೆಸ್‍ಗೆ ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಜನಾಶೀ ರ್ವಾದ ಯಾತ್ರೆ ಸಂದರ್ಭದಲ್ಲಿ ರಾಹುಲ್ ಅವರು ದಿ.ಖಮರುಲ್ಲಾ ಇಸ್ಲಾಂ ಅವರ ನಿವಾಸಕ್ಕೆ ಭೇಟಿ ನೀಡಿರುವುದು ವಿಶೇಷವಾಗಿದೆ. ಜನಾಶೀರ್ವಾದ ಯಾತ್ರೆಯ ನಾಲ್ಕನೆ ದಿನವಾದ ಇಂದು ಕಲಬುರಗಿಯ ಎಚ್‍ಕೆ ಸೊಸೈಟಿಯ ಆಡಿಟೋರಿಯಂನಲ್ಲಿ ವಾಣಿಜ್ಯೋ ದ್ಯಮಿಗಳೊಂದಿಗೆ ಏರ್ಪಡಿಸಿದ್ದ ಸಂವಾದದಲ್ಲಿ ಪಾಲ್ಗೊಂಡ ನಂತರ ಅವರು ಖಮರುಲ್ಲಾ ಇಸ್ಲಾಂ ನಿವಾಸಕ್ಕೆ ತೆರಳಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾ ಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಡಿ.ಕೆ.ಶಿವಕುಮಾರ್, ಶರಣ ಪ್ರಕಾಶ್ ಪಾಟೀಲ್, ಶಾಸಕ ಅಜಯ್‍ಸಿಂಗ್, ಕಾರ್ಯಾಧ್ಯಕ್ಷರಾದ ಎಸ್.ಆರ್.ಪಾಟೀಲ್, ದಿನೇಶ್ ಗುಂಡೂರಾವ್ ಜತೆಯಲ್ಲಿದ್ದರು.

Facebook Comments

Sri Raghav

Admin