ಐಟಿಐ ವಿದ್ಯಾರ್ಥಿಗಳಿಗೆ ಸಿದ್ದು ಸರ್ಕಾರದದಿಂದ ‘ಶುಲ್ಕ ಭಾಗ್ಯ’..!

IIT--01

ಬೆಂಗಳೂರು, ಫೆ.13- ರಾಜ್ಯಾದ್ಯಂತ ಖಾಸಗಿ ಐಟಿಐಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶುಲ್ಕ ಭರಿಸಲು ಸರ್ಕಾರ ಮುಂದಾಗಿದೆ.
ಸದ್ಯಕ್ಕೆ ರಾಜ್ಯದಲ್ಲಿರುವ 65ಕ್ಕೂ ಹೆಚ್ಚು ಖಾಸಗಿ ಐಟಿಐಗಳು ಸರ್ಕಾರದಿಂದ ಓರ್ವ ವಿದ್ಯಾರ್ಥಿಯ ಲೆಕ್ಕದಲ್ಲಿ 2500ರೂ. ಶುಲ್ಕ ಪಡೆಯುತ್ತಿದ್ದು, ಇದನ್ನು ಹೆಚ್ಚಳ ಮಾಡುವಂತೆ ಇಲ್ಲವೆ ಖಾಸಗಿ ಐಟಿಐಗಳಿಗೆ ವೇತನಾನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಹೀಗಾಗಿ ಈ ಎರಡರ ಪೈಕಿ ಒಂದನ್ನು ಜಾರಿಗೊಳಿಸುವ ಲೆಕ್ಕಾಚಾರ ಸರ್ಕಾರದಲ್ಲಿದ್ದು, ಈಗಾಗಲೇ ಬಜೆಟ್ ಪೂರ್ವಭಾವಿ ಸಭೆ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಎರಡು ಬೇಡಿಕೆಗಳ ಪೈಕಿ ಯಾವುದನ್ನು ಈಡೇರಿಸುವುದು ಸೂಕ್ತ ಎಂದು ಯೋಚಿಸುತ್ತಿದ್ದಾರೆ.

ಸರ್ಕಾರದ ಉನ್ನತಾಧಿಕಾರಿಗಳು ವೇತನಾನುದಾನವನ್ನು ಹೆಚ್ಚಳ ಮಾಡುವ ಬದಲು ಖಾಸಗಿ ಐಟಿಐಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿ ವಿದ್ಯಾರ್ಥಿಯ ಶುಲ್ಕ ಪ್ರಮಾಣ ಹೆಚ್ಚಳ ಮಾಡುವಂತೆ ಸಲಹೆ ನೀಡಿದ್ದಾರೆ. ಪ್ರತಿ ವಿದ್ಯಾರ್ಥಿಗಳ ಲೆಕ್ಕದಲ್ಲಿ ಈಗ ನೀಡುತ್ತಿರುವ 2500ರೂ. ಶುಲ್ಕವನ್ನು 5000ಕ್ಕೆ ಏರಿಸಬೇಕು ಮತ್ತು ವ್ಯಾಸಂಗ ಮಾಡುತ್ತಿರುವ ಪ್ರತಿ ವಿದ್ಯಾರ್ಥಿ 500ರೂ. ಶುಲ್ಕವನ್ನು ಸಾಂಕೇತಿಕವಾಗಿ ಭರಿಸುವಂತೆ ನೋಡಿಕೊಳ್ಳಬೇಕು.  ಹೀಗೆ ಮಾಡುವುದರ ಜತೆ ಪ್ರತಿ ವಿದ್ಯಾರ್ಥಿಯ ನೋಂದಣಿ ಸಂದರ್ಭದಲ್ಲಿ ಆಧಾರ್ ಕಾರ್ಡ್ ಕಡ್ಡಾಯ ಮಾಡಿದರೆ ಸರ್ಕಾರ ವಿದ್ಯಾರ್ಥಿಗಳ ಲೆಕ್ಕದಲ್ಲಿ ನೀಡುವ ಶುಲ್ಕ ಪ್ರಮಾಣ ಸಮರ್ಪಕವಾಗಿ ಬಳಕೆಯಾದಂತಾಗುತ್ತದೆ ಎಂಬುದು ಉನ್ನತಾಧಿಕಾರಿಗಳ ವಾದ.

ವೇತನಾನುದಾನಕ್ಕಿಂತ ವಿದ್ಯಾರ್ಥಿಗಳ ಲೆಕ್ಕದಲ್ಲಿ ನೀಡುತ್ತಿರುವ ಶುಲ್ಕದ ಪ್ರಮಾಣ ಹೆಚ್ಚಳ ಮಾಡಿದರೆ ಖಾಸಗಿ ಐಟಿಐಗಳ ಬೇಡಿಕೆಯನ್ನೂ ಈಡೇರಿಸಿದಂತಾಗುತ್ತದೆ. ವಿದ್ಯಾರ್ಥಿಗಳ ಹಿತವನ್ನೂ ಕಾಪಾಡಿದಂತಾಗುತ್ತದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ವಿವರಿಸಿದ್ದಾರೆ.
ನಿರೀಕ್ಷೆಯಂತೆ ನಡೆದರೆ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ 2018-19 ನೆ ಸಾಲಿನ ಬಜೆಟ್‍ನಲ್ಲಿ ಈ ಕುರಿತು ಅಧಿಕೃತ ಘೋಷಣೆಯಾಗಲಿದೆ.

Facebook Comments

Sri Raghav

Admin