ಕಮೀಷನ್ ಆಸೆಗೆ ಹೊರರಾಜ್ಯದ ಗುತ್ತಿಗೆದಾರರಿಗೆ ಸರ್ಕಾರ ಮಣೆ : ಎಚ್‍ಡಿಕೆ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy

ಬೆಂಗಳೂರು, ಫೆ.13-ರಾಜ್ಯ ಸರ್ಕಾರ ಯಾವುದೇ ಕಾಮಗಾರಿ ಕೈಗೆತ್ತಿಕೊಂಡರೂ ಹೊರ ರಾಜ್ಯದವರಿಗೆ ಗುತ್ತಿಗೆ ನೀಡುತ್ತಿದೆ. ಕಮೀಷನ್ ಆಸೆಗೆ ಹೊರರಾಜ್ಯದ ಗುತ್ತಿಗೆದಾರರಿಗೆ ಮಣೆ ಹಾಕಲಾಗುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದ ಎಷ್ಟು ಜನರಿಗೆ ಗುತ್ತಿಗೆ ನೀಡಲಾಗಿದೆ ಎಂಬುದನ್ನು ಸಚಿವರಾದ ಎಂ.ಬಿ.ಪಾಟೀಲ್, ಮಹದೇವಪ್ಪ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಬೇಕು ಹಾಗೂ ಮಾಹಿತಿ ಬಹಿರಂಗಪಡಿಸಬೇಕೆಂದು ಆಗ್ರಹಿಸಿದರು.
ಸ್ಟೀಲ್ ಬ್ರಿಡ್ಜ್ ಯೋಜನೆ ಗುತ್ತಿಗೆ ವಹಿಸಿದ್ದ ಕಂಪೆನಿಗೆ ಕೆಂಪೇಗೌಡ ಲೇಔಟ್ ಕಾಮಗಾರಿ ಗುತ್ತಿಗೆ ನೀಡಲಾಗಿದೆ. ಅಲ್ಲಿ 1ಕಿ.ಮೀ. ರಸ್ತೆ ನಿರ್ಮಾಣಕ್ಕೆ 38 ಕೋಟಿ ವೆಚ್ಚ ಮಾಡುತ್ತಿದ್ದಾರೆ. ಹಾಗಾದರೆ ಆ ರಸ್ತೆಗಳಿಗೆ ಸರ್ಕಾರ ಬೆಳ್ಳಿ ಅಥವಾ ಚಿನ್ನದ ಲೇಪನ ಮಾಡುತ್ತಿದೆಯೇ? ಇವರ ಭ್ರಷ್ಟಾಚಾರಕ್ಕೆ ಇದಕ್ಕಿಂತ ಇನ್ನೊಂದು ಉದಾಹರಣೆ ಬೇಕೇ ಎಂದು ಕಿಡಿಕಾರಿದರು.

17 ರಂದು ಪಟ್ಟಿ ಬಿಡುಗಡೆ:
ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲು ನಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಮೊದಲೇ ಹೇಳಿದ್ದೆ. ಅದರಂತೆ ಇದೇ 17ರಂದು ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು. ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ರಾಜ್ಯಕ್ಕೆ ಬಂದಾಗ ಅವರಿಗೆ ದೊರೆತ ಜನಬೆಂಬಲ ಎಷ್ಟು ಎಂಬುದನ್ನು ನಾನು ಅರಿತಿದ್ದೇನೆ. ಮೋದಿಯವರ ಬೆಂಗಳೂರು ಕಾರ್ಯಕ್ರಮ ನೋಡಿದ್ದೇನೆ. ಅಲ್ಲಿ ಎಷ್ಟು ಜನ ಬಂದಿದ್ದರು ಎಂಬುದು ನನಗೆ ಗೊತ್ತಿದೆ. ರಾಹುಲ್‍ಗಾಂಧಿ ಕಾರ್ಯಕ್ರಮವನ್ನೂ ನೋಡಿದ್ದೇನೆ. ಈ ಎರಡೂ ರಾಷ್ಟ್ರೀಯ ಪಕ್ಷಗಳು ಎರಡು ಮೂರು ಲಕ್ಷ ಜನ ಸೇರಿದ್ದಾರೆಂದು ಹೇಳಿಕೊಳ್ಳುತ್ತವೆ. ಎಷ್ಟು ಜನರಿದ್ದರೆಂಬುದು ನನಗೂ ಗೊತ್ತು ಎಂದು ವ್ಯಂಗ್ಯವಾಡಿದರು.

ಕುಮಾರಪರ್ವ ಸಮಾವೇಶವು ಫೆ.17 ರಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಯಲಹಂಕದಲ್ಲಿ ನಡೆಯಲಿದ್ದು, ಸಮಾವೇಶದಿಂದ ಯಾರಿಗೂ ತೊಂದರೆಯಾಗಬಾರದೆಂಬ ಉದ್ದೇಶದಿಂದ ಅಲ್ಲಿ ಹಮ್ಮಿಕೊಂಡಿದ್ದೇವೆ. ಕನಿಷ್ಠ 10 ಲಕ್ಷ ಜನ ಸೇರುತ್ತಾರೆ ಎಂಬ ವಿಶ್ವಾಸ ನನಗಿದೆ. ಪ್ರತಿನಿತ್ಯ ಅನ್ನದಾಸೋಹ ವ್ಯವಸ್ಥೆಯನ್ನು ಮಾಡಿದ್ದೇವೆ ಎಂದು ಎಚ್‍ಡಿಕೆ ಹೇಳಿದರು. ಸ್ವತಂತ್ರವಾಗಿ ಜೆಡಿಎಸ್ ಅಧಿಕಾರಕ್ಕೆ ಬರಲು ಪ್ರಯತ್ನ ಮಾಡುತ್ತಿದ್ದೇವೆ. ಸಮ್ಮಿಶ್ರ ಸರ್ಕಾರ ಬರಬಹುದು ಎಂಬ ಕೆಲವರ ಭಾವನೆಯಾಗಿದೆ. ನಾಳಿನ ನಮ್ಮ ಪಕ್ಷದ ಕಾರ್ಯಕ್ರಮದಿಂದ ಇದು ದೂರವಾಗಲಿದೆ. ಯಾವುದೇ ಸಮಸ್ಯೆಗೂ ಕಾಲಾವಧಿ ನಿಗದಿಪಡಿಸಿ ಪರಿಹಾರ ಕೊಡುತ್ತೇವೆ. ಈ ವಿಚಾರವನ್ನು ಕಾರ್ಯಕ್ರಮದ ವೇಳೆ ಬಹಿರಂಗಪಡಿಸುತ್ತೇನೆ ಎಂದರು.

ನಮ್ಮ ಪಕ್ಷದ ಹಾಲಿ ಶಾಸಕರೆಲ್ಲರಿಗೂ ಟಿಕೆಟ್ ಕೊಡುವ ಆಶಯವಿತ್ತು. ಕೆಲ ಶಾಸಕರು ವೈಯಕ್ತಿಕ ಕಾರಣ ನೀಡಿ ಬೇರೆಯವರಿಗೆ ಟಿಕೆಟ್ ನೀಡುವಂತೆ ಅವರಾಗಿಯೇ ಹೇಳುತ್ತಿದ್ದಾರೆ. ಆದರೂ ಅವರನ್ನೇ ನಿಲ್ಲುವಂತೆ ನಾನು ಒತ್ತಾಯ ಮಾಡಿದ್ದೇನೆ ಎಂದು ತಿಳಿಸಿದರು. ಸಮಾವೇಶದ ಸಂದರ್ಭದಲ್ಲಿ 100 ಎಲ್‍ಸಿಡಿ ವಾಹನಗಳು ಚಾಲನೆಗೊಳ್ಳಲಿವೆ. ನಮ್ಮ ಪಕ್ಷದ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಈ ವಾಹನಗಳು ಸಂಚರಿಸಲಿವೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಹದಾಯಿ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಪರಿಹಾರಕ್ಕೆ ಕಾಲಾವಧಿ ನಿಗದಿ ಮಾಡುತ್ತೇವೆ ಎಂದು ಹೇಳಿದರು.

ಬಿಎಸ್‍ಪಿ ಜೊತೆ ಮೈತ್ರಿಯನ್ನು ಸಮರ್ಥಿಸಿಕೊಂಡ ಅವರು, ಬಿಎಸ್‍ಪಿ ಎಷ್ಟು ಕ್ಷೇತ್ರಗಳಲ್ಲಿ ಗೆದ್ದಿದೆ ಎಂಬುದು ಮುಖ್ಯವಲ್ಲ. ಎಷ್ಟು ಮತಗಳ ಅಂತರದಲ್ಲಿ ಸೋತಿದ್ದಾರೆ ಎಂಬುದು ಮುಖ್ಯ. ನಮ್ಮ ಅವರ ಶಕ್ತಿಯನ್ನು ಬಳಸಿ 20 ಸೀಟು ಬಿಎಸ್‍ಪಿ ಗೆಲ್ಲುವಂತೆ ಮಾಡುತ್ತೇವೆ ಎಂದರು. ಬಿಎಸ್‍ಪಿ ಮೈತ್ರಿ ರಾಷ್ಟ್ರ ರಾಜಕೀಯ ಬೆಳವಣಿಗೆಗೆ ನಾಂದಿ ಹಾಡುತ್ತದೆ. ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲಾ ಸಮಸ್ಯೆ ಬಗೆಹರಿಯುತ್ತದೆ. ಕಾವೇರಿ ಮಹದಾಯಿ ವಿವಾದವೂ ಬಗೆಹರಿಯುತ್ತದೆ. ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತೇವೆ ಎಂದು ತಿಳಿಸಿದರು. ಸಮಾವೇಶದ ಸಂದರ್ಭದಲ್ಲಿ 10 ವರ್ಷಗಳಲ್ಲಿ ಬಿಜೆಪಿ-ಕಾಂಗ್ರೆಸ್ ಮಾಡಿರುವ ಅನಾಹುತಗಳನ್ನು ಬಹಿರಂಗಪಡಿಸುತ್ತೇನೆ ಎಂದರು.

Facebook Comments

Sri Raghav

Admin