ಕೇರಳದ ಕೊಚ್ಚಿನ್ ಶಿಪ್‍ಯಾರ್ಡ್’ನಲ್ಲಿ ಭಾರಿ ಸ್ಫೋಟ : ಐವರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Kochchin--02
ಕೊಚ್ಚಿನ್, ಫೆ.13-ಕೇರಳದ ಕೊಚ್ಚಿನ್ ಹಡಗುಕಟ್ಟೆಯಲ್ಲಿನ(ಶಿಪ್‍ಯಾರ್ಡ್) ನೌಕೆಯೊಂದರಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭಾರೀ ಸ್ಫೋಟದಲ್ಲಿ ಐವರು ಮೃತಪಟ್ಟು, 13 ಮಂದಿ ತೀವ್ರ ಗಾಯಗೊಂಡಿದ್ದಾರೆ.   ಶಿಪ್‍ಯಾರ್ಡ್‍ನಲ್ಲಿದ್ದ ತೈಲ ಮತ್ತು ಸ್ವಾಭಾವಿಕ ಅನಿಲ ನಿಗಮ (ಒಎನ್‍ಜಿಸಿ) ಸಂಸ್ಥೆಗೆ ಸೇರಿದ ಸಾಗರ್‍ಭೂಷಣ್ (ಸಂಚಾರಿ ಕರಾವಳಿ ಭೈರಿಗೆ ಘಟಕ-ಎಂಒಡಿಯು) ನೌಕೆ ಶಿಪ್‍ಯಾರ್ಡ್‍ನಲ್ಲಿ ದುರಸ್ತಿಗೆ ಒಳಪಟ್ಟಿದ್ದಾಗ ಈ ಸ್ಫೋಟ ಸಂಭವಿಸಿತು.
ಜಲಘಟಕದ ವಾಟರ್‍ಟ್ಯಾಂಕ್ ಬಳಿ ಬೆಂಕಿಯಿಂದ ಭಾರೀ ಸ್ಫೋಟ ಸಂಭವಿಸಿತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.  ಈ ದುರಂತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟು, ಇತರ 12 ಮಂದಿ ತೀವ್ರ ಗಾಯಗೊಂಡರು. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ಹಿರಿಯ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಕಿ ಮತ್ತು ಸ್ಫೋಟದ ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ಮತ್ತು ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದವು.
ಬೆಂಕಿ ಮತ್ತು ಸ್ಫೋಟದ ತೀವ್ರತೆಯಿಂದ ನೌಕೆ ಒಂದು ಭಾಗ ತೀವ್ರ ಹಾನಿಗೀಡಾಗಿದ್ದು, ಅಕ್ಕಪಕ್ಕದ ಇತರ ಹಡಗುಗಳೂ ಜಖಂಗೊಂಡಿವೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ (ಸಿಎಸ್‍ಎಲ್) ವಕ್ತಾರು ತಿಳಿಸಿದ್ದಾರೆ.  ಕೊಚ್ಚಿನ್ ಶಿಪ್‍ಯಾರ್ಡ್ ಭಾರತದ ಪ್ರತಿಷ್ಠಿತ ನೌಕಾ ನಿರ್ಮಾಣ ಮತ್ತು ದುರಸ್ಥಿ ನೆಲೆಯಾಗಿದ್ದು, ಸಾಗರ ಪ್ರದೇಶದಲ್ಲಿ ಯುದ್ಧವಿಮಾನಗಳನ್ನು ಹೊತ್ತೊಯ್ಯುವ ಐಎನ್‍ಎಸ್ ವಿಕ್ರಾಂತ್ ಸಮರ ನೌಕೆಯನ್ನು ಈ ಹಡಗುಕಟ್ಟೆಯಲ್ಲಿ ನಿರ್ಮಿಸಲಾಗಿತ್ತು.

ಸಮುದ್ರ ಪ್ರದೇಶಗಳಲ್ಲಿ ತೈಲ ಬಾವಿಗಳನ್ನು ಕೊರೆಯುವ ಒಎನ್‍ಜಿಸಿಯ ಸಾಗರ್‍ಭೂಷಣ್, ಸಾಗರ್ ವಿಜಯ್ ಮತ್ತು ಸಾಗರ್ ಕಿರಣ್ ಎಂಬ ಮೂರು ಡ್ರಿಲ್ಲಿಂಗ್ ನೌಕೆಗಳ ದುರಸ್ಥಿ ಮತ್ತು ನಿರ್ವಹಣೆಗಾಗಿ ಕೊಚ್ಚಿನ್ ಹಡಗುಕಟ್ಟೆ ಕರಾರು ಗುತ್ತಿಗೆ ಪಡೆದಿತ್ತು.

Facebook Comments

Sri Raghav

Admin