ಕ್ರಿಮಿನಲ್ ಗಳು ಚುನಾವಣಾ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿರುವುದಕ್ಕೆ ಸುಪ್ರೀಂ ತೀವ್ರ ವಿಷಾದ

ಈ ಸುದ್ದಿಯನ್ನು ಶೇರ್ ಮಾಡಿ

Criminal--Poli-01
ನವದೆಹಲಿ, ಫೆ.13-ಶಿಕ್ಷೆಗೆ ಗುರಿಯಾದ ಹಾಗೂ ಚುನಾವಣೆಗಳಲ್ಲಿ ಸ್ಪರ್ಧಿಸಲು ಅನರ್ಹರಾದ ಮುಖಂಡರು ರಾಜಕೀಯ ಪಕ್ಷಗಳ ನಾಯಕರಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಕಳವಳ ಮತ್ತು ಆತಂಕ ವ್ಯಕ್ತಪಡಿಸಿದೆ.  ಇಂಥ ಕಳಂಕಿತ ಮುಖಂಡರು ಆಯ್ಕೆ ಮಾಡುವ ಅಭ್ಯರ್ಥಿಗಳು ಚುನಾವಣೆಗಳಲ್ಲಿ ಸ್ಪರ್ಧಿಸಿ ಜನ ಪ್ರತಿನಿಧಿಗಳೋ ಅಥವಾ ಸರ್ಕಾರದ ಒಂದು ಭಾಗವೋ ಆಗುವ ಸಾಧ್ಯತೆ ಇರುತ್ತದೆ. ಇದು ಚಿಂತೆಗೀಡು ಮಾಡುವ ವಿಚಾರ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ವಿಷಾದಿಸಿದೆ.  ಶಿಕ್ಷೆಗೆ ಗುರಿಯಾದ ವ್ಯಕ್ತಿಗಳು ರಾಜಕೀಯ ಪಕ್ಷಗಳ ಮುಖ್ಯಸ್ಥರಾಗುವುದನ್ನು ನಿಷೇಧಿಸಬೇಕೆಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಕುರಿತು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿತು.

ಜನ ಪ್ರತಿನಿಧಿ ಕಾಯ್ದೆ, 1951ರ ಅಡಿ ಶಿಕ್ಷೆಗೆ ಗುರಿಯಾದ ಓರ್ವ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಹೀಗಿರುವಾಗ ಅಂಥವರು ಒಂದು ರಾಜಕೀಯ ಪಕ್ಷÀ ಸ್ಥಾಪಿಸಲು ಅಥವಾ ಅದರ ಮುಖ್ಯಸ್ಥರಾಗಲು ಹಾಗೂ ಚುನಾವಣೆಗಳಲ್ಲಿ ಸ್ಫರ್ಧಿಸಲಿರುವ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಹೇಗೆ ಸಾಧ್ಯ ಎಂದು ಪೀಠವು ಪ್ರಶ್ನಿಸಿದೆ.  ಶಿಕ್ಷೆಗೆ ಗುರಿಯಾದ ವ್ಯಕ್ತಿಗಳು ರಾಜಕೀಯ ಪಕ್ಷಗಳ ಮುಖ್ಯಸ್ಥರಾಗುವುದನ್ನು ನಿಷೇಧಿಸಬೇಕು ಎಂದು ಕೋರಿ ಹಿರಿಯ ವಕೀಲರಾದ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಪಿಐಎಲ್‍ಗೆ ಚುನಾವಣಾ ಆಯೋಗದ ವಕೀಲ ಅಮಿತ್ ಶರ್ಮ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.

ತಮ್ಮ ಶಿಕ್ಷೆ ವಿರುದ್ಧ ಮೇಲಿನ ನ್ಯಾಯಾಲಯದಲ್ಲಿ ಕೇವಲ ಒಂದು ಮೇಲ್ಮನವಿ ಸಲ್ಲಿಸಿ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲು ಶಿಕ್ಷೆಗೆ ಗುರಿಯಾದ ಸಂಸದರು ಮತ್ತು ಶಾಸಕರಿಗೆ ಅವಕಾಶ ನೀಡುವ ಜನ ಪ್ರತಿನಿಧಿ ಕಾಯ್ದೆಯ ಒಂದು ಉಪಬಂಧವನ್ನು ಲಿಲ್ಲಿ ಥಾಮಸ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ರದ್ದುಗೊಳಿಸಿದ ಸಂಗತಿಯನ್ನು ಪೀಠವು ಉಲ್ಲೇಖಿಸಿದೆ.  ಈ ವಿಷಯಕ್ಕೆ ಸಂಬಂಧಪಟ್ಟಂತೆ ಕಾನೂನಿಗೆ ಕೆಲವು ತಿದ್ದುಪಡಿಗಳನ್ನು ಮಾಡುವ ಅಗತ್ಯವಿದೆ ಎಂಬ ಆಯೋಗದ ಪರ ವಕೀಲ ಶರ್ಮ ವಾದಿಸಿದ್ದರು.

Facebook Comments

Sri Raghav

Admin