ಮಗುವನ್ನು ಕೊಂದು ತಾಯಿ ಆತ್ಮಹತ್ಯೆ, ಮನನೊಂದ ಪತಿಯೂ ನೇಣಿಗೆ ಶರಣು..!

ಈ ಸುದ್ದಿಯನ್ನು ಶೇರ್ ಮಾಡಿ

Suicid-ev-01

ಕನಕಪುರ, ಫೆ.13-ಮೂರು ವರ್ಷದ ಗಂಡು ಮಗುವಿಗೆ ನೇಣುಬಿಗಿದು ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯನ್ನು ಕಂಡು ದಿಗ್ಭ್ರಮೆಗೊಂಡ ಪತಿಯೂ ಕೂಡ ನೇಣಿಗೆ ಶರಣಾಗಿರುವ ದಾರುಣ ಘಟನೆ ಕನಕಪುರ ಬಳಿಯ ವಿರೂಪಸಂದ್ರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ವಾಸಿ ಸುಜಾತ (28), ಮಗ ಗಿರೀಶ್ (3)ಗೆ ನೇಣು ಬಿಗಿದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತ್ನಿ ಮತ್ತು ಮಗನ ಸಾವನ್ನು ಕಂಡು ಶೇಖರ್ (40) ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹತ್ತಾರು ಲಕ್ಷ ರೂ.ಗಳ ಸಾಲಬಾಧೆಯಿಂದ ಕಂಗೆಟ್ಟಿದ್ದ ಈ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.ಘಟನೆಯ ಹಿನ್ನೆಲೆ: ಶೇಖರ್ ಜೀವನೋಪಾಯಕ್ಕಾಗಿ ಸುತ್ತಮುತ್ತಲ ಗ್ರಾಮಗಳಲ್ಲಿ ರೇಷ್ಮೆ ಗೂಡನ್ನು ಖರೀದಿಸಿ ಅದನ್ನು ಕೊಳ್ಳೇಗಾಲ, ಶಿಡ್ಲಘಟ್ಟ ಮತ್ತಿತರೆಡೆ ಗೂಡಿನ ಮಾರುಕಟ್ಟೆ ಮತ್ತು ರೀಲರ್ಸ್‍ಗಳಿಗೆ ಮಾರಾಟ ಮಾಡಿ ಬರುವ ಹಣವನ್ನು ಗೂಡು ಮಾಲೀಕರಿಗೆ ನೀಡುತ್ತಿದ್ದ. ಜೊತೆಯಲ್ಲಿ ಪಾಲುದಾರನಾದ ನಟರಾಜ್ ಎಂಬಾತ ಹಣದ ವ್ಯವಹಾರದಲ್ಲಿ ಸರಿಯಾಗಿ ನಡೆದುಕೊಳ್ಳದೇ ಸಾಲಗಾರರ ಬಾಧೆ ಹೆಚ್ಚಾಗಿ ಪತಿ-ಪತ್ನಿಯರ ನಡುವೆ ಜಗಳಕ್ಕೆ ಕಾರಣವಾಗುತ್ತಿತ್ತು ಎಂದು ತಿಳಿದುಬಂದಿದೆ.
ಕಳೆದ ಎರಡು ದಿನಗಳಿಂದ ಗೂಡುಕೊಟ್ಟವರು ಹಣ ಕೊಡುವಂತೆ ಒತ್ತಾಯಿಸಿದ್ದಾರೆ. ಪಾಲುದಾರ ಮತ್ತು ಕೆಲವರು ಕೊಡಬೇಕಾದ ಹತ್ತಾರು ಲಕ್ಷ ರೂ. ಹಣವನ್ನು ವಾಪಸ್ಸು ನೀಡದೆ ಸತಾಯಿಸುತ್ತಿದ್ದುದರಿಂದ ಮರುಪಾವತಿ ಮಾಡಲು ಆಗುತ್ತಿರಲಿಲ್ಲ. ಇದರಿಂದ ಸಾಲಗಾರರ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಹೆಂಡತಿ ಗಂಡನೊಂದಿಗೆ ಜಗಳ ಮಾಡಿಕೊಂಡು ಮನನೊಂದು ಮಗನಿಗೆ ಮನೆಯ ಸೂರಿಗೆ ನೇಣುಹಾಕಿ ತಾನೂಕೂಡ ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಸಂಜೆ ಮನೆಗೆ ಬಂದ ಶೇಖರ್‍ಗೆ ಪತ್ನಿ-ಮಗ ಮೃತಪಟ್ಟಿರುವುದು ಗೊತ್ತಾಗಿ ದಿಗ್ಭ್ರಮೆಗೊಂಡು ತಾನೂ ಕೂಡ ಮನೆಯ ಮತ್ತೊಂದು ಜಂತಿಗೆ ನೇಣುಹಾಕಿಕೊಂಡಿದ್ದಾನೆ. ನೆರೆಹೊರೆಯವರು ಕಂಡು ಗ್ರಾಮಾಂತರ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.  ಶೇಖರ್‍ನ ಸಾವಿಗೆ ಆತನ ಪಾರ್ಟ್‍ನರ್ ನಟರಾಜ್ ಎಂಬಾತನೇ ಮುಖ್ಯ ಕಾರಣ ಎಂದು ಶೇಖರ್‍ನ ಸ್ನೇಹಿತ ಬೀರೇಶ್ ದೂರಿದ್ದಾರೆ.
ಗ್ರಾಮಸ್ಥರು ದೂರುವಂತೆ ಆರೋಪಿ ಪರಾರಿಯಾಗಿದ್ದಾನೆ. ಆದರೆ ಕುಟುಂಬದ ಸದಸ್ಯರು ನೀಡುವ ಲಿಖಿತ ದೂರಿನ ಮೇರೆಗೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸರ್ಕಲ್ ಇನ್ಸ್‍ಪೆಕ್ಟರ್ ಕೆ.ಮಲ್ಲೇಶ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Facebook Comments

Sri Raghav

Admin