ಆಟೋ, ಟ್ಯಾಕ್ಸಿ , ಲಾರಿ ಚಾಲಕರ ಜೊತೆ ಕುಮಾರಸ್ವಾಮಿ ಸಂವಾದ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy

ಬೆಂಗಳೂರು,ಫೆ.14-ಆಟೋ, ಟ್ಯಾಕ್ಸಿ , ಲಾರಿ ಚಾಲಕರು ನಿತ್ಯ ಅನುಭವಿಸುವ ಸಮಸ್ಯೆಗಳಿಗೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪರಿಹಾರ ಒದಗಿಸಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. ನಗರದ ಪುರಭವನದಲ್ಲಿ ನಡೆದ ಆಟೋ, ಟ್ಯಾಕ್ಸಿ , ಲಾರಿ ಚಾಲಕರು ಮತ್ತು ಮಾಲೀಕರೊಂದಿಗಿನ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೀವು ಅನುಭವಿಸುತ್ತಿರುವ ಕಷ್ಟಗಳು ನನಗೆ ಅರಿವಿದೆ. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಚಾಲಕರು ಅನುಭವಿಸುತ್ತಿರುವ ತೊಂದರೆಗಳನ್ನು ಪ್ರತಿ ತಿಂಗಳು ಆಲಿಸಿ ಪರಿಹಾರ ಕಂಡುಕೊಳ್ಳಲಾಗುವುದು. ಅಧಿಕಾರಿಗಳ ಸಲಹೆಯಂತೆ ಆಡಳಿತ ನಡೆಸುವ ಬದಲು ಜನಸಾಮಾನ್ಯರ ಸಲಹೆಯಂತೆ ಆಡಳಿತ ನಡೆಸುವುದಾಗಿ ಹೇಳಿದರು.

ಆಟೋದಲ್ಲಿ ಕುಳಿತು ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ನಿತ್ಯ ಚಾಲಕರು ಹಗಲು-ರಾತ್ರಿ ಅನುಭವಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು. ಸಮಾಜದ ಪ್ರತಿಯೊಂದು ವರ್ಗದ ಅಭಿವೃದ್ದಿಯೇ ತಮ್ಮ ಆಡಳಿತದ ಮೂಲ ಮಂತ್ರವಾಗಿದೆ ಎಂದು ಹೇಳಿದರು. ಚುನಾವಣೆಗೂ ಮುನ್ನ ಎಲ್ಲ ವರ್ಗದ ಜನರೊಂದಿಗೆ ಸಂವಾದ ನಡೆಸಿ ಆಯಾಯ ವರ್ಗದ ಸಮಸ್ಯೆಗಳನ್ನು ಆಲಿಸಲಾಗುತ್ತಿದೆ. ಈಗಾಗಲೇ ರೈತರು, ವಿದ್ಯಾರ್ಥಿಗಳು, ಉದ್ಯಮಿಗಳ ಜೊತೆ ಸಂವಾದ ನಡೆಸಿ ಸಮಸ್ಯೆ ಮತ್ತು ಸಲಹೆಗಳನ್ನು ಪಡೆಯಲಾಗಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ಈ ಸಲಹೆಗಳಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ ಎಂದರು. ಸಂವಾದ ಕಾರ್ಯಕ್ರಮದಲ್ಲಿ ನೂರಾರು ಆಟೋ, ಟ್ಯಾಕ್ಸಿ , ಚಾಲಕರು ಪಾಲ್ಗೊಂಡು ತಮ್ಮ ತಮ್ಮ ನೋವುಗಳನ್ನು ತೋಡಿಕೊಂಡರು.

Facebook Comments

Sri Raghav

Admin