ಪ್ರೇಮಿಗಳ ದಿನವೇ ಪ್ರೀತಿಗಾಗಿ ಮಾಡಿದ ಮರ್ಡರ್..!

ಈ ಸುದ್ದಿಯನ್ನು ಶೇರ್ ಮಾಡಿ

Murder--01

ದೊಡ್ಡಬಳ್ಳಾಪುರ, ಫೆ.14- ಪ್ರೀತಿ ನಿವೇದನೆ ಮಾಡುವ ಪ್ರೇಮಿಗಳ ದಿನವೇ ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರೇಯಸಿಗೆ ಪ್ರಪೋಸ್ ಮಾಡಲು ಯತ್ನಿಸಿದ ತನ್ನ ಸ್ನೇಹಿತನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ದುರಂತ ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ತಾಲೂಕಿನ ಕಂಚಿಗಾನಹಳ್ಳಿ ಗ್ರಾಮದ ಹರೀಶ್ (21) ಕೊಲೆಯಾದ ನತದೃಷ್ಟನಾದರೆ, ಕೊಲೆ ಮಾಡಿದ ಪಾಗಲ್ ಪ್ರೇಮಿಯನ್ನು ಸಂತೋಷ್ ಎಂದು ಗುರುತಿಸಲಾಗಿದೆ. ಹರೀಶ್ ಮತ್ತು ಸಂತೋಷ್ ಸ್ನೇಹಿತರಾಗಿದ್ದು, ಇವರಿಬ್ಬರು ಒಬ್ಬಳೇ ಯುವತಿಯನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ಇವರಿಬ್ಬರ ನಡುವೆ ಹಲವಾರು ಬಾರಿ ಜಗಳವೂ ನಡೆದಿತ್ತು.

ಪ್ರೇಮಿಗಳ ದಿನ ಇಬ್ಬರೂ ತಾವು ಪ್ರೀತಿಸುತ್ತಿದ್ದ ಯುವತಿಗೆ ಪ್ರಪೋಸ್  ಮಾಡಲು ತೀರ್ಮಾನಿಸಿದ್ದರು. ಆದರೆ, ತನ್ನ ಪ್ರೇಯಸಿಯ ಬೆನ್ನು ಬಿದ್ದಿದ್ದ ಸ್ನೇಹಿತನ ಪ್ರಾಣವನ್ನು ತೆಗೆಯಲು ನಿರ್ಧರಿಸಿದ್ದ ಸಂತೋಷ್, ರಾತ್ರಿ ನಡೆದುಕೊಂಡು ಹೋಗುತ್ತಿದ್ದ ಹರೀಶ್‍ನೊಂದಿಗೆ ಜಗಳ ತೆಗೆದು ಚಾಕುವಿನಿಂದ ಹೊಟ್ಟೆಗೆ ಇರಿದು ಪರಾರಿಯಾದ.

ಇರಿತದಿಂದ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಕುಸಿದು ಬಿದ್ದ ಹರೀಶ್‍ನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾಗಲ್ ಪ್ರೇಮಿ ಸಂತೋಷ್ ಪರಾರಿಯಾಗಿದ್ದು, ಆತನ ಬಂಧನಕ್ಕೆ ಶೋಧ ಆರಂಭಿಸಿರುವ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin